ADVERTISEMENT

ಕ್ಯಾಟ್‌ಫಿಶ್‌ ಸಾಕಣೆ ದಂಧೆ ಅವ್ಯಾಹತ

ಹುಚ್ಚಮ್ಮನದೊಡ್ಡಿ ಬಳಿ ಖಾಸಗಿ ಜಮೀನಿನಲ್ಲಿ ನಿಷೇಧಿತ ಜಾತಿಯ ಮೀನು ಸಾಕಣೆ– ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಆರ್.ಜಿತೇಂದ್ರ
Published 10 ಮಾರ್ಚ್ 2018, 9:53 IST
Last Updated 10 ಮಾರ್ಚ್ 2018, 9:53 IST
ಹುಚ್ಚಮ್ಮನದೊಡ್ಡಿ ಬಳಿಯ ಜಮೀನಿನಲ್ಲಿ ಕ್ಯಾಟ್‌ ಫಿಶ್‌ ಸಾಕಣೆಗೆಂದು ನಿರ್ಮಿಸಿಕೊಂಡಿರುವ ಕೊಳ
ಹುಚ್ಚಮ್ಮನದೊಡ್ಡಿ ಬಳಿಯ ಜಮೀನಿನಲ್ಲಿ ಕ್ಯಾಟ್‌ ಫಿಶ್‌ ಸಾಕಣೆಗೆಂದು ನಿರ್ಮಿಸಿಕೊಂಡಿರುವ ಕೊಳ   

ರಾಮನಗರ: ತಾಲ್ಲೂಕಿನ ಹುಚ್ಚಮ್ಮನದೊಡ್ಡಿ ಗ್ರಾಮದ ಬಳಿಯ ಹೊಲವೊಂದರಲ್ಲಿ ನಿಷೇಧಿತ ಕ್ಯಾಟ್‌ಫಿಶ್‌ ಅರ್ಥಾತ್‌ ಆನೆ ಮೀನು ಸಾಕಣೆ ನಡೆದಿದೆ. ಇದರಿಂದಾಗಿ ಸುತ್ತಮುತ್ತ ಗಬ್ಬು ವಾಸನೆ ಹರಡಿದ್ದು, ಗ್ರಾಮಸ್ಥರು ಕಿರಿಕಿರಿ ಅನುಭವಿಸುವಂತಾಗಿದೆ.

ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಗೋಪಳ್ಳಿ ಸರ್ವೆ ನಂಬರ್‌ನಲ್ಲಿರುವ ಕೃಷ್ಣಪ್ಪ ರೈತರಿಂದ ಜಮೀನು ಗುತ್ತಿಗೆ ಪಡೆದು ಖಾಸಗಿಯಾಗಿ ಎರಡು ಬೃಹತ್‌ ಕೊಳಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ ನಿಷೇಧಿತ ಜಾತಿಯ ಸಾವಿರಾರು ಮೀನುಗಳನ್ನು ಸಾಕುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರುಕೊಟ್ಟರೂ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಪ್ರಾಣಿಗಳ ಅವಶೇಷಗಳೇ ಆಹಾರ: ಈ ಜಾತಿಯ ಮೀನುಗಳು ಮಾಂಸಭಕ್ಷಕ ಜೀವಿಗಳು. ಇವು ತಮ್ಮೊಂದಿಗೆ ವಾಸವಿರುವ ಇತರೆ ಜಲಚರಗಳನ್ನು ತಿಂದು ಬದುಕುತ್ತವೆ. ಅಲ್ಲದೆ ಸತ್ತ ಪ್ರಾಣಿಗಳ ಅವಶೇಷಗಳನ್ನೂ ಇವುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಇದರಿಂದ ಅವು ಇತರೆ ಮೀನಿಗಿಂತ ವೇಗವಾಗಿ ಬೆಳವಣಿಗೆ ಹೊಂದುತ್ತವೆ.

ADVERTISEMENT

ಹುಚ್ಚಮ್ಮನದೊಡ್ಡಿಯಲ್ಲಿನ ಕೊಳಗಳಲ್ಲಿ ಮೀನುಗಳಿಗೆ ಕೋಳಿ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಅಲ್ಲದೆ ನಾಯಿ ಮೊದಲಾದ ಸತ್ತ ಪ್ರಾಣಿಗಳನ್ನೂ ತಂದು ಎಸೆಯಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಕೊಳ ಹಾಗೂ ಸುತ್ತಮುತ್ತ ಪ್ರಾಣಿಗಳ ತ್ಯಾಜ್ಯಗಳು ಬಿದ್ದಿವೆ. ಮಾಂಸ ಕತ್ತರಿಸಿ ಮೀನುಗಳಿಗೆ ಹಾಕಲೆಂದೇ ಸ್ಥಳದಲ್ಲಿ ಯಂತ್ರವೊಂದನ್ನು ಇರಿಸಲಾಗಿದೆ.

ಉಳಿದ ಮೀನುಗಳ ಸಾಕಣೆಗೆ ಹೋಲಿಸಿದರೆ ಇವುಗಳ ಸಾಕಣೆಯು ಸುಲಭದ ಕಾರ್ಯವಾಗಿದೆ. ಖಾಸಗಿ ಕೊಳದಲ್ಲಿ ಮೀನುಗಳನ್ನು ಬಿಟ್ಟು ಹೊರಗಿನಿಂದ ಮಾಂಸದ ತ್ಯಾಜ್ಯ ತಂದು ಹಾಕಿದರೆ ಸಾಕು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇರುವ ಕಾರಣ ಇವುಗಳ ಸಾಕಣೆಯು ದಂಧೆಯಾಗಿದೆ.

ಮೀನು ಸಾಕಣೆಯ ಸ್ಥಳದಿಂದ ಒಂದು ಕಿಲೋಮೀಟರ್ ದೂರದವರೆಗೂ ಇದರ ವಾಸನೆ ಹಬ್ಬಿದೆ. ಇದರಿಂದಾಗಿ ಸುತ್ತಲಿನ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಜನರ ಆರೋಗ್ಯದ ಮೇಲೆಯೂ ಇದು ದುಷ್ಪರಿಣಾಮ ಬೀರತೊಡಗಿದೆ ಎಂದು ಸ್ಥಳೀಯರಾದ ಲೋಕೇಶ್ ಎಂಬುವರು ಆರೋಪಿಸುತ್ತಾರೆ.

ಬೆಂಗಳೂರೇ ಮಾರುಕಟ್ಟೆ: ಇಲ್ಲಿ ಅಕ್ರಮವಾಗಿ ಸಾಕಣೆ ಮಾಡುವ ಮೀನುಗಳನ್ನು ಬೆಂಗಳೂರಿಗೆ ದೊಡ್ಡ ದೊಡ್ಡ ಸಮಾರಂಭಗಳಿಗೆ ಆಹಾರವಾಗಿ ಪೂರೈಕೆ ಮಾಡಲಾಗುತ್ತಿದೆ.

ಮಾಂಸಾಹಾರಿ ಹೋಟೆಲ್‌ಗಳಿಗೂ ಪೂರೈಕೆ ಮಾಡಲಾಗುತ್ತಿದೆ. ಟನ್‌ ಲೆಕ್ಕದಲ್ಲಿ ಇವುಗಳು ಸರಬರಾಜಾಗುತ್ತಿವೆ. ಪ್ರತಿ ಕೆ.ಜಿ.ಗೆ ‌₹100–120 ಬೆಲೆ ಇದೆ.

ಮಾರಾಟಗಾರರೇ ಮೀನುಗಳನ್ನು ಸ್ವಚ್ಛಗೊಳಿಸಿ, ತುಂಡರಿಸಿ ಕೊಡುವುದರಿಂದ ಕೊಳ್ಳುವವರಿಗೆ ಇದು ಯಾವ ಜಾತಿಯ ಮೀನು, ಎಲ್ಲಿಂದ ಬಂತು ಎಂಬುದು ತಿಳಿಯದಾಗಿದೆ ಎಂದು ಸ್ಥಳೀಯರು ವಿವರಿಸುತ್ತಾರೆ.

**

ನಿಷೇಧಿತ ಜಾತಿಯ ಮೀನು

ಪರಿಸರ ಹಾಗೂ ಮನುಷ್ಯರ ಆರೋಗ್ಯಕ್ಕೆ ಮಾರಕ ಎನ್ನುವ ಕಾರಣಕ್ಕೆ ಭಾರತದಲ್ಲಿ ಕ್ಯಾಟ್‌ಫಿಶ್‌ ಸಾಗಣೆ ಹಾಗೂ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಕರ್ನಾಟಕದಲ್ಲಿಯೂ 2013ರಲ್ಲಿ ಈ ಮೀನಿಗೆ ಸರ್ಕಾರ ನಿಷೇಧ ಹೇರಿದೆ. ಇದು ಕ್ಯಾನ್ಸರ್‌ಗೆ ಕಾರಣವೂ ಆಗಬಹುದು ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಆಫ್ರಿಕನ್ ಕ್ಯಾಟ್‌ಫಿಶ್‌ ಇಂದು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದರೆ ಕದ್ದುಮುಚ್ಚಿ ಸಾಕಣೆ ಮತ್ತು ಮಾರಾಟ ನಡೆಯುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿದೆ.

**

ದೂರು ಕೊಟ್ಟರೂ ಪ್ರಯೋಜನವಿಲ್ಲ

ಇಲ್ಲಿನ ಅಕ್ರಮ ಮೀನು ಸಾಕಣೆ ದಂಧೆ ಕುರಿತು ರಾಮನಗರದಲ್ಲಿರುವ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ತಿಂಗಳ ಹಿಂದೆಯೇ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಈಚೆಗೆ ಸ್ಥಳ ಪರಿಶೀಲನೆ ನಡೆಸಿ ಕಣ್ಣಾರೆ ಕಂಡಿದ್ದರೂ ಇದನ್ನು ತೆರವು ಮಾಡಿಸಲು ಮುಂದಾಗಿಲ್ಲ ಎಂದು ಸ್ಥಳೀಯರಾದ ಲೋಕೇಶ್‌ ದೂರುತ್ತಾರೆ.

ಈ ಆರೋಪಗಳ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಮೀನುಗಾರಿಕೆ ಇಲಾಖೆಯ ಜಿಲ್ಲಾ ಹಿರಿಯ ಸಹಾಯಕ ನಿರ್ದೇಶಕ ಜಯರಾಮಯ್ಯ ‘ಕೊಳದ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು. ಖಾಲಿ ಮಾಡುವಂತೆ ತಿಳಿಸಲಾಗಿದೆ. ಅವರು ತೆರೆವಿಗೆ ಮುಂದಾಗದೇ ಇದ್ದಲ್ಲಿ ಪೊಲೀಸರಲ್ಲಿ ಪ್ರಕರಣ ದಾಖಲಿಸುವಂತೆ ಸ್ಥಳೀಯ ಸಿಬ್ಬಂದಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

**

ಕ್ಯಾಟ್‌ಫಿಶ್ ಸಾಕಣೆಯಿಂದಾಗಿ ಸುತ್ತಮುತ್ತ ಗಬ್ಬುವಾಸನೆ ಹರಡಿದೆ. ಸತ್ತ ಪ್ರಾಣಿಗಳ ತಾಜ್ಯಗಳನ್ನು ಕೊಳಕ್ಕೆ ತಂದು ಸುರಿಯಲಾಗುತ್ತಿದೆ.

-ಲೋಕೇಶ್‌, ಸ್ಥಳೀಯ ನಿವಾಸಿ

**

ಖಾಸಗಿ ಕೊಳದಲ್ಲಿ ಕ್ಯಾಟ್‌ಫಿಶ್‌ ಸಾಕುತ್ತಿರುವ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ತೆರವುಗೊಳಿಸದಿದ್ದಲ್ಲಿ ಪೊಲೀಸರಲ್ಲಿ ದೂರು ದಾಖಲಿಸುತ್ತೇವೆ.

-ಜಯರಾಮಯ್ಯ, ಹಿರಿಯ ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.