ADVERTISEMENT

23 ಆಧಾರ್ ನೋಂದಣಿ ಕೇಂದ್ರ ಸ್ಥಗಿತ

ಎಂ.ಎನ್.ಯೋಗೇಶ್‌
Published 14 ಜುಲೈ 2017, 8:49 IST
Last Updated 14 ಜುಲೈ 2017, 8:49 IST

ಮಂಡ್ಯ: ಆಧಾರ್‌ (ವಿಶಿಷ್ಟ ಗುರುತಿನ ಸಂಖ್ಯೆ) ನೋಂದಣಿಗೆ ಸಾರ್ವಜನಿಕ ರಿಂದ ಹಣ ವಸೂಲಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ 23 ನೋಂದಣಿ ಕೇಂದ್ರಗಳನ್ನು ಇ– ಆಡಳಿತ ಕೇಂದ್ರ ಬಂದ್‌ ಮಾಡಿದೆ.

ಜಿಲ್ಲೆಗೆ ಇ– ಆಡಳಿತ ಕೇಂದ್ರ ಒಟ್ಟು 24 ಆಧಾರ್‌ ನೋಂದಣಿ ಕಿಟ್‌ ವಿತರಿಸಿತ್ತು. ಅದರಲ್ಲಿ ಜಿಲ್ಲಾಡಳಿತ ಕಚೇರಿಯ ಒಂದು ನೋಂದಣಿ ಕೇಂದ್ರವನ್ನು ಹೊರತುಪಡಿಸಿ ಉಳಿದ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ. ಒಂದು ವಾರದಿಂದ ಕಿಟ್‌ ಮೂಲಕ ಆಧಾರ್‌ ನೋಂದಣಿ ಮಾಡುತ್ತಿದ್ದ ಕೇಂದ್ರಗಳು ಕೆಲಸ ನಿಲ್ಲಿಸಿವೆ.

ಇ–ಆಡಳಿತ ಕೇಂದ್ರ ಜಿಲ್ಲಾಡಳಿತದ ಮೂಲಕ ರಾಜ್ಯದಾದ್ಯಂತ ಕಿಟ್‌ ವಿತರಣೆ ಮಾಡಿತ್ತು. ಅದರಂತೆ ಜಿಲ್ಲಾಡಳಿತ ಖಾಸಗಿ ಏಜೆನ್ಸಿಗಳ ಮೂಲಕ ಆಪರೇಟರ್‌ಗಳನ್ನು ನೇಮಕ ಮಾಡಿಕೊಂಡು ನೋಂದಣಿ ಪ್ರಕ್ರಿಯೆ ನಡೆಸುತ್ತಿತ್ತು. ಸಿಬ್ಬಂದಿಯ ಸಂಬಳವನ್ನು ಇ–ಆಡಳಿತ ಕೇಂದ್ರವೇ ಭರಿಸುತ್ತಿತ್ತು.

ADVERTISEMENT

ಖಾಸಗಿ ಆಪರೇಟರ್‌ಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಒಟ್ಟು 662 ನೋಂದಣಿ ಕೇಂದ್ರಗಳನ್ನು ಬಂದ್‌ ಮಾಡಿದ್ದು, ಅದರಲ್ಲಿ ಜಿಲ್ಲೆಯ 23 ಕೇಂದ್ರಗಳು ಸ್ಥಗಿತಗೊಂಡಿವೆ. ಜಿಲ್ಲಾಡಳಿತ ಕಿಟ್‌ಗಳನ್ನು ವಾಪಸ್‌ ಪಡೆದಿದೆ.

ಪ್ರತಿಯೊಬ್ಬರೂ ಆಧಾರ್‌ ಸಂಖ್ಯೆ ಪಡೆಯಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ವಿಧಾನಗಳ ಮೂಲಕ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಜಿಲ್ಲೆಯ ನಾಡಕಚೇರಿ ಯಲ್ಲಿರುವ 45 ಅಟಲ್‌ ಜೀ ಜನಸ್ನೇಹಿ ಕೇಂದ್ರದಲ್ಲಿ ಆಧಾರ್‌ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜೊತೆಗೆ ಆಧಾರ್‌ ಕಾರ್ಡ್‌ನಲ್ಲಿ ತಪ್ಪು ಇದ್ದರೆ ತಿದ್ದುಪಡಿ ಮಾಡಲು 38 ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ಗಳಿಗೆ ಅನುಮತಿ ನೀಡಲಾಗಿದೆ. ಇವುಗಳ ಜೊತೆಗೆ ಇ–ಆಡಳಿತ ಕೇಂದ್ರ ಆಧಾರ್‌ ಕಿಟ್‌ ಮೂಲಕ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

‘ಕಿಟ್‌ ಮೂಲಕ ಆಧಾರ್‌ ನೋಂದಣಿ ಮಾಡುವ ಆಪರೇಟರ್‌ಗಳು ಉಚಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ಇದೆ. ಆದರೆ, ಕೆಲ ಆಪರೇಟರ್‌ಗಳು  ₹ 50–100ರವರೆಗೆ ಹಣ ವಸೂಲಿ ಮಾಡುತ್ತಿದ್ದರು. ಇದರ ವಿರುದ್ಧ ಸಾರ್ವಜನಿಕರು ಇ– ಆಡಳಿತ ಕೇಂದ್ರಕ್ಕೆ ದೂರು ದಾಖಲಿಸಿದ್ದರು. ಹೀಗಾಗಿ, ಕೇಂದ್ರ ಕ್ರಮ ಕೈಗೊಂಡಿದೆ’ ಎಂದು ನೋಂದಣಿ ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದರು.

ಹೊರೆಯಾದ ಕಿಟ್‌: ಆಧಾರ್‌ ಕಿಟ್‌ಗಳನ್ನು ಹಿಂದಕ್ಕೆ ಪಡೆಯಲು ಹಣ ವಸೂಲಿಯೊಂದೇ ಕಾರಣ ಅಲ್ಲ. ಕಿಟ್‌ ಮೂಲಕ ನಡೆಯುತ್ತಿದ್ದ ನೋಂದಣಿ ಕಾರ್ಯದಿಂದ ಇ–ಆಡಳಿತ ಕೇಂದ್ರಕ್ಕೆ ಹೊರೆಯಾಗಿತ್ತು. ಪ್ರತಿ ಕಿಟ್‌ನಲ್ಲಿ ಕೇವಲ 4–5 ನೋಂದಣಿಯಾಗುತ್ತಿದ್ದ ಕಾರಣ ಕಿಟ್‌ಗಳ ವೆಚ್ಚ ಹಾಗೂ ಸಿಬ್ಬಂದಿ ಸಂಬಳ ಭರಿಸಲು ಕೇಂದ್ರಕ್ಕೆ ಕಷ್ಟವಾಗುತ್ತಿತ್ತು ಎಂಬ ಕಾರಣವನ್ನೂ ಇ– ಆಡಳಿತ ಕೇಂದ್ರ ನೀಡಿದೆ.

ಅಂಚೆಕಚೇರಿಯಲ್ಲೂ ತಿದ್ದುಪಡಿ: ಜುಲೈ 5ರಿಂದ ನಗರದ ಪ್ರಧಾನ ಅಂಚೆ ಕಚೇರಿಯಲ್ಲೂ ಆಧಾರ್‌ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ‘ನಾವು ಹೊಸ ಆಧಾರ್‌ ನೋಂದಣಿ ಮಾಡುತ್ತಿಲ್ಲ. ಆದರೆ, ತಿದ್ದುಪಡಿ ಮಾಡುತ್ತಿದ್ದೇವೆ. ಅದಕ್ಕಾಗಿ ನಮ್ಮ ಸಿಬ್ಬಂದಿಯೊಬ್ಬರು ತರಬೇತಿ ಪಡೆದಿದ್ದಾರೆ’ ಎಂದು ಪೋಸ್ಟ್‌ ಮಾಸ್ಟರ್‌ ವಿ.ಸಿ.ಜಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.