ADVERTISEMENT

ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 6:41 IST
Last Updated 16 ಸೆಪ್ಟೆಂಬರ್ 2017, 6:41 IST
ರಾಯಚೂರು ನಗರದಲ್ಲಿ ಸುರಿದ ಮಳೆಯಿಂದ ಕೇಂದ್ರ ಬಸ್‌ ನಿಲ್ದಾಣ ಎದುರು ಮುಖ್ಯರಸ್ತೆಯಲ್ಲಿ ರಸ್ತೆತಗ್ಗಿನಲ್ಲಿ ನೀರು ನಿಂತಿರುವುದು
ರಾಯಚೂರು ನಗರದಲ್ಲಿ ಸುರಿದ ಮಳೆಯಿಂದ ಕೇಂದ್ರ ಬಸ್‌ ನಿಲ್ದಾಣ ಎದುರು ಮುಖ್ಯರಸ್ತೆಯಲ್ಲಿ ರಸ್ತೆತಗ್ಗಿನಲ್ಲಿ ನೀರು ನಿಂತಿರುವುದು   

ರಾಯಚೂರು: ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೂ ಭಾರಿ ಮಳೆ ಸುರಿದಿದ್ದು, ಪ್ರಮುಖವಾಗಿ ಮಾನ್ವಿ ತಾಲ್ಲೂಕಿನಲ್ಲಿ ಎಡೆಬಿಡದೆ ಮಳೆಯಾಗಿ ಅತಿಹೆಚ್ಚು ತೊಂದರೆ ಉಂಟಾಗಿದೆ.

‘ಮುಂಗಾರು ಮುಕ್ತಾಯವಾಗುವ ಹಂತದಲ್ಲಿ ಮಳೆ ಬಿದ್ದಿರುವುದರಿಂದ ಭತ್ತವೊಂದನ್ನು ಹೊರತುಪಡಿಸಿ ಇನ್ನುಳಿದ ಬೆಳೆಗಳಿಗೆ ಅನುಕೂಲವಾಗುವುದಿಲ್ಲ. ಬೆಳೆಗಳಲ್ಲಿ ನೀರು ಕೊಂಡಿರುವುದು ಒಣಗುವವರೆಗೂ ಮತ್ತೆ ಮಳೆಯಾಗದಿದ್ದರೆ ಹಾನಿಯಿಂದ ತಪ್ಪಿಸಿಕೊಳ್ಳಬಹುದು. ಒಂದೇ ವೇಳೆ ಮಳೆ ಮುಂದುವರೆದರೆ ಬೆಳೆಗಳು ಕುಂಠಿತವಾಗುತ್ತವೆ’ ಎಂಧು ಜಿಲ್ಲೆಯ ರೈತರು ಹೇಳುತ್ತಿರುವ ಮಾತಿದು.

ಭಾರಿ ಮಳೆಯಿಂದ ಮಾನ್ವಿ, ಸಿರವಾರ, ಮಸ್ಕಿ, ಸಿಂಧನೂರಿನ ಕೆಲವು ಜನವಸತಿ ಪ್ರದೇಶಗಳಲ್ಲಿದ್ದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಮನೆಗಳಲ್ಲಿ ನೀರು ಸೇರಿಕೊಂಡಿದ್ದು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ರಾಯಚೂರು ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಬೆಳೆಗಳು ಸಂಪೂರ್ಣ ನೀರಿನಲ್ಲಿ ನಿಂತಿವೆ.

ADVERTISEMENT

ಜಿಲ್ಲೆಯಲ್ಲಿ ಮುನ್ನಚ್ಚರಿಕೆ ಕೈಗೊಳ್ಳುವುದಕ್ಕಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ತಾಲ್ಲೂಕಿನ ವಿವಿಧ ಅಧಿಕಾರಿಗಳಿಗೆ ಸೂಚನೆ ರವಾನಿಸಿದ್ದಾರೆ. ಅಲ್ಲದೆ, ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಾನ್ವಿ ವರದಿ: ಎಡೆಬಿಡದೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲ್ಲೂಕಿನ ಗ್ರಾಮೀಣ ಪ್ರದೇಶದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಸೇತುವೆಗಳ ಮೇಲಿನ ಮೂಲಕ ವಾಹನ ಸಂಚಾರ ಸ್ಥಗಿತವಾಗಿದೆ.

ತಾಲ್ಲೂಕಿನ ಹಿರೇಕೊಟ್ನೇಕಲ್, ಬ್ಯಾಗವಾಟ, ಬಾಗಲವಾಡ ಸೇರಿದಂತೆ ವಿವಿಧೆಡೆ ಮಳೆ ನೀರು ರಸ್ತೆಗೆ ನುಗ್ಗಿದ್ದು ಸಾರ್ವಜನಿಕರು ಸಂಚಾರಕ್ಕಾಗಿ ಪರದಾಡುವಂತಾಗಿದೆ. ಮಾನ್ವಿ ಪಟ್ಟಣದಲ್ಲಿ ವಿವಿಧೆಡೆ ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ.

ಪಟ್ಟಣದ 2ನೇ ವಾರ್ಡ್‌ನಲ್ಲಿ ಹನುಮಂತ ಎಂಬುವವರ ಮನೆ ಗೋಡೆ ಕುಸಿದು ಕುಟುಂಬದ ಎಂಟು ಜನ ಸದಸ್ಯರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣ, ಬಾಲಕಿಯರ ವಸತಿ ನಿಲಯಗಳು ಜಲಾವೃತಗೊಂಡಿವೆ.

ತಾಲ್ಲೂಕಿನ ನಂದಿಹಾಳ ಹಳ್ಳಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ನಿರ್ಮಿಸಲಾಗುತ್ತಿರುವ ವಿದ್ಯಾರ್ಥಿಗಳ ಸರ್ಕಾರಿ ವಸತಿ ನಿಲಯ ಕಾಮಗಾರಿ ಸ್ಥಳ ಶುಕ್ರವಾರ ಜಲಾವೃತಗೊಂಡಿದೆ. ವಿಧಾನ ಪರಿಷತ್ ಸದಸ್ಯ ಎನ್‌.ಎಸ್‌.ಬೋಸರಾಜು, ಶಾಸಕ ಹಂಪಯ್ಯ ನಾಯಕ ಶುಕ್ರವಾರ ಪಟ್ಟಣದಲ್ಲಿ ನಿರಂತರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಂದ ಭೇಟಿ ನೀಡಿ ವೀಕ್ಷಿಸಿದರು.

ಸಿರವಾರ ತಾಲ್ಲೂಕು ವರದಿ: ಪಟ್ಟಣದಲ್ಲಿ ಸುರಿದ ಸರಾಸರಿ 162.4 ಮಿಲಿಮೀಟರ್‌ ಭಾರಿ ಮಳೆಯಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿ ಜನರು ರಾತ್ರಿ ಜಾಗರಣೆ ಮಾಡಿದ್ದಾರೆ. ಗುರುವಾರ ಮಧ್ಯರಾತ್ರಿ ಗುಡುಗು, ಸಿಡಿಲನಿಂದ ಕೂಡಿದ ಭಾರಿ ಮಳೆ ಶುಕ್ರವಾರ ಬೆಳಿಗ್ಗೆ 7.30 ರವರೆಗೆ ಎಡಬಿಡದೆ ಮಳೆ ಬಿದ್ದಿದೆ.

ಐದು ವರ್ಷಗಳಿಂದ ನೀರು ಕಾಣದಿದ್ದ ಪಟ್ಟಣದ ಬಂಗ್ಲೆ ಹಳ್ಳ ಮತ್ತು ಗದ್ಯಹಳ್ಳಗಳು ತುಂಬಿ ಹರಿಯುವುದನ್ನು ಜನರು ಕಣ್ತುಂಬಿಕೊಂಡು ಸಂತಸಪಟ್ಟರು. ತಗ್ಗು ಪ್ರದೇಶದಲ್ಲಿರುವ ನೀಲಮ್ಮ ಕಾಲೋನಿ, ಜೈ ಭೀಮ ನಗರ, 5ನೇ ವಾರ್ಡಿನಲ್ಲಿ ಮನೆ, ಜೋಪಡಿಗಳಿಗೆ ಮಳೆ ನೀರು ನುಗ್ಗಿದ್ದರಿಂದ ಧವಸ, ಧಾನ್ಯ ಹಾಗೂ ಮನೆವಸ್ತುಗಳು ನೀರು ಪಾಲಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಗುರುವಾರ ರಾತ್ರಿಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನರು ತೊಂದರೆ ಅನುಭವಿಸುವಂತಾಯಿತು.

ಅಧಿಕಾರಿಗಳ ಭೇಟಿ: ಜಲಾವೃತಗೊಂಡ ಜೋಪಡಿಗಳ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಬಡಿಗೇರ್, ಪಟ್ಟಣ ಪಂಚಾಯಿತಿ ಸದಸ್ಯರಾದ ದೇವರಾಜ ಸುಂಕೇಶ್ವರಹಾಳ್, ಕಾಸಿಂ ಮೋತಿ, ಕೃಷ್ಣ ನಾಯಕ ಮುಖಂಡ ಬಸವರಾಜ ಗಡ್ಲ ಭೇಟಿ ನೀಡಿ ಪರಿಶೀಲಿಸಿದರು. ಭತ್ತ ನಾಟಿ ಮಾಡಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಪಟ್ಟಣ ಸಮೀಪದ ಚಾಗಭಾವಿ, ಕಡದಿನ್ನಿ, ಸಣ್ಣ ಹೊಸೂರು ಹಳ್ಳಗಳು ತುಂಬಿ ಹರಿದು ರಸ್ತೆ ಸಂಪರ್ಕ ಕಡಿತವಾಗಿದೆ. ಭತ್ತದ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿವೆ. ಮಳೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಶಕ್ತಿನಗರ ವರದಿ: ದೇವಸೂಗೂರು ಹೋಬಳಿ ಮಟ್ಟದ ಹಳ್ಳಿಗಳಲ್ಲಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಕಡಿತಗೊಂಡಿವೆ. ಜೇಗರಕಲ್ –ಹೊಸಪೇಟೆ ಮಧ್ಯೆ ಇರುವ ಹಳ್ಳ ಉಕ್ಕಿ ಹರಿಯುತ್ತಿದೆ.

ಈ ಮಾರ್ಗಕ್ಕೆ ಹೋಗುವ ತಿಮ್ಮಾಪುರ, ಹೆಂಬೆರಾಳ, ಜಿ.ಹನುಮಪುರ, ಮೀರಾಪುರ, ಮಲ್ಲಾಪುರ ಗ್ರಾಮಗಳಿಗೆ ತೆರಳುವ ರಸ್ತೆ ಸಂಚಾರ ಹಾಗೂ ಗಂಜಳ್ಳಿ ಹಳ್ಳ ಭರ್ತಿಯಾಗಿ ರುವುದರಿಂದ ದೇವಸೂಗೂರು, ಯದ್ಲಾಪೂರ, ಶಕ್ತಿನಗರಕ್ಕೆ ತೆರಳುವ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆ ಶುಕ್ರವಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಜೇಗರಕಲ್ ಸೀಮಾಂತರದಲ್ಲಿ ರೈತರು ಬೆಳೆದ ಹತ್ತಿ ಬೆಳೆಗಳಿಗೆ ನೀರು ಜಲಾವೃತಗೊಂಡು ಅಂದಾಜು ನೂರು ಎಕರೆ ಹತ್ತಿ ಬೆಳೆ ನಷ್ಟ ಆಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ದೇವಪ್ಪ ಒತ್ತಾಯಿಸಿದರು.

ಹಟ್ಟಿ ಚಿನ್ನದ ಗಣಿ ವರದಿ: ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಹಟ್ಟಿ ಗ್ರಾಮ ಮತ್ತು ಹಟ್ಟಿ ಚಿನ್ನದ ಗಣಿ ಕ್ಯಾಂಪ್‌ ಕೆಲವು ಬಡಾವಣೆಗಳ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪ್ರಯಾಸ ಪಡುವಂತಾಗಿದೆ.

ಗ್ರಾಮದ ಅಬ್ದುಲ್ಲಾ ಕಾಲೊನಿ, ರಾಮ್‌ ರಹೀಮ್‌ ಕಾಲೊನಿ, ಸಿದ್ದಾರೋಢ ನಗರ, ಕಾಕಾನಗರ ಹಟ್ಟಿ ಗಣಿ ಕಾರ್ಮಿಕರು ವಾಸವಿರುವ ಜೆಪಿ, ಎನ್‌ಜಿಆರ್‌ ಹಾಗೂ ಎನ್‌ಜೆಪಿ ಕಾಲೊನಿಗಳ ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಹಟ್ಟಿ ಚಿನ್ನದ ಗಣಿ ಮಳೆ ಮಾಪನ ಕೇಂದ್ರದಲ್ಲಿ 67 ಮಿ. ಮೀ. ಮಳೆ ದಾಖಲಾಗಿದೆ. ಹಟ್ಟಿ ಗ್ರಾಮ ಸಿಹಿ ನೀರಿನ ಹಳ್ಳ ಮತ್ತು ಉಪ್ಪು ನೀರಿನ ಹಳ್ಳಗಳು ತುಂಬಿ ಹರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.