ADVERTISEMENT

ಅಸಮರ್ಪಕ ಕಬ್ಬು ಕಟಾವು

ಸಕ್ಕರೆ ಕಾರ್ಖಾನೆಯಿಂದ ವಂಚನೆ ಆರೋಪ: ಜಿಲ್ಲಾಧಿಕಾರಿಗೆ ರೈತರಿಂದ ದೂರು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2015, 10:33 IST
Last Updated 28 ಮಾರ್ಚ್ 2015, 10:33 IST

ರಾಮನಗರ: ಬಿಡದಿ ಬಳಿಯ ಬೈರಮಂಗಲ ಪ್ರದೇಶದಲ್ಲಿ ಬೆಳೆದಿರುವ ಕಬ್ಬನ್ನು ಸಮರ್ಪಕವಾಗಿ ಕಟಾವು ಮಾಡದೆ ಮದ್ದೂರು ತಾಲ್ಲೂಕಿನ ಕೊಪ್ಪದ ಎಫ್ಎಸ್‌ಎಲ್‌ ಸಕ್ಕರೆ ಕಾರ್ಖಾನೆಯು ರೈತರಿಗೆ ಮೋಸ ಮಾಡಿದೆ ಎಂದು ಆರೋಪಿಸಿ ಕಬ್ಬು ಬೆಳೆಗಾರರು ಶುಕ್ರವಾರ ಜಿಲ್ಲಾಧಿಕಾರಿ ಎಫ್‌.ಆರ್‌.ಜಮಾದಾರ್‌ ಅವರ ಬಳಿ ದೂರು ನೀಡಿದರು.

ಕಾರ್ಖಾನೆಯ ಸಿಬ್ಬಂದಿ ಲಂಚ ಇಲ್ಲದೆ ಕಬ್ಬನ್ನು ಕಟಾವು ಮಾಡುತ್ತಿಲ್ಲ. ಒಂದು ವೇಳೆ ಮಾಡಿದರೂ ಕಬ್ಬನ್ನು ನೆಲಮಟ್ಟಕ್ಕೆ ಕಟಾವು ಮಾಡದೆ, ಮೂರು–ನಾಲ್ಕು ಅಡಿ ಮೇಲ್ಭಾಗದಲ್ಲಿ ಕಟಾವು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದರು.

ಕೂಲಿ ಆಳುಗಳ ಕೊರತೆಯ ನೆಪ ಹೇಳುತ್ತಿರುವ ಸಕ್ಕರೆ ಕಾರ್ಖಾನೆಯು ಕಬ್ಬು ಕಟಾವು ಮಾಡುತ್ತಿಲ್ಲ. ಇದರಿಂದ ಕಬ್ಬು ರಸ ಕಳೆದುಕೊಳ್ಳುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಕೆಲ ರೈತರು ಬೆಳೆದ ಕಬ್ಬಿಗೆ ಬೆಂಕಿಯನ್ನಿಟ್ಟಿದ್ದಾರೆ. ಕಂಪೆನಿಯ ಧೋರಣೆ ಬದಲಾಗದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾರ್ಖಾನೆಯ ಸಿಬ್ಬಂದಿ ರೈತರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲ.

ಈ ಬಗ್ಗೆ ಕೇಳಿದರೆ, ಬೇಕಾದರೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಬಳಿ ಹೋಗಿ, ಅವರೇ ಕಬ್ಬು ಕಟಾವು ಮಾಡಿಕೊಡುತ್ತಾರೆ ಎಂದು ಹೇಳುತ್ತಾರೆ. ಹೀಗಾದರೆ ರೈತರು ಬದುಕು ಸಾಗಿಸುವುದು ಹೇಗೆ ಎಂದು ಅಳಲು ತೋಡಿಕೊಂಡರು. ಆಗ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಜಮಾದಾರ್‌ ಅವರು, ರೈತರೊಂದಿಗೆ ವ್ಯವಹರಿಸುವ ಸಕ್ಕರೆ ಕಾರ್ಖಾನೆಯವರು ಮೊದಲು ತಮ್ಮ ವರ್ತನೆಯನ್ನು ಬದಲಿಸಿಕೊಂಡು, ಸೌಜನ್ಯದಿಂದ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ರೈತರ ಹಿತದೃಷ್ಟಿಯಿಂದ ಕಬ್ಬನ್ನು ಕಟಾವು ಮಾಡಿ, ಈ ನಿಟ್ಟಿನಲ್ಲಿ ಅನಗತ್ಯವಾಗಿ ವಿಳಂಬ ಮಾಡಿದರೆ ಜಿಲ್ಲಾಡಳಿತ ಸಹಿಸುವುದಿಲ್ಲ. ಕಬ್ಬನ್ನು ವೈಜ್ಞಾನಿಕವಾಗಿ ನೆಲಮಟ್ಟದಲ್ಲಿಯೇ ಕಟಾವು ಮಾಡಿ. ಅನಗತ್ಯವಾಗಿ ರೈತರಿಗೆ ತೊಂದರೆ ಕೊಡಬೇಡಿ ಎಂದು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಿಗೆ ಎಚ್ಚರಿಸಿದರು.

ರೈತ ಮುಖಂಡರಾದ ಸಿ.ಪುಟ್ಟಸ್ವಾಮಿ, ಗಜೇಂದ್ರ ಸಿಂಗ್‌, ಜಗದೀಶ್‌, ಶಿವಕುಮಾರ್‌, ಲಂಕಯ್ಯ, ಕೃಷ್ಣಪ್ಪ, ಹರಿಪ್ರಸಾದ್‌, ಸೋಮಸಿಂಗ್‌, ಸಮಂದೀಗೌಡ, ಸುರೇಶ್‌, ಕುಮಾರ, ಪುಟ್ಟಲಿಂಗಯ್ಯ ಉಪಸ್ಥಿತರಿದ್ದರು. ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಪ್ರತಿನಿಧಿ ದೀಪಕ್‌, ಎಜಿಎಂ ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.