ADVERTISEMENT

‘ಸೀಡ್‌ಬಾಲ್‌ ಹಸಿರು ಕ್ರಾಂತಿ’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 11:10 IST
Last Updated 23 ಏಪ್ರಿಲ್ 2017, 11:10 IST
ಹುಣಸೂರಿನ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ವಿಶ್ವ ಭೂಮಿ ದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಸೀಡ್ ಬಾಲ್‌ ಹಸಿರು ಕ್ರಾಂತಿ’ ಕಾರ್ಯಕ್ರಮದಲ್ಲಿ ಗಣ್ಯರು ಕೆಮ್ಮಣ್ಣಿನಿಂದ ಸೀಡ್‌ ಬಾಲ್‌ ತಯಾರಿಸಿ ವಿವಿಧ ಜಾತಿಯ ಮರಗಳ ಬಿತ್ತನೆ ಬೀಜ ಬಿತ್ತಿದರು
ಹುಣಸೂರಿನ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ವಿಶ್ವ ಭೂಮಿ ದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಸೀಡ್ ಬಾಲ್‌ ಹಸಿರು ಕ್ರಾಂತಿ’ ಕಾರ್ಯಕ್ರಮದಲ್ಲಿ ಗಣ್ಯರು ಕೆಮ್ಮಣ್ಣಿನಿಂದ ಸೀಡ್‌ ಬಾಲ್‌ ತಯಾರಿಸಿ ವಿವಿಧ ಜಾತಿಯ ಮರಗಳ ಬಿತ್ತನೆ ಬೀಜ ಬಿತ್ತಿದರು   

ಹುಣಸೂರು: ‘ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದ್ದು, ಕೆರೆ– ಕಟ್ಟೆ ಆಪೋಷನ ಆಗುತ್ತಿರುವುದರಿಂದ ಬಿದ್ದ ಮಳೆ ಹಿಡಿದಿಟ್ಟಿಕೊಳ್ಳಲು ಸ್ಥಳವಿಲ್ಲದೆ ಬರ ಎದುರಿಸುವಂತಾಗಿದೆ’ ಎಂದು ಪರಿಸರವಾದಿ, ನಟ ಸುರೇಶ್‌ ಹೆಬ್ಳೀಕರ್ ವಿಷಾದ ವ್ಯಕ್ತಪಡಿಸಿದರು.ಇಲ್ಲಿನ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ವಿಶ್ವ ಭೂಮಿ ದಿನದ ಅಂಗವಾಗಿ ಗೋ ಗ್ರೀನ್ ಕ್ಲಬ್, ಸ್ನೇಹಜೀವಿ ಸಂಸ್ಥೆ, ಅರಣ್ಯ ಇಲಾಖೆ ಯಿಂದ ಶನಿವಾರ ಆಯೋಜಿಸಿದ್ದ ‘ಸೀಡ್‌ ಬಾಲ್‌ ಹಸಿರು ಕ್ರಾಂತಿ’ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ವಾರ್ಷಿಕವಾಗಿ ನಾಲ್ಕು ಬಿಲಿಯನ್‌ ಕ್ಯುಬಿಕ್‌ ಮಳೆ ಸುರಿಯುತ್ತದೆ. ಆದರೆ, ಮಳೆ ನೀರು ಹಿಡಿದಿಟ್ಟುಕೊಳ್ಳಲು ಕೆರೆ– ಕಟ್ಟೆ ಇಲ್ಲದಿರುವುದರಿಂದ ಅನಿವಾ ರ್ಯತೆಯಾಗಿ ಬರ ಎದುರಿಸಬೇಕಾಗಿದೆ. ಬೇಕು– ಬೇಡಗಳ ಆಲೋಚನೆ ಮಾಡದೆ ಅನುಭೋಗಿಸುವ ಹಂಬಲದಿಂದಾಗಿ ಅನೇಕ ವಿಷವಸ್ತುಗಳು ಹುಟ್ಟು ಪಡೆದು ಕೊಳ್ಳುತ್ತಿದೆ. ಜಗತ್ತಿನಲ್ಲಿ ಉತ್ಪಾದಿಸುವ ಪ್ರತಿಯೊಂದು ಪದಾರ್ಥವೂ ಭೂಮಿ ಮೇಲಿನ ಸಂಪನ್ಮೂಲದಿಂದ ಸೃಷ್ಟಿಯಾಗಿ ರುವುದು ಎಂಬುದು ಮರೆತು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ಕಣಿವೆಯಲ್ಲಿ ಶೇ 45ರಷ್ಟು ಮಳೆ ಪ್ರಮಾಣ ಕ್ಷೀಣಿಸಿದೆ. ಇದಕ್ಕೆ ಮೂಲ ಕಾರಣ, ಪಶ್ಚಿಮ ಘಟ್ಟದ ಮೇಲಿನ ಒತ್ತಡ ಹಾಗೂ ನದಿ ಒಳಹರಿವು ಕ್ಷೀಣಿಸಿರುವುದು. ಪಶ್ಚಿಮ ಘಟ್ಟ ಸಾಲಿಗೆ ಸೇರಿದ ಕೊಡಗು, ಹಾಸನ, ಮೈಸೂರು, ತಿರುವಂತಪುರ, ವೈನಾಡು ಭಾಗದ ಕಾಡಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗೆ ಅರಣ್ಯ ಕಣ್ಮರೆಯಾಗುತ್ತಿದೆ. ಪಶ್ಚಿಮ ಘಟ್ಟದ ಸಮತೋಲನ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ಬೆಟ್ಟ ಶ್ರೇಣಿಯಲ್ಲಿ ಹಸಿರು ಕಡಿಮೆಯಾ ದರೆ ಮಳೆ ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಪುಷ್ಪಾ ಅಮರನಾಥ್‌ ಮಾತನಾಡಿ, ‘ಸೀಡ್‌ ಬಾಲ್‌ ಹಸಿರು ಕ್ರಾಂತಿ’ಯು ಮರ ಬೆಳೆಸಲು ಸಹಕಾರಿ ಆಗಲಿದೆ. ಪ್ರತಿಯೊಬ್ಬರೂ ಈ ಸಂಪ್ರದಾಯ ಆಚರಿಸಿದರೆ ಭವಿಷ್ಯದಲ್ಲಿ ಉತ್ತಮ ಮಳೆ ಆಗಲಿದೆ. ಅಲ್ಲದೆ, ತಾಪಮಾನ ಹೆಚ್ಚಳಕ್ಕೆ ಕಡಿವಾಣ ಹಾಕಬಹುದು ಎಂದು ಹೇಳಿದರು.10 ಸಾವಿರ ಸೀಡ್ ಬಾಲ್ ಗುರಿ: ಹುಣಸೂರು ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೂ ಕನಿಷ್ಠ 10 ಸಾವಿರ ಸೀಡ್‌ ಬಾಲ್‌ ತಯಾರಿಸುವ ಗುರಿ ನೀಡಲಾಗಿದೆ. ರೈತರೊಂದಿಗೆ ಸೀಡ್‌ ಬಾಲ್‌ ಸಿದ್ಧಪಡಿಸಿ ಹೊಲ, ಗದ್ದೆಗಳ ಬದುವಿನಲ್ಲಿ ಹಾಕುವುದರಿಂದ ಮರ ಬೆಳೆಸಲು ಸಹಕಾರಿ ಆಗಲಿದೆ ಎಂದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್‌, ರಂಗಾಯ ಣದ ಮಾಜಿ ನಿರ್ದೇಶಕ ಜನಾರ್ದನ್ ಮಾತನಾಡಿದರು. ವೇದಿಕೆಯಲ್ಲಿ ಎಚ್‌.ಎಸ್‌.ಪ್ರೇಮಕುಮಾರ್‌, ತಾ.ಪಂ ಅಧ್ಯಕ್ಷೆ ಪದ್ಮಾ, ಗುಲ್ನಾಜ್‌, ಪ್ರಸನ್ನ, ಇ.ಒ.ಕೃಷ್ಣಕುಮಾರ್‌ ಇದ್ದರು.ಸೀಡ್ ಬಾಲ್ ತಯಾರಿಸಲು ಕಾಲೇಜು ವಿದ್ಯಾರ್ಥಿನಿಯರು ಮುಗಿ ಬಿದ್ದರು. ಹೊಂಗೆ, ಅಂಟುವಾಳ, ಆಲೆ, ನಲ್ಲಿ, ಹುಣಸೆ, ಹಲಸು, ಬಿದಿರು ಬೀಜದ ಸೀಡ್ ಬಾಲ್ ತಯಾರಿಸಲಾಯಿತು. ಶಾಮಿಯಾನ ಇಲ್ಲದೆ ಮರದ ನೆರಳಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿತ್ತು.
ಸೀಡ್ ಬಾಲ್: ಇದು ಮಣ್ಣಿನ ಉಂಡೆ. ಕೆಮ್ಮಣ್ಣು, ಕೊಟ್ಟಿಗೆ ಗೊಬ್ಬರ, ಗಂಜಲ ಮತ್ತು ಮರಳು ಮಿಶ್ರಣದ ಮುದ್ದೆ. ಈ ಮಣ್ಣನ್ನು ಉಂಡೆ ಕಟ್ಟಿ ಅದರಲ್ಲಿ ಸಂಸ್ಕರಿಸಿದ ಬೀಜ ಹಾಕಿ ಒಣಗಿಸಬೇಕು. ಬಳಿಕ ಮಳೆಗಾಲದಲ್ಲಿ ಭೂಮಿಗೆ ಹಾಕುವುದರಿಂದ ಸಮೃದ್ಧವಾಗಿ ಸಸಿ ಬೆಳೆಯಲಿದೆ. ಇದನ್ನು ಸೀಡ್‌ ಬಾಲ್‌ ಹಸಿರು ಕ್ರಾಂತಿ ಎಂದು ಕರೆಯಲಾ ಗುತ್ತದೆ. ಇದರಿಂದ ಕೇವಲ ₹ 1 ಕ್ಕೆ ಸಸಿ ಉತ್ಪಾದಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.