ADVERTISEMENT

ಬದುಕಿಗೆ ಆಸರೆಯಾದ ಸರ್ಕಾರದ ಸವಲತ್ತು

‘ಜನ–ಮನ’ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳ ಮನದಾಳ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:32 IST
Last Updated 14 ಮಾರ್ಚ್ 2017, 5:32 IST

ಶಿವಮೊಗ್ಗ: ಸರ್ಕಾರ ಜಾರಿಗೆ ತಂದ ಕ್ಷೀರ ಭಾಗ್ಯ ಯೋಜನೆ ಶಾಲಾ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಎರಡು ದಿನಕ್ಕೊಮ್ಮೆ ಬರೀ ಹಾಲು ನೀಡುವ ಬದಲು ಒಂದು ದಿನ ನಂದಿನಿ ಉತ್ಪನ್ನಗಳನ್ನು ನೀಡಬೇಕು.

ಮೂರು ದಿನ ನೀಡುವ ಹಾಲು ಆದಷ್ಟು ಶೀಘ್ರ ಐದು ದಿನಗಳಿಗೆ ವಿಸ್ತರಿಸಿದರೆ ಅನುಕೂಲವಾಗುತ್ತದೆ. ವಿದ್ಯಾಸಿರಿ ಯೋಜನೆ ಜಾರಿಗೆ ಬಂದ ಮೇಲೆ ಅಪ್ಪ–ಅಮ್ಮನ ಬಳಿ ಪೆನ್ನು, ಹಾಳೆಗೂ ಕೈ ಚಾಚುವುದು ತಪ್ಪಿದೆ. ಹಾಸ್ಟೆಲ್‌ ಸಿಗದ ವಿದ್ಯಾರ್ಥಿಗಳು ಕೊಠಡಿ ಬಾಡಿಗೆ ಪಡೆದು ಪದವಿ ಓದಲು ಈಗ ನೀಡುವ ಮಾಸಿಕ 1,500 ಸಾಲುತ್ತದೆ. ಸ್ನಾತಕೋತ್ತರ ಪದವಿಗೆ ಕನಿಷ್ಠ ತಿಂಗಳಿಗೆ ₹ 1 ಸಾವಿರ ಹೆಚ್ಚಳ ಮಾಡಿ...

ಈಗ ನೀಡುತ್ತಿರುವ ಹಣ ವರ್ಷಕ್ಕೆ ಒಂದು ಅಥವಾ ಎರಡು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಖಾತೆಗೆ ನೇರ ಜಮೆ ಮಾಡುವುದು ಸರಿ. ಆದರೆ, ಅದನ್ನೇ ಪ್ರತಿ ತಿಂಗಳು ನೀಡಿದರೆ ಅನುಕೂಲವಾಗುತ್ತದೆ.

ನಗರದ ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ವಾರ್ತಾ ಇಲಾಖೆ ಆಯೋಜಿಸಿದ್ದ ‘ಜನ–ಮನ’ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿ ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರ ಎದುರು ತಮ್ಮ ಮನದಾಳದ ಇಂಗಿತ ತೆರೆದಿಟ್ಟರು.

ವಿದ್ಯಾಸಿರಿ ಯೋಜನೆ ಹಣ ಪಡೆಯಲು ಕಾಲೇಜಿನಲ್ಲಿ ಶೇ 75ರಷ್ಟು ಹಾಜರಾತಿ ಕಡ್ಡಾಯ. ಆದರೆ, ಕೊನೆಯ ಎರಡು ತಿಂಗಳು ಪರೀಕ್ಷಾ ಸಿದ್ಧತೆಯ ಕಾರಣ ಯಾವ ವಿದ್ಯಾರ್ಥಿಗಳೂ ತರಗತಿಗಳಿಗೆ ಸರಿಯಾಗಿ ಹಾಜರಾಗು ವುದಿಲ್ಲ. ಹಾಗಾಗಿ, ಹಾಜರಾತಿ ಕೊರತೆಯ ಕಾರಣ ಕೊನೆಯ ಎರಡು ತಿಂಗಳು ಹಣ ಸಿಗುವುದೇ ಇಲ್ಲ ಎಂದು ಬಹುತೇಕ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಋಣಮುಕ್ತರ ಮನದಾಳ: ರೆಡಿಮೇಡ್ ಗಾರ್ಮೆಂಟ್‌ ನಡೆಸಲು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ  ಸಾಲ ಪಡೆದಿದ್ದೆ. ಉದ್ಯಮ ನಷ್ಟ ಅನುಭವಿಸುವಾಗ ದಿಕ್ಕೇ ತೋಚದಂತೆ ಆಗಿತ್ತು. ಅದೇ ಸಮಯದಲ್ಲಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದರು. ಅವರ ನಿರ್ಧಾರದ ಪರಿಣಾಮ ಮನುಷ್ಯಳಾದೆ ಎಂದು ರಜನಿ ಧನ್ಯವಾದ ಅರ್ಪಿಸಿದರು.

ಪ್ರವಾಸೋದ್ಯಮ ವಾಹನ ಖರೀದಿಸಲು ಹಿಂದುಳಿದ ವರ್ಗಗಳ ಇಲಾಖೆ ಸಬ್ಸಿಡಿ ₹ 1.75 ಲಕ್ಷ ಸಾಲ ನೀಡಿತ್ತು. ಸಬ್ಸಿಡಿ ಜತೆ ತೆಗೆದುಕೊಂಡ ಸಾಲವೂ ಮನ್ನಾ ಆಯಿತು. ಸಾಲ ಮುಕ್ತವಾದ ಕಾರಣ ವಾಹನ ಚಾಲನೆ ಮಾಡುತ್ತಾ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇನೆ ಎಂದು ತೀರ್ಥಹಳ್ಳಿಯ ಸತೀಶ್ ಹೇಳಿದರು.

ಪ್ರಾನ್ಸಿಸ್‌, ಕೌಸರ್ ಮತ್ತಿತರ ಫಲಾನುಭವಿಗಳ ಮಾತು ಅದೇ ದಾಟಿಯಲ್ಲಿತ್ತು. ಸಾಲ ಮನ್ನಾ ಪರಿಣಾಮ ಎಲ್ಲರಿಗೂ ಅನುಕೂಲವಾಗಿದೆ. ಹಾಗೆಂದು ಮತ್ತೆ ಸಾಲ ಮಾಡಿ, ಮನ್ನಾ ಮಾಡಬೇಕು ಎನ್ನುವ ಮನೋಭಾವ ಬೆಳೆಸಿಕೊಳ್ಳ ಬೇಡಿ ಎಂದು ಕಿವಿಮಾತು ಹೇಳಿದರು.

ಅಡುಗೆ ಅನಿಲ ಸಂಪರ್ಕ ಇದ್ದವರಿಗೂ ಸೀಮೆಎಣ್ಣೆ: ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ಮೇಲೆ ಉಚಿತ ಅಕ್ಕಿಯ ಜತೆಗೆ, ಎಣ್ನೆ, ಸಕ್ಕರೆ, ಹೆಸರು ಕಾಳು, ಉಪ್ಪು ಎಲ್ಲವೂ ಕೇವಲ ₹ 75ಕ್ಕೆ ದೊರೆಯುತ್ತಿದೆ. ಬಡವರ ಹಸಿವು ನೀಗಿದೆ ಎಂದು ಫರಿದಾಬಾನು, ನಾಸಿರ್‌ ಬಾನು, ವಿಜಯ್‌ಕುಮಾರ್, ಮಂಜುಳಾ, ಉಮೇಶ್, ಸುರೇಶ್, ವೀರಭದ್ರ ಕೃತಜ್ಞತೆ ಸಲ್ಲಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ಮುಂದಿನ ತಿಂಗಳಿನಿಂದ ಅಡುಗೆ ಅನಿಲ ಸಂಪರ್ಕ ಇದ್ದವರಿಗೂ ಒಂದು ಲೀಟರ್‌ ಸೀಮೆಎಣ್ಣೆ ವಿತರಿಸಲಾಗುವುದು. ಸೀಮೆ ಎಣ್ಣೆ ಬೇಕಿದ್ದವರು ಗ್ರಾಮ ಪಂಚಾಯ್ತಿಯಲ್ಲಿ ಹೆಸರು ನಮೂದಿಸ ಬೇಕು ಎಂದು ಸಲಹೆ ನೀಡಿದರು.

ಪ್ರತಿ ತಾಲ್ಲೂಕಿಗೂ ಸರ್ಕಾರಿ ಔಷದಾಲಯ: ರಾಜೀವ್‌ ಗಾಂಧಿ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಬಂದ ನಂತರ ಮಧ್ಯಮ ವರ್ಗದ ಕುಟುಂಬದವರೂ ಹೃದಯ ಶಸ್ತ್ರಚಿಕಿತ್ಸೆ ಮತ್ತಿತರ ದುಬಾರಿ ವೆಚ್ಚದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅವಕಾಶವಾಗಿದೆ. ಆದರೆ, ಶಸ್ತ್ರಚಿಕಿತ್ಸೆಯ ನಂತರ ಪ್ರತಿ ತಿಂಗಳು ಮಾತ್ರೆ, ಔಷಧಿಗೇ ಸಾಕಷ್ಟು ಹಣ ವ್ಯಯವಾಗುತ್ತದೆ. ಅದಕ್ಕಾಗಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರವೇ ಔಷಧ ಅಂಗಡಿ ತೆರೆದು ರಿಯಾಯಿತಿ ದರದಲ್ಲಿ ನೀಡಬೇಕು ಎಂದು ಫಲಾನುಭವಿಗಳು ಕೋರಿದರು.

ಸಂವಾದಕ್ಕೂ ಮೊದಲು ಸಚಿವ ಕಾಗೋಡು ತಿಮ್ಮಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಯೋಜನೆಗಳ ಜಾರಿಯ ಪರಿಣಾಮ ಜನರಿಗೆ ಸಾಕಷ್ಟು ಅನುಕೂಲವಾಗಿದೆ.  ಫಲವಾಗಿ ಯೋಜನೆಗಳಲ್ಲಿ ಹಲವು ಬದಲಾವಣೆ ಮಾಡಲು, ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಈ ಕಾರ್ಯಕ್ರಮ ದಿಕ್ಸೂಚಿಯಾಗಿದೆ ಎಂದರು.

ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಸರ್ಕಾರ ನೀಡಿದ ಹಣ ಜನರಿಗೆ ಸದುಪಯೋಗ ಆಗಬೇಕು. ಅಧಿಕಾರಿಗಳು ಪ್ರತಿ ಯೋಜನೆಯನ್ನೂ ಜನರಿಗೆ ತಲುಪಿಸಬೇಕು. ದುರುಪ ಯೋಗಕ್ಕೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಿಇಒ ಡಾ.ರಾಕೇಶ್ ಕುಮಾರ್, ಕಾಡಾ ಅಧ್ಯಕ್ಷ ಉಸ್ಮಾನ್‌, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಬಲ್ಕಿಶ್ ಬಾನು, ಮೇಯರ್ ಎನ್‌.ಏಳುಮಲೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.