ADVERTISEMENT

ಜ್ಞಾನ ಹೆಚ್ಚಿಸಿದ ವಿಜ್ಞಾನ ಪ್ರದರ್ಶನ

ಸಂತ ಜೋಸೆಫ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಅನಾವರಣ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 5:49 IST
Last Updated 6 ಡಿಸೆಂಬರ್ 2017, 5:49 IST
ಮೈಸೂರಿನ ಸಂತ ಜೋಸೆಫ್‌ ಪಿಯು ಕಾಲೇಜಿನಲ್ಲಿ ಮಂಗಳವಾರ ನಡೆದ ವಿಜ್ಞಾನ ‍ಪ್ರದರ್ಶನದಲ್ಲಿದ್ದ ರಾಕೆಟ್‌ ಮಾದರಿಗಳು
ಮೈಸೂರಿನ ಸಂತ ಜೋಸೆಫ್‌ ಪಿಯು ಕಾಲೇಜಿನಲ್ಲಿ ಮಂಗಳವಾರ ನಡೆದ ವಿಜ್ಞಾನ ‍ಪ್ರದರ್ಶನದಲ್ಲಿದ್ದ ರಾಕೆಟ್‌ ಮಾದರಿಗಳು   

ಮೈಸೂರು: ಇಲ್ಲಿ ಮಕ್ಕಳ ವಿಜ್ಞಾನದ ಮೇಲಿನ ಆಸಕ್ತಿಯು ಕೃತಿಗಿಳಿದಿತ್ತು. ಜ್ಞಾನದ ದಾಹಕ್ಕೆ ರೂ‍‍‍ಪ ಸಿಕ್ಕಿತ್ತು. ದೇಹದ ಭಾಗಗಳು ಕೆಲಸ ಮಾಡುವ ವಿಧಾನಗಳೇನು? ಅಂಗ ರಚನೆ ಹೇಗೆ? ಭೌತ–ರಸಾಯನ ವಿಜ್ಞಾನಗಳ ಸ್ವರೂಪವೇನು ಎಂಬ ಪ್ರಾತ್ಯಕ್ಷಿಕೆ ಇಲ್ಲಿ ಹರಳುಗಟ್ಟಿತ್ತು.

ಇದು ನಗರದ ಸಂತ ಜೋಸೆಫ್‌ ಪಿಯು ಕಾಲೇಜಿನಲ್ಲಿ ಮಂಗಳವಾರ ನಡೆದ ವಿಜ್ಞಾನ ಮತ್ತು ವಾಣಿಜ್ಯ ವಸ್ತುಪ್ರದರ್ಶನದ ನೋಟ. ಕೇವಲ ವಿಜ್ಞಾನ ಮಾತ್ರವೇ ಅಲ್ಲದೆ, ಕಲಾ ವಿಭಾಗದ ವಿದ್ಯಾರ್ಥಿಗಳು ತಾವು ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಪ್ರದರ್ಶನ ನೀಡಿ ಸೈ ಅನ್ನಿಸಿಕೊಂಡರು.

’ಕಸದಿಂದ ರಸ':

ADVERTISEMENT

’ಕಸದಿಂದ ರಸ' ಪರಿಕಲ್ಪನೆಯೊಂದಿಗೆ ಮಕ್ಕಳು ವಿಜ್ಞಾನದ ಮಾದರಿಗಳನ್ನು ನಿರ್ಮಿಸಿದ್ದು ವಿಶೇಷವಾಗಿತ್ತು. ಪಿಸಿಎಂಬಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಎಸ್‌.ರಕ್ಷಿತಾ, ಪ್ರಿಯದರ್ಶಿನಿ, ಸುಕನ್ಯಾ, ಯದುಶ್ರೀ ಅವರು ಮಣ್ಣಿನಿಂದ ನಿರ್ಮಿಸಿದ್ದ ಮಾನವ ಭ್ರೂಣದ ವಿವಿಧ ಹಂತಗಳ ಬೆಳವಣಿಗೆ ಕುರಿತ ಮಾದರಿಯು ಆಕರ್ಷಣೆಯ ಕೇಂದ್ರವಾಗಿತ್ತು. ಸಣ್ಣ ಅಣುವಿನಿಂದ ಹುಟ್ಟುವ ಭ್ರೂಣವು ಮಗುವಾಗಿ ರೂಪುಗೊಳ್ಳುವ ವಿವಿಧ ಹಂತಗಳ ಚಿತ್ರಣ ಮನದಟ್ಟಾಗುವಂತೆ ಇತ್ತು.

ಅಂತೆಯೇ, ಪ್ರಥಮ ವರ್ಷದ ವಿದ್ಯಾರ್ಥಿ ಅಲೆನ್ಸ್ ವಿಲ್ಕಿನ್ಸ್‌ ಅವರು ಮಿದುಳಿನ ರಚನೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ್ದು ವಿಶೇಷವಾಗಿತ್ತು. ಕುರಿಯ ಮಿದುಳ‌ನ್ನು ತೋರಿಸಿ ವಿವರಣೆ ನೀಡಿದ ವಿದ್ಯಾರ್ಥಿಯು ವಿವಿಧ ಭಾಗಗಳ ಕಾರ್ಯಗಳೇನು ಎಂಬುದನ್ನು ತೋರಿಸಿಕೊಡುತ್ತಿದ್ದರು.

ವಿದ್ಯಾರ್ಥಿನಿ ಶಿವಾನಿ ಶೆಟ್ಟಿ ಅವರು ಅಸ್ಥಿಪಂಜರದ ರಚನೆ ಕುರಿತು ಪ್ರಾತ್ಯಕ್ಷಿಕೆ ನೀಡುತ್ತಿದ್ದುದು ಗಮನಸೆಳೆಯಿತು. ಗಾತ್ರದಲ್ಲಿ ಕಿರಿದಾದ ಮಾದರಿಯ ಮೂಲಕ ದೇಹದ ವಿವಿಧ ಭಾಗಗಳಿಗೆ ಮೂಳೆಯ ಸಹಾಯದ ಬಗ್ಗೆ ತಿಳಿಸಿಕೊಟ್ಟರು. ಬಿ.ಎಸ್‌.ಸ್ನೇಹಾ ಮತ್ತು ಸಾರಾ ಅವರು ರಕ್ತದ ಗುಂಪುಗಳನ್ನು ಪರೀಕ್ಷಿಸಿ ತೋರಿಸಿಕೊಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟವನ್ನು ಹೆಚ್ಚಿಸಿದರು.

ಕಲಾ ವಿಭಾಗದವರ ಆಸಕ್ತಿ:

ಪ್ರದರ್ಶನದಲ್ಲಿ ಕಲಾ ವಿಭಾಗದವರ ಉತ್ಸಾಹವೂ ಚನ್ನಾಗಿತ್ತು. ಕನ್ನಡ, ಇಂಗ್ಲಿಷ್‌, ಹಿಂದಿ ಹಾಗೂ ಸಂಸ್ಕೃತ ವಿಭಾಗವರು ತಮ್ಮ ತಮ್ಮ ಕ್ಷೇತ್ರ ನೈಪುಣ್ಯತೆಯನ್ನು ಪ್ರದರ್ಶಿಸಿದರು. ಆಯಾ ಭಾಷೆಗಳಲ್ಲಿ ಪ್ರಕಟವಾಗಿರುವ ಉತ್ತಮ ಗ್ರಂಥಗಳನ್ನು ಪ್ರದರ್ಶನದಲ್ಲಿದ್ದವು. ವಿದ್ಯಾರ್ಥಿನಿ ರಕ್ಷಿತಾ ಅವರು ಹಿಂದಿ ವಿಭಾಗದಲ್ಲಿ ಸಾಹಿತ್ಯ ಭಂಡಾರ ಪ್ರದರ್ಶನ ಹಾಗೂ ವಿವರಣೆ ನೀಡಿದ್ದು ಜ್ಞಾನದ ಮಟ್ಟವನ್ನು ಹೆಚ್ಚಿಸಿತು.

ಶಿಕ್ಷಕರ ಮಾರ್ಗದರ್ಶನ:

ವಿದ್ಯಾರ್ಥಿಗಳಿಗೆ ಶಿಕ್ಷಕರು ನೀಡಿದ ಮಾರ್ಗದರ್ಶನದ ಆಧಾರದ ಮೇಲೆ ಮಾದರಿಗಳನ್ನು ನಿರ್ಮಿಸಲಾಗಿತ್ತು. ಸುಮಾರು 20ಕ್ಕೂ ಹೆಚ್ಚು ವಿಭಾಗಗಳಲ್ಲಿ ಮಾದರಿಗಳಿದ್ದವು. ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಸಂಖ್ಯಾಶಾಸ್ತ್ರ, ಜೀವವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಮಾದರಿಗಳನ್ನು ನಿರ್ಮಿಸಿದ್ದರು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ರಂಜಿತಾ, ‘ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಇಂತಹ ಪ್ರದರ್ಶನ ನಮಗೆ ಅನುಕೂಲಕಾರಿಯಾಗಿದೆ. ನಮ್ಮ ಶಿಕ್ಷಕರ ಶ್ರಮ ಇದರಲ್ಲಿ ಹಿರಿದು’ ಎಂದರು.

***

ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಈ ಪ್ರದರ್ಶನ ಉಪಯೋಗವಾಗಿದೆ. ನಾವೆಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದೇವೆ
         ಬಿ.ಎಸ್‌.ಸ್ನೇಹಾ, ವಿದ್ಯಾರ್ಥಿನಿ, ದ್ವಿತೀಯ ಪಿಯು

***

ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ನಾವು ಪ್ರೋತ್ಸಾಹ ನೀಡುತ್ತಿದ್ದೇವೆ. ಮಕ್ಕಳಿಗೆ ಸಾಹಿತ್ಯ ಜ್ಞಾನ ಮೂಡಿಸುವುದು ನಮ್ಮ ಆದ್ಯತೆ

ವಿನಯ್‌, ಉಪನ್ಯಾಸಕ, ಹಿಂದಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.