ADVERTISEMENT

ಮೇಲು ಕೀಳು ಎಂಬ ಭಾವನೆ ಬೇಡ: ವರರುದ್ರಮುನಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 6:50 IST
Last Updated 6 ಫೆಬ್ರುವರಿ 2018, 6:50 IST

ಮಸ್ಕಿ: ‘ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಗೆ ಆಸ್ಪದ ನೀಡದೆ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿಸಬೇಕು’ ಎಂದು ಗಚ್ಚಿಮಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಈಚೆಗೆ ಪಟ್ಟಣದಲ್ಲಿ ದಲಿತ ಸಂರಕ್ಷಣಾ ಸಮಿತಿ ಏರ್ಪಡಿಸಿದ್ದ ‘ಅಂಬೇಡ್ಕರ್ ಕಂಡ ಕನಸು ಮತ್ತು ಪ್ರಸ್ತುತ ರಾಜಕೀಯದಲ್ಲಿ ದಲಿತರ ಪಾತ್ರ’ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ಕಾಣಲು ಸಾಧ್ಯ’ ಎಂದರು.

ADVERTISEMENT

‘ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಠ ಮಾನ್ಯಗಳ ಕೊಡುಗೆ ಅಪಾರ. ಅವುಗಳ ಸದುಪಯೋಗ ಪಡೆದುಕೊಂಡು ಶಿಕ್ಷಣ ವಂಚಿತ ಸಮುದಾಯ ಮುಂದಾಗಬೇಕು’ ಎಂದರು. ಉಪನ್ಯಾಸಕ ನಾರಾಯಣ ಬೆಳಗುರ್ಕಿ ಮಾತನಾಡಿ ‘ಈ ದೇಶದ ಭೂಮಿಯನ್ನು ಸಮಾನವಾಗಿ ಹಂಚುವ ಮೂಲಕ ಭೂಮಿಯನ್ನು ರಾಷ್ಟ್ರೀಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

‘ದೇಶವನ್ನು ಬಂಡವಾಳಶಾಹಿ ಹಾಗೂ ಮನುವಾದಿಗಳಿಂದ ರಕ್ಷಿಸಬೇಕಾಗಿದೆ. ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕು’ ಎಂದು ಮನವಿ ಮಾಡಿದರು. ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರತಾಪಗೌಡ ಪಾಟೀಲ ‘ದಲಿತ ಸಮುದಾಯ ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಬೆಳೆಯಬೇಕು’ ಎಂದರು.

ಜಾತಿ ನಿಮೂರ್ಲನಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಎನ್.ಬಡಿಗೇರ್, ದಲಿತ ಮುಖಂಡ ದೊಡ್ಡಪ್ಪ ಮುರಾರಿ, ಮಕ್ಕಳ ಆಯೋಗದ ಸದಸ್ಯ ವೈ. ಮರಿಸ್ವಾಮಿ, ಡಾ. ಅಹ್ಮದ್‌ ಸಾಬ್, ಪಾಮಯ್ಯ ಮುರಾರಿ, ಮಲ್ಲಯ್ಯ ಮುರಾರಿ, ಬಾಲಸ್ವಾಮಿ ಜಿನ್ನಾಪುರ, ಮಲ್ಲಪ್ಪ ನಾಗರಬೆಂಚಿ, ದುರಗಪ್ಪ ವಿಭೂತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.