ADVERTISEMENT

ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹25೦ ಕೋಟಿ ನೀಡಲು ಸರ್ಕಾರಕ್ಕೆ ಒತ್ತಾಯ

ನಿಗಮದ ಅಧ್ಯಕ್ಷೆ ಬಿ.ಪಿ.ಸತ್ಯವತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:06 IST
Last Updated 3 ಫೆಬ್ರುವರಿ 2017, 6:06 IST
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹25೦ ಕೋಟಿ ನೀಡಲು ಸರ್ಕಾರಕ್ಕೆ ಒತ್ತಾಯ
ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹25೦ ಕೋಟಿ ನೀಡಲು ಸರ್ಕಾರಕ್ಕೆ ಒತ್ತಾಯ   

ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ರಾಜ್ಯ ಬಜೆಟ್‌ನಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ₹25೦ ಕೋಟಿ ನೀಡಬೇಕು ಎಂದು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷೆ ಬಿ.ಪಿ.ಸತ್ಯವತಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಒತ್ತಾಯಿಸಿದರು.

‘ಪಂಚವೃತ್ತಿ ಅಭಿವೃದ್ಧಿಗಾಗಿ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ನೀಡಿರುವ ₹20 ಕೋಟಿ ಅನುದಾನ ಏನೂ ಸಾಲುವುದಿಲ್ಲ. ಈಗಾಗಲೇ ವಿವಿಧ ಸಾಲ ಯೋಜನೆಗಳಿಗಾಗಿ ₹16 ಕೋಟಿ ವೆಚ್ಚಮಾಡಲಾಗಿದೆ. ಆದ್ದರಿಂದ, ಬಜೆಟ್‌ ಮಂಡನೆ ಸಂರ್ಭದಲ್ಲಿ ಸಿಎಂ ಅವರು ನಿಗಮನಕ್ಕೆ ಹೆಚ್ಚಿನ ಅನುದಾನ ನೀಡಿದರೆ ಸಮುದಾಯ ಮತ್ತು ಜನರ ಏಳಿಗೆಗೆ ಯೋಜನೆಗಳನ್ನು ರೂಪಿಸಲು ಸಹಾಯವಾಗುತ್ತದೆ’ ಎಂದು ವಿವರಿಸಿದರು.

ವಿಶ್ವಕರ್ಮ ಸಮುದಾಯ ತೀರಾ ಹಿಂದುಳಿದಿದೆ. ಸಮಾಜದ ಅಭಿವೃದ್ಧಿ ಪರ ಕೌಶಲ ಯೋಜನೆಗಳನ್ನು ಹಮ್ಮಿಕೊಳ್ಳುವ ನಿರೀಕ್ಷೆ ಇದೆ. ಸರ್ಕಾರ ನಿಗಮಕ್ಕೆ ಪತ್ಯೇಕ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕಗೊಳಿಸಿದರೆ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಯಾದಗಿರಿ ಜಿಲ್ಲೆಗೆ 2015–16ನೇ ಸಾಲಿನಲ್ಲಿ ನಿಗಮಕ್ಕೆ ಸಾಲ ಮಂಜೂರಿಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಒಟ್ಟು ₹22 ಲಕ್ಷ ಸಾಲ ಮಂಜೂರಾಗಿದೆ. ಹೀಗೆ ರಾಜ್ಯದಾದ್ಯಂತ ಇರುವ ಫಲಾನುಭವಿಗಳಿಗೆ ಸಾಲ ಯೋಜನೆ ಅಡಿ ಶೀಘ್ರ ಸಾಲದ ಚೆಕ್‌ ವಿತರಿಸಲಾಗುವುದು’ ಎಂದರು.

‘ವಿಶ್ವಕರ್ಮ ಸಮುದಾಯಗಳಿಂದ ಜೂನ್ ತಿಂಗಳಲ್ಲಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಮಂಜೂರಾಗಿರುವ ಚೆಕ್‌ ವಿತರಣೆ ಪ್ರಾರಂಭವಾಗಿದೆ. ನಾನು ನಿಗಮ ಅಧ್ಯಕ್ಷರಾಗಿ ಕೇವಲ 3 ತಿಂಗಳು ಕಳೆದಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ವಿಶ್ವಕರ್ಮ ಸಮುದಾಯದ ಬೇಡಿಕೆಗಳನ್ನು ಪಡೆದು ಸರ್ಕಾರದ ಗಮನಕ್ಕೆ ತಂದು ಸಮುದಾಯದ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಿದ್ದೇನೆ’ ಎಂದರು.

ಹೈದರಾಬಾದ್ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಸಮಿತಿ ಅಧ್ಯಕ್ಷ ವೀರೇಂದ್ರ ಇನಾಮದಾರ್, ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ  ಮೌನೇಶ ಡಿ.ಪತ್ತಾರ್, ವಿಶ್ವಕರ್ಮ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಂ.ಎ.ಗೌಂಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.