ADVERTISEMENT

ಗ್ರಾಮದಲ್ಲಿ ಕೆಲಸ ನಿರ್ವಹಿಸಲು ಪ್ರಮಾಣ ಮಾಡಿದ ವೈದ್ಯರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 5:14 IST
Last Updated 6 ಜುಲೈ 2017, 5:14 IST

ಸಾಗರ: ಆತ್ಮತೃಪ್ತಿಯಿಂದ ವೈದ್ಯರು ಸೇವೆ ಮಾಡಿದಾಗ ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆಯಲು ಸಾಧ್ಯವಿದೆ ಎಂದು ಉಪವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ ತಿಳಿಸಿದರು. ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ವೈದ್ಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಬದಲಾದ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದಿವೆ. ಹೊಸಹೊಸ ಕಾಯಿಲೆಗಳೂ ಹುಟ್ಟಿಕೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ ವೈದ್ಯ ಸಿಬ್ಬಂದಿ ಸವಾಲಿನ ನಡುವೆಯೇ ಕೆಲಸ ಮಾಡಬೇಕಾಗುತ್ತದೆ. ವೈದ್ಯಕೀಯ ವೃತ್ತಿ ವ್ಯಾಪಾರೀಕರಣಗೊಳ್ಳುತ್ತಿದ್ದು, ಹಣ ಇದ್ದವರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಇಂತಹ ಹೊತ್ತಿನಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ’ ಎಂದರು.

ಕೆಲವೊಮ್ಮೆ ವೈದ್ಯರು ಶಕ್ತಿ ಮೀರಿ ಕೆಲಸ ಮಾಡಿದರೂ ಸಣ್ಣಪುಟ್ಟ ತಪ್ಪಿನಿಂದ ರೋಗಿಗಳಿಗೆ ತೊಂದರೆ ಆಗುತ್ತದೆ. ಇದನ್ನೇ ಗಂಭೀರವಾಗಿ ಪರಿಗಣಿಸಿ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಸಹ ನಡೆಯುತ್ತಿರುತ್ತದೆ. ಸಾರ್ವಜನಿಕರು ವೈದ್ಯ ಸಿಬ್ಬಂದಿ ಬಗ್ಗೆ ಕಾಳಜಿ ಹೊಂದಿರಬೇಕು. ವೈದ್ಯರು ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂಬಂಧ ಏರ್ಪಡುವ ನಿಟ್ಟಿನಲ್ಲಿ ಅನುಕರಣೀಯ ಸೇವೆ ಸಲ್ಲಿಸಲು ವೈದ್ಯರು ಪಣ ತೊಡಬೇಕು ಎಂದು ಸಲಹೆ ಕೊಟ್ಟರು.

ADVERTISEMENT

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ಪ್ರಧಾನ ಕಾರ್ಯದರ್ಶಿ ವೈ.ಮೋಹನ್ ಮಾತನಾಡಿ, ‘ಕಾಯಿಲೆ ಜಾಸ್ತಿಯಾದಂತೆ ಒಂದೊಂದು ಕಾಯಿಲೆಗೂ ಒಬ್ಬೊಬ್ಬ ವೈದ್ಯರು ಹುಟ್ಟಿಕೊಳ್ಳುತ್ತಿದ್ದಾರೆ. ಸರ್ಕಾರಿ ಸೇವೆ ಮಾಡಲು ವೈದ್ಯರು ಮುಂದೆ ಬರುತ್ತಿಲ್ಲ. ಸರ್ಕಾರ ಎಷ್ಟೇ ಸಂಬಳ ಕೊಟ್ಟರೂ ವೈದ್ಯರು ಗ್ರಾಮೀಣ ಸೇವೆಗೆ ಬಾರದೇ ಇರುವುದು ದುರದೃಷ್ಟಕರ ಸಂಗತಿ.

ಹೊಸದಾಗಿ ವೈದ್ಯ ಪದವಿ ಪಡೆಯುವವರು ವೈದ್ಯವೃತ್ತಿಯನ್ನು ಸೇವೆ ಎಂದು ಪರಿಗಣಿಸುವ ಅಗತ್ಯವಿದೆ’ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವೈದ್ಯರಿಗೆ ‘ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತೇವೆ’ ಎಂದು ಪ್ರಮಾಣ ವಚನ ಬೋಧಿಸಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿಡಾ. ಕೆ.ಪಿ. ಅಚ್ಯುತ್, ‘ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತೇವೆಎಂದು ಈ ದಿನ 25ಕ್ಕೂ ಹೆಚ್ಚು ವೈದ್ಯರು ಪ್ರಮಾಣ ಮಾಡಿದ್ದಾರೆ. 

ಗ್ರಾಮೀಣ ಸೇವೆ ಮಾಡಿದರೆ ಊರಿನ ಆರೋಗ್ಯ ಸ್ವಾಸ್ಥ್ಯ ಸಾಧ್ಯ’ ಎಂದು ತಿಳಿಸಿದರು. ವೇದಿಕೆಯಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಶೇಖರಪ್ಪ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಕಾಂತರಾಜ್, ಡಾ. ಪ್ರಭಾಕರ್, ಲತಾ ಜಿ. ಇದ್ದರು. ರೇಣುಕಾ ಪ್ರಾರ್ಥಿಸಿದರು. ಸವಿತಾ ಜಿ. ಸ್ವಾಗತಿಸಿದರು. ಡಾ. ಎಂ.ವಿ. ರಾಜು ಪ್ರಾಸ್ತಾವಿಕ ಮಾತನಾಡಿದರು. ಸುಶೀಲಾ ಬಾಯಿ ವಂದಿಸಿದರು. ಸುರೇಶ್ ಜವಳಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.