ADVERTISEMENT

ಸಕಾಲದಲ್ಲಿ ಮಾಹಿತಿ ನೀಡದಿದ್ದರೆ ದಂಡ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2016, 6:11 IST
Last Updated 27 ಡಿಸೆಂಬರ್ 2016, 6:11 IST

ರಾಯಚೂರು: ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಕೆಯಾದ ಅರ್ಜಿಗಳಿಗೆ ಮಾಹಿತಿ ನೀಡದ ಬಗ್ಗೆ ಜಿಲ್ಲೆಯಿಂದ ಸಲ್ಲಿಕೆಯಾಗಿದ್ದ ದೂರು ಪ್ರಕರಣಗಳಲ್ಲಿ ವಿಚಾರಣೆಗೆ ಬಾಕಿದ್ದ ಸುಮಾರು 100 ಅರ್ಜಿಗಳಲ್ಲಿ 66ನ್ನು ಸೋಮವಾರ ಇತ್ಯರ್ಥಪಡಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಕರಣಗಳ ವಿಚಾರಣೆ ನಡೆಸಿದ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತ ಸುಚೇತನ ಸ್ವರೂಪ್‌, ಸಕಾಲದಲ್ಲಿ ಮಾಹಿತಿ ನೀಡದಿದ್ದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದರು.

ಅತಿ ಹೆಚ್ಚು ಪ್ರಕರಣಗಳು ಗ್ರಾಮ ಪಂಚಾಯಿತಿಗೆ ಸಲ್ಲಿಕೆಯಾದ ಅರ್ಜಿಗಳಾಗಿದ್ದವು. ಚಂದ್ರಬಂಡಾ ಗ್ರಾಮ ಪಂಚಾಯಿತಿ ಕ್ರಿಯಾ ಯೋಜನೆ, ಬಾಕಿ ಉಳಿದ ಕಾಮಗಾರಿಗಳು ಸೇರಿದಂತೆ ವಿವಿಧ ಮಾಹಿತಿ ಕೋರಿ ಕರಿಯಪ್ಪ ಅವರು 2014ರಲ್ಲಿ ಅರ್ಜಿ ಸಲ್ಲಿಸಿದ್ದರೂ ಸಮರ್ಪಕವಾಗಿ ಮಾಹಿತಿ ನೀಡಿದ ಅಧಿಕಾರಿಗಳ ಧೋರಣೆ ಬಗ್ಗೆ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿ, 15 ದಿನದಲ್ಲಿ ಮಾಹಿತಿ ನೀಡದಿದ್ದರೆ ₹25 ಸಾವಿರ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್‌ ಡಾಟಾ ಆಪರೇಟರ್‌ಗಳ ಬಗ್ಗೆ ಮಲ್ಲಿಕಾರ್ಜುನ ಅವರು ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿ 13 ತಿಂಗಳು ಕಳೆದರೂ ಮಾಹಿತಿ ನೀಡಿದ ಅಧಿಕಾರಿಗೆ ದಂಡ ಕಟ್ಟುವಂತೆ ಆಯುಕ್ತರು ಸೂಚಿಸಿದರು.

ದೇವದುರ್ಗ ತಾಲ್ಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾದ ಕಾಮಗಾರಿ ಕ್ರಿಯಾಯೋಜನೆ ಮತ್ತು ಕಾರ್ಮಿಕರಿಗೆ ಪಾವತಿಸಿದ ಕೂಲಿ ಹಣದ ಬಗ್ಗೆ 2010ರಲ್ಲಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪದೇ ಪದೇ ವರ್ಗಾವಣೆಯಾದ ಕಾರಣ ಮಾಹಿತಿ ನೀಡಲು ತಡವಾಯಿತು ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸದ ಆಯುಕ್ತರು ಇಷ್ಟು ತಡ ಮಾಡುವುದು ಸರಿಯಲ್ಲ. ಕೂಡಲೇ ಮಾಹಿತಿ ನೀಡಿ ಎಂದು ಸೂಚಿಸಿದರು.

ಕುರ್ಡಿ ಗ್ರಾಮ ಪಂಚಾಯಿತಿಗೆ ಕಾಶಿನಾಥ್‌ ಅವರು ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತ ಸ್ವರೂಪ್‌ ಅವರು ಎಚ್ಚರಿಕೆ ನೀಡಿದರು.
ಯರಮರಸ್‌ ನೀರಾವರಿ ಇಲಾಖೆ ಉಪವಿಭಾಗಕ್ಕೆ ಟೆಂಡರ್‌ ಬಗ್ಗೆ ಕೇಳಿದ್ದ ಮಾಹಿತಿಗೆ ತಪ್ಪು ಮಾಹಿತಿನೀಡಲಾಗಿದೆ ಎಂದು ಅರ್ಜಿದಾರ ಶರಣಬಸವ ಅವರು ಆಯುಕ್ತರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ, ಸರಿಯಾದ ಪರಿಷ್ಕೃತ ಮಾಹಿತಿಯನ್ನು ನೀಡುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಶಿಕ್ಷಣ, ಜಲಸಂಪನ್ಮೂಲ, ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು. ಬಾಕಿ ಇರುವ ಅರ್ಜಿಗಳ ವಿಚಾರಣೆ ಮಂಗಳವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.