ADVERTISEMENT

ಚಿಕುನ್‌ಗುನ್ಯಾ: ಗ್ರಾಮಸ್ಥರ ಪರದಾಟ

ನಾಗಲಾಪುರ ಗ್ರಾಮ, ಬಿಗಡಾಯಿಸಿದ ಸಮಸ್ಯೆ, ವೈದ್ಯರ ನೆರವಿಲ್ಲದೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 6 ಜುಲೈ 2015, 6:57 IST
Last Updated 6 ಜುಲೈ 2015, 6:57 IST

ಮುದಗಲ್ : ನಾಗಲಾಪುರ ಗ್ರಾಮದಲ್ಲಿ ಒಂದು ವಾರದಿಂದ ಚಿಕುನ್‌ಗುನ್ಯಾ  ರೋಗ ಬಾಧೆ ತೀವ್ರಗೊಂಡಿದ್ದು, ರೋಗಿಗಳಿಗೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಗ್ರಾಮವು ಇಲ್ಲಿನ ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತಿದೆ.

ಗ್ರಾಮದಲ್ಲಿ ರೋಗ ಉಲ್ಬಣಗೊಂಡಿದ್ದರೂ, ಯಾವ ವೈದ್ಯರು ಗ್ರಾಮಕ್ಕೆ ಭೇಟಿ ನೀಡಿಲ್ಲ. ವಿಚಿತ್ರ ಎಂದರೆ ಮಾಕಾಪುರ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಇದು ಜನರನ್ನು ಕಂಗೆಡಿಸಿದೆ. ‘ರೋಗಿಗಳು  ಖಾಸಗಿ ಆಸ್ಪತ್ರೆಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಸಹಾಯಕಿ ಇದ್ದು, ರೋಗಿಗಳ ಮನೆಗೆ ಭೇಟಿ ನೀಡಿಲ್ಲ. ಆರೋಗ್ಯ ಸಹಾಯಕಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ’ ಎಂದು ಗ್ರಾಮಸ್ಥ ಹನುಮಂತ ದೂರಿದರು.

ರೋಗಕ್ಕೆ ಒಳಗಾದ ಚಿಕ್ಕಮಕ್ಕಳು, ವಯೋವೃದ್ಧರು ಸೇರಿ ಇನ್ನಿತರ ಜನರಿಗೆ ಕೈ ಕಾಲು ಹಿಡಿದುಕೊಂಡು, ಸರಿಯಾಗಿ ನಡೆಯಲು ಬರುತ್ತಿಲ್ಲ. ಆಹಾರ ಸೇವಿಸಲೂ ಆಗುತ್ತಿಲ್ಲ. ಚಳಿ ಜ್ವರ ಬರುವುದರಿಂದ ರೋಗಿಗಳು ತೀವ್ರ ನೋವು ಅನುಭವಿಸುತ್ತಿದ್ದಾರೆ. ಗ್ರಾಮದ ವಿವಿಧ ಕಾಲೊನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿಲ್ಲ. ಬಚ್ಚಲು, ಚರಂಡಿ, ನಳದ ಹೆಚ್ಚುವರಿ ನೀರುಗಳು ರಸ್ತೆ ಮೇಲೆ ಹರಿಯುತ್ತಿವೆ. ನಳಗಳಿಗೆ ಸಂಪರ್ಕ ಕಲ್ಪಿಸುವ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿದೆ.

ಈ ಪೈಪ್‌ಗೆ ಚರಂಡಿ ನೀರು ಸೇರುತ್ತಿವೆ. ಇದೆ ನೀರು ನಲ್ಲಿಗಳಿಗೆ ಸರಬರಾಜುವಾಗುತ್ತಿದೆ. ಈ ನೀರು ಸೇವಿಸುವಂತಹ ಸ್ಥಿತಿ ಇದೆ. ಕಾಲೊನಿಯಲ್ಲಿ ಕಟ್ಟಿ ನಿಂತ ನೀರಿನಲ್ಲಿ  ಸೊಳ್ಳೆ ಹುಟ್ಟಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮ ಹನುಮೇಶ ನಾಯಕ, ದುರಗಮ್ಮ ಮಡಿವಾಳರ, ನಾಗನಗೌಡ ಕೊಂಗವಾಡ, ಹನುಮಂತ ಸೇರಿದಂತೆ ಇನ್ನಿತರ 50ಕ್ಕೂ ರೋಗಿಗಳು ಚಿಕುನ್‌ಗುನ್ಯಾ ಕಾಯಲೆಯಿಂದ ಬಳಲುತ್ತಿದ್ದಾರೆ.

ಕೆಲ ಕಾಲೊನಿಗಳಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಿಸಿ ಕೊಡಿ ಎಂದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ನಿರಂತರ ಮನವಿ ಮಾಡಿದ್ದರೂ  ಕ್ರಮಕೈಗೊಂಡಿಲ್ಲ ಎಂದು ಸೌಲಭ್ಯ ವಂಚಿತ ಕಾಲೊನಿ ನಿವಾಸಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.