ADVERTISEMENT

ಸುಕೋ ಬ್ಯಾಂಕ್‌ ಶಾಖೆ ಉದ್ಘಾಟನೆ

‘ಸುಕೋ ಬ್ಯಾಂಕ್‌ ಸಾಧನೆ ಶ್ಲಾಘನೀಯ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 11:30 IST
Last Updated 14 ಜನವರಿ 2017, 11:30 IST
ಮಾನ್ವಿ: ಗ್ರಾಹಕ ಸ್ನೇಹಿ ಯೋಜನೆಗಳ ಮೂಲಕ  22ವರ್ಷಗಳಲ್ಲಿ ಸುಕೋ ಬ್ಯಾಂಕ್‌  ಮಾಡಿದ ಸಾಧನೆ  ಶ್ಲಾಘನೀಯ. ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸುಕೋ ಬ್ಯಾಂಕ್‌ ಶೆಡ್ಯೂಲ್ಡ್‌ ಬ್ಯಾಂಕ್‌ ಸ್ಥಾನ ಹೊಂದಲಿ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹಾರೈಸಿದರು.
 
ಶುಕ್ರವಾರ ಪಟ್ಟಣದಲ್ಲಿ  ಸುಕೋ ಬ್ಯಾಂಕಿನ 17ನೇ  ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ ಮಾತನಾಡಿ, ಸುಕೋ ಬ್ಯಾಂಕು ಕೋರ್‌ ಬ್ಯಾಂಕಿಂಗ್‌ ತಂತ್ರಜ್ಞಾನ ಅಳವಡಿಸಿಕೊಂಡಿದ್ದು ರಾಷ್ಟ್ರಮಟ್ಟದ ಎಟಿಎಮ್‌ ಜಾಲಕ್ಕೆ ಸೇರಿದ ರಾಜ್ಯದ ಪ್ರಥಮ ಸಹಕಾರಿ ಬ್ಯಾಂಕ್‌ ಆಗಿದೆ. 
 
ಧಾರವಾಡದಲ್ಲಿ ನೂತನ ಶಾಖೆ ಆರಂಭಿಸಲು ರಿಜರ್ವ್‌ ಬ್ಯಾಂಕ್‌ ಅನುಮತಿ ದೊರೆತಿದ್ದು, ಅತೀ ಶೀಘ್ರದಲ್ಲಿ ಅಲ್ಲಿ ನೂತನ ಶಾಖೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
 
ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, ಸುಕೋ ಬ್ಯಾಂಕಿನ ಯೋಜನೆ ಮತ್ತು ಸೇವೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ಥಳೀಯರು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
 
ಬ್ಯಾಂಕಿನ ಅಧ್ಯಕ್ಷ ಮೋಹಿತ್‌ ಮಸ್ಕಿ, ಶಾಖಾ ವ್ಯವಸ್ಥಾಪಕ ಜಿ.ಕೃಷ್ಣಕಾಂತ, ಮುಖಂಡರಾದ ಡಾ.ಎಂ.ಎಲ್‌.ಪಾಟೀಲ್, ಅಬ್ದುಲ್‌ ಗಫೂರ್‌, ಅಯ್ಯನಗೌಡ ಜಂಬಲದಿನ್ನಿ, ಮಹಾಂತೇಶ ಸ್ವಾಮಿ ರೌಡೂರು ಮುಂತಾದವರು ಇದ್ದರು. ಕಾರ್ಯಕ್ರಮಕ್ಕೆ ಮೊದಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು. 
 
ವಿವಿಧ ವೇಷಧಾರಿಗಳು, ಡೊಳ್ಳು ಕುಣಿತದ ಕಲಾ ತಂಡಗಳು ಜನರ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.