ADVERTISEMENT

ನೀರು ನಿರ್ವಹಣೆಗೆ ನಗರಸಭೆ ವೈಫಲ್ಯ

ಆಟೊ ಚಾಲಕರ ಜನಜಾಗೃತಿ ಜಾಥಾದಲ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 6:28 IST
Last Updated 9 ಮಾರ್ಚ್ 2017, 6:28 IST
ಸಿಂಧನೂರು: ಬೇಸಿಗೆಯ ಆರಂಭದ ದಿನಗಳಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ನಿರ್ಮಾಣ­ವಾಗಿದೆ. ಇಲ್ಲಿನ ನಗರಸಭೆ ಆಡಳಿತ ಮಂಡಳಿ ಕುಡಿಯುವ ನೀರಿನ ನಿರ್ವಹ­ಣೆ­ಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹಿರಿಯ ಹೋರಾಟಗಾರ ಚಂದ್ರ ಶೇಖರ ಗೊರಬಾಳ ಆಪಾದಿಸಿದರು.
 
ಸ್ಥಳೀಯ ನಗರಸಭೆ ಆವರಣದಲ್ಲಿ ಭಗತ್‌ ಸಿಂಗ್ ಆಟೊ ಚಾಲಕರ ಸಂಘದ ತಾಲ್ಲೂಕು ಘಟಕ ಬುಧವಾರ ಹಮ್ಮಿಕೊಂಡಿದ್ದ ಕುಡಿಯುವ ನೀರು ಕುರಿತು ಜನಜಾಗೃತಿ ಬೀದಿ ನಾಟಕಕ್ಕೆ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 
 
ಈ ಬಾರಿ ಮಳೆ ಅಭಾವದಿಂದ ಭೀಕರ ಬರಗಾಲ ಆವರಿಸಿದೆ. ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರುತ್ತಿದೆ. ಹಳ್ಳ, ಕೊಳ್ಳಗಳು ಬತ್ತಿವೆ. ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟ ಕುಸಿದಿದೆ. ನಗರದ ಕೆಲ ವಾರ್ಡ್‌ಗಳಲ್ಲಿ ನೀರಿನ ಅಭಾವ ಈಗಾಗಲೇ ಬಿಗಡಾಯಿಸಿದೆ ಎಂದು ಅವರು ವಿವರಿಸಿದರು.
 
ನಗರಸಭೆ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿಷ್ಕಾಳಜಿಯಿಂದ ನಗರದ ಎಲ್ಲೆಡೆ ಪೈಪ್‌ಲೈನ್‌ಗಳು ಒಡೆದು ಕುಡಿಯುವ ನೀರು ಪೋಲಾಗುತ್ತಿದೆ. ಕೆರೆ ನೀರು ನಗರಕ್ಕೆ ಆಧಾರ ಆಗಿರುವುದರಿಂದ ಮಿತವಾಗಿ ಬಳಸುವ ಮೂಲಕ ಬೇಸಿಗೆಯಲ್ಲಿ ಸಮಸ್ಯೆ ಜಟಿಲಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ನಗರಸಭೆಯಿಂದ ಮಾಡಬೇಕಾದ ಜನಜಾಗೃತಿ ಕಾರ್ಯಕ್ರ ಮವನ್ನು ಆಟೊ ಚಾಲಕರು ಮಾಡುತ್ತಿರುವುದು ಶ್ಲಾಘನೀಯ ಎಂದರು.
 
ಆರ್‌ವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ ಪೂಜಾರ ಮಾತನಾಡಿ, ಬೇಸಿಗೆಯಲ್ಲಿ ಎಲ್ಲ ವಾರ್ಡ್‌ಗಳಿಗೆ ಸಮರ್ಪಕ ನೀರು ಸರಬರಾಜು ಮಾಡಬೇಕು, ಯಾವುದೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಟ್ಯಾಂಕರ್ ಮೂಲಕ ಪೂರೈಕೆಗೆ ಕ್ರಮ ಕೈಗೊಳ್ಳ ಬೇಕು, ಬೇಸಿಗೆ ಮುಗಿಯುವ ವರೆಗೂ ಸಹಾಯವಾಣಿ ಆರಂಭಿಸಬೇಕು.
 
ನಗರಸಭೆ ಆಡಳಿತ ಮಂಡಳಿ ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ವಾಂತಿಭೇದಿಯಂತಹ ಜನಸಾಮಾನ್ಯರ ಅನಾರೋಗ್ಯ ಸಮಸ್ಯೆ ಬಗ್ಗೆ ಪೂರ್ವಯೋಜಿತವಾಗಿ ಜಾಗೃತರಾಗಿರ ಬೇಕು ಎಂದು ಆಗ್ರಹಿಸಿದರು.
 
ಭಗತ್‌ಸಿಂಗ್ ಆಟೊ ಚಾಲಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ, ನಗರಸಭೆ ಶೀಘ್ರವೇ ಎಚ್ಚೆತ್ತುಕೊಂಡು ಸಮರ್ಪಕವಾಗಿ ನೀರು ನಿರ್ವಹಣೆ ಮಾಡಬೇಕು. ಇಲ್ಲವಾದ್ದಲ್ಲಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕುವ ಚಳವಳಿ ಅನಿವಾರ್ಯ ಎಂದು ಎಚ್ಚರಿಸಿದರು. ಆಟೊ ಚಾಲಕರಾದ ಜಿಲಾನಿ ಪಾಷಾ, ನಾಗಪ್ಪ ಬಿಂಗಿ, ಬಸವರಾಜ, ಸುರೇಶ ಗಿರಿಜಾಲಿ, ಶಿವಮುನಿ, ಮಹಿ ಬೂಬ್, ಬಂದೇನವಾಜ್, ಹುಸೇನ ಸಾಬ, ಗೋವಿಂದ, ಮಲ್ಲಿಕಾರ್ಜುನ ಇದ್ದರು.
 
ಬೀದಿ ನಾಟಕ: ನಗರಸಭೆ ಆವರಣದಿಂದ ಆರಂಭವಾದ ಜಾಗೃತಿ ಜಾಥಾ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಕನಕದಾಸ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತಗಳ ಮೂಲಕ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿತು. 
 
* ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಮುನ್ನ ನಗರಸಭೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ನೀರು ಪೋಲು ಮಾಡದೆ, ಮಿತವಾಗಿ ಬಳಸಬೇಕು.
ಚಂದ್ರಶೇಖರ ಗೊರಬಾಳ, ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.