ADVERTISEMENT

'ಗಾಡಿ ರಸ್ತೆ' ಅಭಿವೃದ್ಧಿ ಮಾಡಲಾಗಿದೆ: ಪುಣಜೆ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:17 IST
Last Updated 17 ನವೆಂಬರ್ 2017, 6:17 IST

ಹೊಸನಗರ: ಅಮ್ಮನಘಟ್ಟದ ದೇವರ ಕಾಡಿನ ವ್ಯಾಪ್ತಿಯಲ್ಲಿ ಪುಣಜೆ ಗ್ರಾಮದಲ್ಲಿ ಮೊದಲು ಎತ್ತಿನ ಗಾಡಿ ರಸ್ತೆ ಇತ್ತು. ಅದನ್ನು ಮಾತ್ರ ಅಭಿವೃದ್ಧಿ ಮಾಡಲಾಗಿದೆ ಹೊರತು ಹೊಸ ರಸ್ತೆ ನಿರ್ಮಾಣ ಮಾಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

60 ವರ್ಷಗಳಿಂದ ಅಮ್ಮನಘಟ್ಟದ ತಪ್ಪಲಿನ ಪುಣಜೆ ಗ್ರಾಮದಲ್ಲಿ ಸುಮಾರು 18 ಮನೆಗಳು ಇದೆ. ಗ್ರಾಮಸ್ಥರ ಬಹು ದಿನ ಬೇಡಿಕೆಯಂತೆ ಗ್ರಾಮ ವಿಕಾಸ ಯೋಜನೆಯಡಿ ಅಭಿವೃದ್ಧಿ ಮಾಡಲಾಗಿದೆ ಎಂದು ಗುರುವಾರ ಗ್ರಾಮಸ್ಥರು ಸ್ಪಷ್ಟನೆ ನೀಡಿದರು.

ಈ ಭಾಗದಿಂದ ಮಾವಿನಹೊಳೆ ಮೂಲಕ ರಾಷ್ಟ್ರೀಯ ಹೆದ್ದಾರಿ ವ್ಯವಸ್ಥಿತ ಸಂಪರ್ಕ ಇರಲಿಲ್ಲ. ಎತ್ತಿನ ಗಾಡಿ(ಕಚ್ಛಾ) ರಸ್ತೆಯಲ್ಲಿ ಶಾಲೆ ಮಕ್ಕಳು ಸೇರಿದಂತೆ ಗ್ರಾಮಸ್ಥರು 4 ಕಿ.ಮೀ ದೂರ ನಡೆದೇ ಹೋಗಬೇಕಿತ್ತು ಎಂದು ಗ್ರಾಮದ ದೇವಕಿ ಎಂಬುವವರ ದೂರು.

ADVERTISEMENT

ಜೋಳಿಗೆಯಲ್ಲಿ ಮಹಿಳೆ ಸಾಗಣೆ: ಕೆಲವು ವರ್ಷಗಳ ಹಿಂದೆ ಪಾರ್ವತಮ್ಮ ಎಂಬ ಮಹಿಳೆಗೆ ಹಾವು ಕಚ್ಚಿದಾಗ ಅವರನ್ನು ಸೂಕ್ತ ಸಂಪರ್ಕ ಇಲ್ಲದ ಕಾರಣ ಕಂಬಳಿ ಜೋಳಿಗೆ ಮೇಲೆ ಹೊತ್ತುಕೊಂಡು ಹೋಗುವಾಗ ರಸ್ತೆ ಮಧ್ಯದಲ್ಲಿ ಸಾವು ಕಂಡಿದ್ದರು ಎಂದು ಪಾರ್ವತಮ್ಮ ಪತಿ ಬೈರಪ್ಪ ದುಃಖಿಸಿದರು.

ಪುಣಜೆ ಗ್ರಾಮದ ಅರಣ್ಯ ಭೂಮಿಯಲ್ಲಿರುವ 18 ಮನೆಗಳಿಗೆ ಮನೆ, ನೀರು, ವಿದ್ಯುತ್ ಒಳಗೊಂಡಂತೆ ಮೂಲಸೌಕರ್ಯ ಸರ್ಕಾರದಿಂದ ನೀಡಲಾಗಿದೆ. ಈಗ ರಸ್ತೆಯನ್ನು ನಿರ್ಮಿಸಲು ಸರ್ಕಾರ ಮುಂದಾಗಿದ್ದು,  ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಗ್ರಾಮದ ಪುಟ್ಟಸ್ವಾಮಿ, ರಾಮದಾಸಯ್ಯ, ಲೋಕಪ್ಪ, ದೇವೇಂದ್ರಪ್ಪ ಆರೋಪ.

ಈ ಮೊದಲು ಇದ್ದ ಗಾಡಿರಸ್ತೆಯನ್ನು ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಒಮ್ಮೆಲೆ ತಿರುವು ಸಹಿತ ಏರು ತಪ್ಪಿಸಲು ಕೇವಲ 30 ಮೀಟರ್ ಹೊಸ ರಸ್ತೆ ನಿರ್ಮಾಣ ಆಗಿದೆ. ಮರಗಳನ್ನು ಕಡಿಯಲಾಗಿಲ್ಲ ಎಂದು ಯುವಕರಾದ ಅರುಣ, ಶಿವಕುಮಾರ, ಮಂಜಪ್ಪ ಅವರ ಸ್ಪಷ್ಟನೆ.

ಪೂರ್ವಾನುಮತಿ ಇಲ್ಲದೆ ಅರಣ್ಯ ರಸ್ತೆ ನಿರ್ಮಾಣ ಅರಣ್ಯ ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧ. ಈ ಕಾರ್ಯವನ್ನು ಸ್ಥಗಿತಗೊಳಿಸಲು ಸಂಬಂಧಪಟ್ಟವರಿಗೆ ನೊಟೀಸು ನೀಡಲಾಗಿದೆ. ಹೊಸ ರಸ್ತೆ ನಿರ್ಮಾಣದಿಂದ ಕಾಡುಕಳ್ಳರಿಗೆ ರತ್ನಗಂಬಳಿ ಹಾಕಿಕೊಟ್ಟಂತೆ ಆಗುತ್ತದೆ ಎಂಬುದು ವಲಯ ಅರಣ್ಯಾಧಿಕಾರಿ ಜಯೇಶ್ ಅಭಿಪ್ರಾಯ.

ಅರಣ್ಯ ಹಕ್ಕು ಸಮಿತಿಗೆ ಅರ್ಜಿ: ಅಮ್ಮನಘಟ್ಟದ ದೇವರ ಕಾಡಿನಲ್ಲಿ ರಸ್ತೆ ಕುರಿತಂತೆ ಅರಣ್ಯ ಹಕ್ಕು ಸಮಿತಿಗೆ ಅರ್ಜಿ ಸಲ್ಲಿಸಲಾಗುವುದು. ಸಮುದಾಯ ಉದ್ದೇಶಕ್ಕಾಗಿ ಅರಣ್ಯ ಭೂಮಿ ಬಳಕೆ ಮಾಡಲು ಅವಕಾಶ ಇದೆ.  ಅರಣ್ಯ ಹಾಗೂ ಕಂದಾಯ ಇಲಾಖೆಯ ಜಂಟಿ ಜಿಪಿಎಸ್ ಸರ್ವೆ ಮಾಡಲು ಮನವಿ ಮಾಡಲಾಗುವುದು ಎಂದು ಪುಣಜೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಗುರುಪಾದಪ್ಪ ಹೇಳಿದರು.

ಅಪ್ಪ, ಅಜ್ಜಂದಿರ ಕಾಲದಿಂದ ಅಮ್ಮನಘಟ್ಟದ ಕಾಡಿನಲ್ಲಿ ಜಮೀನು, ಮನೆ ಮಾಡಿಕೊಂಡು ನೆಲೆಸಿದ್ದೇವೆ.  ಸೂಕ್ತ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಅಡ್ಡಿ ಮಾಡಿದರೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಎದುರು ಪ್ರತಿಭಟನೆ ಅನಿವಾರ್ಯ ಎಂಬುದು ಗ್ರಾಮದ ಶೇಖರಪ್ಪ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.