ADVERTISEMENT

ವಿದ್ಯುತ್ ಕೊಡದಿದ್ದರೆ ಕೈಗಾರಿಕೆಗಳು ಬಂದ್: ಆರ್‌ಸಿಸಿಐ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:15 IST
Last Updated 9 ನವೆಂಬರ್ 2017, 9:15 IST

ರಾಯಚೂರು: ‘ಪೂರ್ವ ಮಾಹಿತಿ ಕೊಡದೆ ವಿದ್ಯುತ್ ಲೋಡ್ ಶೆಡ್ಡಿಂಗ್ ಮುಂದುವರಿಸಿದರೆ ಕೈಗಾರಿಕೆಗಳನ್ನೆಲ್ಲ ಬಂದ್ ಮಾಡಿಕೊಂಡು ಜೆಸ್ಕಾಂ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ರಾಯಚೂರು ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಎಚ್ಚರಿಕೆ ನೀಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ.2 ರಿಂದ ಲೋಡ್ ಶೆಡ್ಡಿಂಗ್ ಆರಂಭಿಸಿದ್ದು, ಎರಡು ದಿನಗಳಿಂದ ವಿದ್ಯುತ್ ಕಡಿತದ ಅವಧಿ ಹೆಚ್ಚಾಗಿದೆ. ರಾಯಚೂರಿನಲ್ಲಿ ಪ್ರಮುಖವಾಗಿ ಎಲ್ಲ ಕೈಗಾರಿಕೆಗಳು ಕೃಷಿ ಸಂಬಂಧಿತವಾಗಿವೆ.

ಲೋಡ್ ಶೆಡ್ಡಿಂಗ್‌ನಿಂದ ಕೈಗಾರಿಕೆಗಳು ಕೆಲಸ ಮಾಡದಿದ್ದರೆ ರೈತರು ಕೂಡಾ ಪರೋಕ್ಷವಾಗಿ ತೊಂದರೆ ಅನುಭವಿಸುತ್ತಾರೆ. ಕೈಗಾರಿಕೆ ನಡೆಸುವವರು ಕಚ್ಚಾ ಹತ್ತಿ ಖರೀದಿ ಅನಿವಾರ್ಯವಾಗಿ ಕಡಿಮೆ ಮಾಡಿಕೊಳ್ಳುತ್ತಾರೆ.

ADVERTISEMENT

ಇದರಿಂದ ಎಪಿಎಂಸಿಯಲ್ಲಿ ಹತ್ತಿ ಮಾರಲು ಬರುವ ರೈತರು ಹತ್ತಿ ಮಾರಾಟಕ್ಕಾಗಿ ಕಾಯಬೇಕಾಗುತ್ತದೆ. ಲೋಡ್ ಶೆಡ್ಡಿಂಗ್ ಯಾವಾಗ ಮತ್ತು ಎಷ್ಟು ಸಮಯ ಮಾಡಲಾಗುತ್ತದೆ ಎಂಬುದನ್ನು ಜೆಸ್ಕಾಂ ಅಧಿಕಾರಿಗಳು ಮೊದಲೇ ತಿಳಿಸಬೇಕು’ ಎಂದು ಕೋರಿದರು.

‘ವಿದ್ಯುತ್ ಲಭ್ಯತೆ ನೋಡಿಕೊಂಡು ಕಾರ್ಮಿಕರನ್ನು ಹೊಂದಿಸಿಕೊಳ್ಳಲು ಕೈಗಾರಿಕೆಗಳಿಗೆ ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಶೇ 48 ರಷ್ಟು ವಿದ್ಯುತ್ ಉತ್ಪಾದನೆ ಆಗುವ ರಾಯಚೂರು ಜಿಲ್ಲೆಯ ಕೈಗಾರಿಕೆಗಳಿಗೆ ಯಾವ ಮನ್ನಣೆ ಇಲ್ಲದಂತಾಗಿದೆ. ಬೇರೆ ಜಿಲ್ಲೆಗಳಲ್ಲಿ ಕಾಣದ ವಿದ್ಯುತ್ ಸಮಸ್ಯೆ ರಾಯಚೂರಿನಲ್ಲಿ ಮಾತ್ರ ಏಕಿದೆ. ಜೆಸ್ಕಾಂ ಅಧಿಕಾರಿಗಳನ್ನು ಸರಿಯಾಗಿ ಕೇಳುವವರಿಲ್ಲ ಎನ್ನುವ ಸಂಗತಿ ಕಾರಣ ಇರಬಹುದು’ ಎಂದು ತಿಳಿಸಿದರು.

‘ಕೆಎಸ್‌ಐಡಿಸಿಯಿಂದ ಅಭಿವೃದ್ಧಿ ಮಾಡಿರುವ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸೌಕರ್ಯಗಳ ಕೊರತೆ ಬಹಳಷ್ಟಿದೆ. ಕೈಗಾರಿಕಾ ಇಲಾಖೆಯು ಸಲ್ಲಿಸಿದ ₹6.17 ಕೋಟಿ ವೆಚ್ಚದ ಪ್ರಸ್ತಾವನೆಗೆ ಸರ್ಕಾರವು ಅನುಮೋದನೆ ನೀಡಿಲ್ಲ’ ಎಂದು ಹೇಳಿದರು.

ಹತ್ತಿ ವ್ಯಾಪಾರಿ ಲಕ್ಣ್ಮೀರೆಡ್ಡಿ ಮಾತನಾಡಿ, ‘ನೋಟು ರದ್ದತಿ, ಜಿಎಸ್‌ಟಿ ಜಾರಿ ಮಾಡಿದಾಗ ಕೈಗಾರಿಕೆಗಳು ಬಹಳ ತೊಂದರೆ ಅನುಭವಿಸಿವೆ. ಈ ವರ್ಷ ಹತ್ತಿ ಚೆನ್ನಾಗಿ ಬಂದಿದೆ. ಆದರೆ ವಿದ್ಯುತ್ ಸಮಸ್ಯೆಯಿಂದ ಕೈಗಾರಿಕೆಗಳು ತೊಂದರೆ ಅನುಭವಿಸುತ್ತಿವೆ’ ಎಂದು ತಿಳಿಸಿದರು. ಉದ್ಯಮಿಗಳಾದ ವಿ.ಮನೋಹರ, ಶ್ರೀನಿವಾಸ ಚೂಡಿ, ರವಿ ನಾಗನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.