ADVERTISEMENT

ಆದಿವಾಸಿಗಳಿಗೆ ಸವಲತ್ತು ತಲುಪಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:59 IST
Last Updated 5 ಡಿಸೆಂಬರ್ 2016, 9:59 IST

ಮೈಸೂರು: ‘ಆದಿವಾಸಿ ಸಮುದಾಯ­ಗಳಿಗೆ ಸರ್ಕಾರವು ಜಾರಿಗೊಳಿಸಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಅರಿವು ಮೂಡಿಸಿ, ಸವಲತ್ತುಗಳನ್ನು ತಲುಪಿಸಬೇಕಿದೆ’ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.

ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಆದಿವಾಸಿ ಮುಖಂಡ ಬಿರ್ಸಾಮುಂಡಾ ಜಯಂತ್ಯುತ್ಸವ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಆದಿವಾಸಿ ಸಮುದಾಯದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಹಿಂದುಳಿದಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೆ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ನಿಯಮಿತವಾಗಿ ಆಯೋಜಿಸಿ ಸವಲತ್ತುಗಳ ಕುರಿತು ಮಾಹಿತಿ ನೀಡಬೇಕು. ಸವಲತ್ತುಗಳ ಪ್ರಯೋಜನ ಪಡೆದು ಅಭಿವೃದ್ಧಿ ಹೊಂದುವ ಕುರಿತು ಮಾರ್ಗದರ್ಶನ ನೀಡಬೇಕು ಎಂದರು.
ಆದಿವಾಸಿ ನಿಗಮಕ್ಕೆ ಸರ್ಕಾರವು ಹೆಚ್ಚಿನ ಅನುದಾನ ಒದಗಿಸಬೇಕು. ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಹೇಳಿದರು.

ಗಿರಿಜನ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಟಿ.ಟಿ.ಬಸವನಗೌಡ ಮಾತನಾಡಿ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 10ರಷ್ಟು ಬುಡಕಟ್ಟು ಜನರಿದ್ದಾರೆ. ಅವರ ಜೀವನಶೈಲಿ, ಸಂಸ್ಕೃತಿ ಎಲ್ಲವೂ ವೈಶಿಷ್ಟ್ಯ ಇದೆ ಎಂದು ಹೇಳಿದರು.

ಜೇನುಕುರುಬ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕಲ್ಪಿಸುವ ಅಗತ್ಯ ಇದೆ. ಈಗಾಗಲೇ ಮಂಜೂ­ರಾಗಿರುವ ಅನುದಾನದಲ್ಲಿ ಸ್ವಂತ ನೆಲೆ ಮೊದಲಾದವನ್ನು ಕಲ್ಪಿಸಲಾಗುತ್ತಿದೆ. ಗಿರಿಜನ ಸಂಶೋಧನಾ ಸಂಸ್ಥೆ ವತಿಯಿಂದ ಹಲವು ಕಾರ್ಯಕ್ರಮ­ಗಳನ್ನು ಆಯೋಜಿಸಿ ಏಳಿಗೆಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಜೆ.ಕೆ.ಗೋಪಾಲ, ಮಾನವ ಹಕ್ಕುಗಳ ಹೋರಾಟಗಾರ ಎನ್. ಪ್ರಸನ್ನ, ರಾಜ್ಯ ಉಪಾಧ್ಯಕ್ಷ ರಾಮಣ್ಣ, ಮೇದರ ಮುಖಂಡರಾದ ಎಂ.ಅಂಜನಮೂರ್ತಿ, ಲಿಂಗಶೆಟ್ಟಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.