ADVERTISEMENT

‘ಕ್ರೀಡಾ ಸಂಕೀರ್ಣ ಸಾರ್ವಜನಿಕ ಬಳಕೆಗೆ ನೀಡಿ’

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:55 IST
Last Updated 25 ಮೇ 2017, 5:55 IST

ಶಿವಮೊಗ್ಗ: ಕ್ರೀಡಾ ಸಂಕೀರ್ಣವನ್ನು ಸಾರ್ವಜನಿಕರ ಉಪಯೋಗಕ್ಕೆ ಒದಗಿಸಬೇಕು ಎಂದು ಒತ್ತಾಯಿಸಿ ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘ, ಚಂದನ ಆರೋಗ್ಯ ಪಾರ್ಕ್‌ ಅಭಿವೃದ್ಧಿ ಸಮಿತಿ, ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿಗಳ ಸಂಘದ ಸದಸ್ಯರು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗೋಪಾಲಗೌಡ ಬಡಾವಣೆ ಮತ್ತು ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿಗಳ ಬಹುದಿನದ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಗೋಪಾಲಗೌಡ ಬಡಾವಣೆ ಎಫ್ ಬ್ಲಾಕ್‌ನಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಿದೆ. ಇದರ ಉದ್ಘಾಟನೆ ಮಾಡಿ ತಿಂಗಳುಗಳೇ ಕಳೆದರೂ ಸಾರ್ವಜನಿಕರ ಉಪಯೋಗಕ್ಕೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕರು ಇದನ್ನು ಬಳಸದಿರುವುದರಿಂದ ಈಜುಕೊಳ, ಲಾಂಗ್ ಟೆನಿಸ್, ಓಪನ್ ಜಿಮ್‌ಗಳು ತುಕ್ಕು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿ ಸರ್ಕಾರದ ಈ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಕ್ರೀಡಾ ಸಂಕೀರ್ಣವನ್ನು ಕೂಡಲೇ ಸಾರ್ವಜನಿಕರು ಮುಕ್ತವಾಗಿ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನಿವಾಸಿಗಳ ಸಂಘದ ಪ್ರಮುಖರಾದ ಕಲಗೋಡು ರತ್ನಾಕರ, ಗೌತಮ್, ಮಂಜಪ್ಪ, ಶೃತಿ ಗೌತಮ್, ರುದ್ರೇಶ್, ಅನುಸೂಯಮ್ಮ, ಸತ್ಯನಾರಾಯಣ, ಜಿ.ಡಿ. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.