ADVERTISEMENT

ಕನಿಷ್ಠ ಕೂಲಿ ನಿಗದಿಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 8:44 IST
Last Updated 23 ಏಪ್ರಿಲ್ 2017, 8:44 IST

ರಾಯಚೂರು: ಅಸಂಘಟಿತ ಕ್ಷೇತ್ರದ ಕಾರ್ಮಿಕರ ಕನಿಷ್ಠ ಕೂಲಿ ನಿಗದಿ ಮಾಡಲು ಸಮಿತಿ ರಚಿಸಲು ಆಗ್ರಹಿಸಿ ಎಂದು  ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಸದಸ್ಯರು ಟಿಪ್ಪುಸುಲ್ತಾನ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಅವರು, ‘ದೆಹಲಿಯಲ್ಲಿ ಅಕುಶಲ ಕಾರ್ಮಿಕರಿಗೆ ದಿನಕ್ಕೆ ₹513 ನೀಡಬೇಕು ಎಂದು‘ ಸರ್ಕಾರ ಆದೇಶ ನೀಡಿದೆ. ಆದರೆ, ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಯಾವುದೇ ಆಯೋಗ ರಚನೆ ಮಾಡಿದೇ ಅನ್ಯಾಯ ಮಾಡಿದೆ’ ಎಂದು ಆರೋಪಿಸಿದರು.

‘ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ಮಾಡಿ ವೇತನ ಹೆಚ್ಚಿಸುವ ತೀರ್ಮಾನ ಈಗಾಗಲೇ ಕೈಗೊಳ್ಳಲಾಗಿದೆ. ಕಳೆದ ವರ್ಷ ಶಾಸಕರ ವೇತನವೂ ಏರಿಕೆಯಾಗಿದೆ. ಕೂಡಲೇ ಅಸಂಘಟಿತ ಕ್ಷೇತ್ರದ ಕಾರ್ಮಿಕರನ್ನು ಗುರುತಿಸಿ ಗುರುತಿನ ಚೀಟಿ ನೀಡಬೇಕು’  ಎಂದು ಆಗ್ರಹಿಸಿದರು.‘ರಾಜ್ಯದಲ್ಲಿ ಕಾರ್ಮಿಕರ ಕಾಯ್ದೆ ಬಹಿರಂಗವಾಗಿ ಉಲ್ಲಂಘನೆ ಮಾಡಲಾಗುತ್ತಿದೆ. ಇದರಿಂದ ಕಾರ್ಮಿಕರಿಗೆ ಹಕ್ಕುಗಳು ದೊರೆಯುತ್ತಿಲ್ಲ. ಕಟ್ಟಡ ಕಾರ್ಮಿಕ ಮಂಡಳಿಯಲ್್ಲಿ ಕಾರ್ಮಿಕರನ್ನು ನೋಂದಾಯಿಸಲು ಕಾರ್ಮಿಕ ಇಲಾಖೆ ವಿಫಲವಾಗಿದೆ. ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ದಿನಕ್ಕೆ 20 ಕಾರ್ಮಿಕರನ್ನು ಮಾತ್ರ ನೋಂದಣಿ ಮಾಡಲಾಗುವುದು ಎಂದು ಹೇಳುತ್ತಾರೆ.

ಒಂದು ತಿಂಗಳಲ್ಲಿ ಎಲ್ಲ ಕಾರ್ಮಿಕರ ನೋಂದಣಿ ಮಾಡಬೇಕು’ ಎಂದು ಒತ್ತಾಯಿಸಿದರು.‘ತುಂಗಭದ್ರಾ ನೀರಾವರಿ ವಲಯದ ಹಂಗಾಮಿ ಕಾರ್ಮಿಕರ ಬೇಡಿಕೆಗಳು ಕಾನೂನಾತ್ಮಕವಾಗಿದ್ದು, ಬೇಡಿಕೆ ಈಡೇರಿಸಬೇಕು. ಸಂಘಟಿತ ಕ್ಷೇತ್ರ ಹಾಗೂ ಸರ್ಕಾರದಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಕಾರ್ಮಿಕರ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಗುರುರಾಜ, ಮೋಕ್ಷಮ್ಮ, ದುರ್ಗಶ್ರೀ, ಶಾಂಭವಿ, ಹುಲಿಗೆಮ್ಮ, ಮರಿಯಮ್ಮ, ರಂಗಮ್ಮ, ಸಾವಿತ್ರಿ, ಮಾಳೆಮ್ಮ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.