ADVERTISEMENT

31ನೇ ದಿನಕ್ಕೆ ತುಂಗಭದ್ರಾ ನೀರಾವರಿ ಕಾರ್ಮಿಕರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:30 IST
Last Updated 19 ಏಪ್ರಿಲ್ 2017, 4:30 IST
ರಾಯಚೂರು: ಸಮಾನ ದುಡಿಮೆಗೆ ಸಮಾನ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಆಫ್‌ ಇಂಡಿಯಾ (ಟಿಯುಸಿಐ) ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರು ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಆರಂಭಿಸಿರುವ ಮುಷ್ಕರವು ಮಂಗಳವಾರ 31 ನೇ ದಿನಕ್ಕೆ ಕಾಲಿಟ್ಟಿದೆ.
 
ಟಿಯುಸಿಐ ರಾಜ್ಯ ಘಟಕದ ಅಧ್ಯಕ್ಷ ಮಾನಸಯ್ಯ ಮಾತನಾಡಿ, ಹೋರಾಟದಲ್ಲಿ ಶಿಸ್ತು  ಕಾಪಾಡಿಕೊಂಡು ಹೋಗುವುದು ಮುಖ್ಯ. ಹೋರಾಟದ ಗಟ್ಟಿತನವು ಇಡೀ ರಾಯಚೂರು ಜಿಲ್ಲೆಯ ಕಾರ್ಮಿಕ ಸಂಘಟನೆಗಳನ್ನು ಮನ ಸೆಳೆಯುವಂತೆ ಆಗಬೇಕು ಎಂದು ಸಲಹೆ ನೀಡಿದರು.
 
ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಘಟಕದ ವಿಭಾಗೀಯ ಅಧ್ಯಕ್ಷ ಮಹಾದೇವಪ್ಪ ಮಾತನಾಡಿ, ‘ತುಂಗಭದ್ರಾ ನೀರಾವರಿ ವಲಯದ ಕಾರ್ಮಿಕರು ಕೇಳುತ್ತಿರುವ ವೇತನ ಹೆಚ್ಚಳವು ನ್ಯಾಯಬದ್ಧವಾಗಿದೆ. ಸರ್ಕಾರ ಇದಕ್ಕೆ ಸ್ಪಂದನೆ ನೀಡಬೇಕು’ ಎಂದು ಹೇಳಿದರು.
 
ಕರ್ನಾಟಕ ರೈತ ಸಂಘ ಲಿಂಗಸುಗೂರು ತಾಲ್ಲೂಕು ಘಟಕದ ಕಾರ್ಯದರ್ಶಿ ತಿಪ್ಪರಾಜು, ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಶೇಖರಯ್ಯ, ಲಿಂಗಸುಗೂರು ತಾಲ್ಲೂಕಿನ ಉದ್ಯೋಗ ಖಾತರಿ ಯೋಜನೆ ಅಧಿಕಾರಿಗಳು ಮಾತನಾಡಿದರು. ಮುಷ್ಕರ ನಿರತರು ಸ್ಥಳದಲ್ಲೇ ಊಟ ತಯಾರಿಸಿ  ತಿಂದು ಹೋರಾಟ ಮುಂದುವರಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.