ADVERTISEMENT

‘ಪ್ರಯಾಣಿಕರಿಗೆ ನವ ಸೌಕರ್ಯಕ್ಕೆ ಸಿದ್ಧತೆ’

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2014, 8:41 IST
Last Updated 23 ಆಗಸ್ಟ್ 2014, 8:41 IST

ಮೈಸೂರು: ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮೈಸೂರು ರೈಲ್ವೆ ವಿಭಾಗವು ನಾಲ್ಕು ರೈಲುಗಳಲ್ಲಿ ‘ವೈರ್‌ಲೆಸ್‌ ಫಿಡಿಲಿಟಿ (ವೈ–ಫೈ)’ ಸೌಕರ್ಯವನ್ನು  ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ‘ವೋಡಾಫೋನ್’ ಮತ್ತು ‘ಏರ್‌ಟೆಲ್‌’ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜ್‌ಕುಮಾರ್‌ ಲಾಲ್‌ ತಿಳಿಸಿದರು.

ಇಲ್ಲಿನ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಶುಕ್ರವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ವೈ–ಫೈ’ ಸೌಕರ್ಯವನ್ನು ಚಾಮುಂಡಿ, ಟಿಪ್ಪು, ಬೆಂಗಳೂರು–ಧಾರವಾಡ, ಬೆಂಗಳೂರು– ಶಿವಮೊಗ್ಗ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ.

ಪ್ರಯಾಣಿಕರು ಮುಂಗಡ ಪಾವತಿ (ಪ್ರಿಪೇಯ್ಡ್‌) ವಿಧಾನದಲ್ಲಿ ಹಣ ಪಾವತಿಸಿ ಈ ಸೌಕರ್ಯ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಎನ್‌.ಆರ್‌ . ಮೊಹಲ್ಲಾ ಅಂಚೆ ಕಚೇರಿಯಲ್ಲಿ ಗಣಕೀಕೃತ ಟಿಕೆಟ್‌ ಬುಕ್ಕಿಂಗ್ ಕೌಂಟರ್‌: ಪ್ರಯಾಣಿಕರು ಟಿಕೆಟ್‌ ಬುಕ್ಕಿಂಗ್‌ಗೆ ಅನುಕೂಲವಾಗುವಂತೆ ನಗರದ ಎನ್‌.ಆರ್‌. ಮೊಹಲ್ಲಾದ ಅಂಚೆ ಕಚೇರಿಯಲ್ಲಿ ಅತ್ಯಾಧುನಿಕ ಗಣಕೀಕೃತ ಟಿಕೆಟ್‌ ಬುಕ್ಕಿಂಗ್ ಕೌಂಟರ್‌ವೊಂದನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಈ ಕೌಂಟರ್‌ನಲ್ಲಿ ಕಾಯ್ದಿರಿಸಿದ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ಯಾತ್ರಿ ಟಿಕೆಟ್‌ ಸುವಿಧಾ ಕೇಂದ್ರ (ವೈಟಿಎಸ್‌): ಟಿಕೆಟ್‌ ಕೊಳ್ಳಲು ಅನುಕೂಲವಾಗುವಂತೆ ವಿವಿಧ ಪ್ರದೇಶಗಳಲ್ಲಿ ಯಾತ್ರಿ ಟಿಕೆಟ್‌ ಸುವಿಧಾ ಕೇಂದ್ರಗಳನ್ನು ತೆರೆಯಲಾಗುವುದು.

ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಈ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಟೆಂಡರ್‌ ಆಹ್ವಾನಿಸಲಾಗುವುದು ಎಂದು ಅವರು ವಿವರ ನೀಡಿದರು.

‘ಬೇಸ್‌ ಕಿಚನ್‌’: ಮೈಸೂರಿನಲ್ಲಿ ‘ಬೇಸ್‌ ಕಿಚನ್‌’ ತೆರೆದು ರೈಲು ಗಾಡಿಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥ ಲಭಿಸುವಂತೆ ಮಾಡಲು ಕ್ರಮ ವಹಿಸಲಾಗಿದೆ. ಈ ಕೇಂದ್ರದಲ್ಲಿ ಆಹಾರ ಖಾದ್ಯಗಳನ್ನು ತಯಾರಿಸಿ ‘ಹಾಟ್‌ ಬಾಕ್ಸ್‌’ನಲ್ಲಿ ಒಯ್ದು ರೈಲಿನಲ್ಲಿ ಪ್ರಯಾಣಿಕರಿಗೆ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನು ಆರು ತಿಂಗಳಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ. ಆರಂಭಿಕ ಹಂತದಲ್ಲಿ  ದೂರದ ಊರುಗಳಿಗೆ ತೆರಳುವ ರೈಲುಗಳಲ್ಲಿ ಈ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.

‘ಸಬ್‌ ವೇ’ ಗೋಡೆಗಳಲ್ಲಿ ಕಲೆ– ಸಂಸ್ಕೃತಿ ಅನಾವರಣ: ನಗರದ ರೈಲು ನಿಲ್ದಾಣದಲ್ಲಿನ ಎಲ್ಲ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ ‘ಸಬ್ ವೇ’ ನಿರ್ಮಾಣಕ್ಕೆ ಶೀಘ್ರದಲ್ಲಿ ಟೆಂಡರ್‌ ಆಹ್ವಾನಿಸಲಾಗುವುದು. ಈ ಸುರಂಗ ಮಾರ್ಗದ ಗೋಡೆಗಳಲ್ಲಿ ಕರ್ನಾಟಕ ಮತ್ತು ಮೈಸೂರಿನ ಕಲೆ–ಸಂಸ್ಕೃತಿಯ ಚಿತ್ರ–ಮಾಹಿತಿ ಅನಾವರಣಗೊಳಿಸಲಾಗುವುದು ಎಂದು ಹೇಳಿದರು.  ಮೈಸೂರು ರೈಲ್ವೆ ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಕೆ. ಅನಿಲ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.