ADVERTISEMENT

ಸಂಪೂರ್ಣ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:27 IST
Last Updated 8 ನವೆಂಬರ್ 2017, 9:27 IST

ಮೈಸೂರು: ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಸೇರಿದ ರೈತರು ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ ಸ್ಥಳಕ್ಕೆ ಬಂದು ಅರ್ಜಿ ಸ್ವೀಕರಿಸಿ, ಸರ್ಕಾರಕ್ಕೆ ತಲುಪಿಸುವ ಭರವಸೆ ನೀಡಿದರು. 8 ಕೌಂಟರ್‌ಗಳನ್ನು ಸ್ಥಳದಲ್ಲಿಯೇ ತೆರೆದು ಅರ್ಜಿ ಸ್ವೀಕರಿಸಲಾಯಿತು.

ಅರ್ಜಿ ಸಲ್ಲಿಸಲು ಸಾಲುಗಟ್ಟಿ ನಿಲ್ಲದೇ ಎಲ್ಲ ರೈತರು ಒಮ್ಮೆಗೆ ಮುಗಿಬಿದ್ದಿದ್ದರಿಂದ ಗೊಂದಲ ಉಂಟಾಯಿತು. ಅಲ್ಲಿಯವರೆಗೂ ಅರ್ಜಿ ಸಲ್ಲಿಸಿದವರಿಗೆ ಸ್ವೀಕೃತಿ ನೀಡಲಾಗುತ್ತಿತ್ತು. ಗೊಂದಲ, ಗದ್ದಲಗಳಿಂದ ಸಿಬ್ಬಂದಿಗೆ ಸ್ವೀಕೃತಿ ವಿತರಿ ಸಲು ಆಗಲಿಲ್ಲ. ನಂತರ, ಒಂದೆರಡು ದಿನಗಳಲ್ಲಿ ಸ್ವೀಕೃತಿಯನ್ನು ರೈತರಿಗೆ ತಲುಪಿಸುವ ಭರವಸೆ ನೀಡಲಾಯಿತು.

ADVERTISEMENT

ಅರ್ಜಿ ಏಕೆ?: ರೈತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ‘ರೋಗಗ್ರಸ್ತ ಕೈಗಾರಿಕೆಗಳಿಗೆ ರಿಯಾಯಿತಿ ನೀಡುವಂತೆ ರೈತರಿಗೂ ನೀಡಬೇಕು. ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಲಾಗಿದೆ.

ಬ್ಯಾಂಕಿನವರು ಸಾಲ ವಸೂಲಿಗೆ ಬಂದಾಗ ಇದನ್ನು ತೋರಿಸಲಾಗುವುದು. ಅರ್ಜಿಗೆ ಪ್ರತಿಕ್ರಿಯೆ ಬಂದ ನಂತರವಷ್ಟೇ ಸಾಲ ಮರುಪಾವತಿ ಮಾಡಲಾಗುವುದು. ಒಂದು ವೇಳೆ ಬಲವಂತ ಮಾಡಿದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಅರ್ಜಿ ಸಲ್ಲಿಸಿದರೆ ಸಾಲ ಮನ್ನಾ ಆಗುತ್ತದೆ ಎಂದು ಯಾರೋ ಹೇಳಿದರು, ಅದಕ್ಕಾಗಿ ಅರ್ಜಿ ಸಲ್ಲಿಸಲು ಬಂದೆ’ ಎಂದು ಸಮಾವೇಶದಲ್ಲಿ ಭಾಗವಹಿಸಿದ್ದ ರೈತ ನಂಜುಂಡಸ್ವಾಮಿ ಪ್ರತಿಕ್ರಿಯಿಸಿದರು.. ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಎಂ.ಜಿ.ಚೇತನ್, ಕೂಡನಹಳ್ಳಿ ರಾಜಣ್ಣ, ಜಿ.ವಿ.ಲಕ್ಷ್ಮಿದೇವಿ, ಪಿ.ಸೋಮಶೇಖರ್, ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.