ADVERTISEMENT

ಸಿಂಧನೂರು: ಕಾಲೇಜಿಗೆ ಹೋಗಲು ನಾಲ್ಕು ಕಿ.ಮೀ ಕಾಲ್ನಡಿಗೆ

ಡಿ.ಎಚ್.ಕಂಬಳಿ
Published 21 ಡಿಸೆಂಬರ್ 2023, 7:55 IST
Last Updated 21 ಡಿಸೆಂಬರ್ 2023, 7:55 IST
ಸಿಂಧನೂರಿನ ಹೊರವಲಯದ ಶಿವಜ್ಯೋತಿ ನಗರದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯದ ಕಟ್ಟಡ
ಸಿಂಧನೂರಿನ ಹೊರವಲಯದ ಶಿವಜ್ಯೋತಿ ನಗರದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕಿಯರ ವಸತಿ ನಿಲಯದ ಕಟ್ಟಡ   

ಸಿಂಧನೂರು: ಮೆಟ್ರಿಕ್ ನಂತರದ ಪರಿಶಿಷ್ಟ ಪಂಗಡದ ಬಾಲಕಿಯರ ಹಾಸ್ಟೆಲ್‍ನ ವಿದ್ಯಾರ್ಥಿನಿಯರು ದಿನವೂ ಕಾಲೇಜಿಗೆ ನಾಲ್ಕು ಕಿ.ಮೀ ನಡೆದುಕೊಂಡೇ ಹೋಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸೌಕರ್ಯದ ಕೊರತೆ ಕಾರಣದಿಂದ ನಗರದ ಹಾಸ್ಟೆಲ್‍ನಲ್ಲಿ ಪ್ರವೇಶ ಪಡೆದರೂ ನಿತ್ಯದ ಗೋಳಾಟ ತಪ್ಪಿಲ್ಲ. ಬಸ್ ನಿಲ್ದಾಣಕ್ಕೂ ಹಾಸ್ಟೆಲ್‍ಗೂ ಆರು ಕಿ.ಮೀ ಅಂತರವಿದ್ದು, ಬಸ್ ಸೌಕರ್ಯವಿಲ್ಲದ ಕಾರಣ ತಾಪತ್ರಯ ಎದುರಿಸುತ್ತಿದ್ದಾರೆ.

ಈ ಹಾಸ್ಟೆಲ್‍ನಲ್ಲಿ ಪಿಯುಸಿ ಹಾಗೂ ಪದವಿ ಓದುತ್ತಿರುವ 250 ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದಿದ್ದು, ಕುಷ್ಟಗಿ ಮಾರ್ಗದಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯ, ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿರುವ ಸರ್ಕಾರಿ ಪಿಯು ಕಾಲೇಜು ಸೇರಿದಂತೆ ವಿವಿಧ ಖಾಸಗಿ ಕಾಲೇಜುಗಳಿಗೆ ಕಾಲ್ನಡಿಗೆಯಲ್ಲಿಯೇ ಸಾಗುತ್ತಾರೆ. ಗಂಗಾವತಿ ಮುಖ್ಯ ರಸ್ತೆ ಮಾರ್ಗದಿಂದ 1 ಕಿ.ಮೀ ಅಂತರದಲ್ಲಿರುವ ಹಾಸ್ಟೆಲ್ ಮಾರ್ಗದಲ್ಲಿ ಜಾಲಿ-ಬೇಲಿಯಿಂದ ಕೂಡಿದ ನಿರ್ಜನ ಪ್ರದೇಶವಿದ್ದು, ವಿದ್ಯಾರ್ಥಿನಿಯರು ಒಬ್ಬರೇ ಹೋಗಲು ಹೆದರಿಕೊಳ್ಳುತ್ತಾರೆ. ನಾಲ್ಕಾರು ವಿದ್ಯಾರ್ಥಿನಿಯರು ಸೇರಿ ಹಾಸ್ಟೆಲ್ ತಲುಪುವುದು ಅನಿವಾರ್ಯವಾಗಿದೆ.

ಹಾಸ್ಟೆಲ್ ಆಸುಪಾಸು ಪುಂಡ-ಪೋಕರಿಗಳ ಹಾವಳಿ ಹೆಚ್ಚಿದ್ದು, ಮದ್ಯ ವ್ಯಸನಿಗಳು, ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಕಿರುಕುಳ ನೀಡಿ, ಚುಡಾಯಿಸಿದ ಬಗ್ಗೆ ಸಾಕಷ್ಟು ಆರೋಪಗಳಿವೆ. ಹಾಸ್ಟೆಲ್ ನಗರ ಪ್ರದೇಶದ ಕೊನೆ ಭಾಗದಲ್ಲಿರುವುದರಿಂದ ಇಲ್ಲಿನ ವಿದ್ಯಾರ್ಥಿನಿಯರಿಗೆ ಅಸುರಕ್ಷತೆ ಭಾವ ಕಾಡುತ್ತಿದೆ. ರಾತ್ರಿ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಅನಾರೋಗ್ಯ ಸಮಸ್ಯೆ ಸೇರಿ ಯಾವುದೇ ರೀತಿಯ ಅವಘಡಗಳು ಉಂಟಾದರೆ ಆಸ್ಪತ್ರೆಗೆ ದಾಖಲಿಸಲು ಪಡಿಪಾಟಲು ಅನುಭವಿಸಬೇಕಾಗುತ್ತದೆ.

ADVERTISEMENT

ಈ ಹಿಂದೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಒಂದೂವರೆ ವರ್ಷದ ಹಿಂದೆ ಹಾಸ್ಟೆಲ್ ಉದ್ಘಾಟಿಸಿದ್ದರು. ವಿದ್ಯಾರ್ಥಿನಿಯರಿಗೆ ಅಭ್ಯಾಸದ ದೃಷ್ಟಿಯಿಂದ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಈ ಹಾಸ್ಟೆಲ್‌ಗೆ ವ್ಯವಸ್ಥಿತ ರಸ್ತೆ, ಭದ್ರತಾ ಸಿಬ್ಬಂದಿ, ಬಸ್ ಸೌಕರ್ಯ ಸೇರಿದಂತೆ ಮೂಲ ಸೌಯರ್ಕಗಳು ಒದಗಿಸಿಲ್ಲ.

ದಿನವೂ ಬೆಳಿಗ್ಗೆ ಮತ್ತು ಮಧ್ಯಾಹ್ನ ಸೇರಿ ಎಂಟು ಕಿ.ಮೀ ನಡೆದುಕೊಂಡು ಹೋಗಿ ಬಂದು ಹೈರಾಣಾಗುತ್ತಿರುವ ವಿದ್ಯಾರ್ಥಿನಿಯರು ಮೌಖಿಕವಾಗಿ ಮತ್ತು ಮನವಿ ನೀಡಿ ಸಿಟಿ ಬಸ್ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ ಎನ್ನುವುದು ಆರೋಪ.

ಸಿಟಿ ಬಸ್ ಸೌಕರ್ಯ ಕಲ್ಪಿಸಬೇಕು. ಹಾಸ್ಟೆಲ್‍ಗೆ ರಸ್ತೆ ನಿರ್ಮಿಸಬೇಕು. ಭದ್ರತಾ ಸಿಬ್ಬಂದಿ ನೇಮಿಸಬೇಕು ಹಾಗೂ ರಾತ್ರಿ ಸಮಯದಲ್ಲಿ ಪೊಲೀಸ್ ಬೀಟ್ ಹಾಕಿಸಬೇಕು ಎಂಬುದು ವಿದ್ಯಾರ್ಥಿನಿಯರ ಒತ್ತಾಯವಾಗಿದೆ.

ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಟೈಂ ಹಾಸ್ಟೆಲ್‍ನಿಂದ ಸರ್ಕಾರಿ ಕಾಲೇಜಿಗೆ ನಡೆದುಕೊಂಡು ಹೋಗುತ್ತೇವೆ. ಆಟೊದಲ್ಲಿ ಹೋಗಲು ₹50 ರಿಂದ ₹60 ಕೇಳುತ್ತಾರೆ. ಪ್ರತಿನಿತ್ಯ ಅಷ್ಟು ದುಡ್ಡು ಕೊಟ್ಟು ಹೋಗಲು ನಮ್ಮಿಂದ ಸಾಧ್ಯವೇ? ನಮ್ಮ ಊರಿಂದ ಸಿಂಧನೂರಿಗೆ ಬರಲು ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ಓದಲು ಅನುಕೂಲ ಇಲ್ಲ ಎಂದು ಈ ಹಾಸ್ಟೆಲ್‍ನಲ್ಲಿ ಪ್ರವೇಶ ಪಡೆದರೆ ಅದಕ್ಕಿಂತಲೂ ಹಾಸ್ಟೆಲ್ ಕಡೆಯಾಗಿದೆ. ಯಾರಿಗೆ ಹೇಳಿದ್ರೂ ಸಮಸ್ಯೆ ಬಗೆಹರಿದಿಲ್ಲ’
ಶಂಕ್ರಮ್ಮ ವಿದ್ಯಾರ್ಥಿನಿ
ಉಪಾಹಾರ ಊಟ ವಸತಿ ಸುಸಜ್ಜಿತ ಕಟ್ಟಡ ಸೇರಿದಂತೆ ಹಾಸ್ಟೆಲ್‍ನಲ್ಲಿ ಎಲ್ಲ ಮೂಲ ಸೌಕರ್ಯಗಳು ಇವೆ. ಆದರೆ ಹಾಸ್ಟೆಲ್ ದೂರ ಇರುವುದೇ ವಿದ್ಯಾರ್ಥಿನಿಯರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಆದಾಗ್ಯೂ ವಿದ್ಯಾರ್ಥಿನಿಯರಿಗೆ ರಾತ್ರಿ ಸಮಯದಲ್ಲಿ ಆರೋಗ್ಯ ಸಮಸ್ಯೆಯಾದರೆ ಆಂಬುಲೆನ್ಸ್ ಆಟೊ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ
ಹುಚ್ಚಮ್ಮ ಮೇಲ್ವಿಚಾರಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.