ADVERTISEMENT

ಭೂಮಿ ಮಂಜೂರಾತಿ: ಮಾಜಿ ಸೈನಿಕರ ಮನವಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:03 IST
Last Updated 19 ಜನವರಿ 2017, 6:03 IST
ಭೂಮಿ ಮಂಜೂರಾತಿ: ಮಾಜಿ ಸೈನಿಕರ ಮನವಿ
ಭೂಮಿ ಮಂಜೂರಾತಿ: ಮಾಜಿ ಸೈನಿಕರ ಮನವಿ   

ಸಾಗರ: ‘ಪ್ರಾಂತ್ಯ ಮಾಜಿ ಯೋಧರ ಕಲ್ಯಾಣ ಟ್ರಸ್ಟ್‌ನ ಸದಸ್ಯರು ಬುಧವಾರ ಹಾಲಿ ಹಾಗೂ ಮಾಜಿ ಸೈನಿಕರಿಗೆ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರಿಗೆ ಮನವಿ ಸಲ್ಲಿಸಿದರು.

‘ಈಗಾಗಲೇ ಮಾಜಿ ಸೈನಿಕರಿಗೆ ಭೂಮಿ ಮಂಜೂರು ಮಾಡುವಂತೆ ಟ್ರಸ್ಟ್‌ನಿಂದ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಸಾಗರ, ಹೊಸ
ನಗರ, ಸೊರಬ ತಾಲ್ಲೂಕುಗಳಲ್ಲಿ 92ಕ್ಕೂ ಹೆಚ್ಚು ಮಾಜಿ ಹಾಗೂ ಹಾಲಿ ಸೈನಿಕರು ಇದ್ದಾರೆ. ನಿವೃತ್ತಿಯ ನಂತರ ಸೈನಿಕರ ಬದುಕು ನೆಮ್ಮದಿಯಿಂದ ಇರಬೇಕಾದರೆ ಅವರಿಗೆ ಭೂಮಿ ಮಂಜೂರಾತಿ ಮಾಡುವುದು ಅತ್ಯಗತ್ಯ’ ಎಂದು ಒತ್ತಾಯಿಸಲಾಗಿದೆ.

‘ಜೀವನದ ಪ್ರಮುಖ ಘಟ್ಟದಲ್ಲಿ ದೇಶಕ್ಕಾಗಿ ದುರ್ಗಮ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರ ಅನೇಕ ಮಾಜಿ ಸೈನಿಕರಿಗೆ ಜೀವನ ಸಾಗಿಸುವುದು ಕಷ್ಟಸಾಧ್ಯವಾಗಿದೆ. ಮಾಜಿ ಸೈನಿಕರಿಗೆ ಭೂಮಿ ಮಂಜೂರಾತಿ ಮಾಡಿದಲ್ಲಿ ಅದು ಅವರ ಬದುಕಿಗೆ ಆಸರೆಯಾಗುತ್ತದೆ’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

‘ಮಾಜಿ ಸೈನಿಕರಿಗೆ ಭೂ ಮಂಜೂರಾತಿಯನ್ನು ಆದ್ಯತೆ ಮೇರೆಗೆ ನೀಡಬೇಕು ಎಂದು ಕಾನೂನಿನಲ್ಲಿ ಹೇಳಲಾಗಿದೆ. ಈ ಅಂಶವನ್ನು ಪರಿಗಣಿಸಿ ಈ ಪ್ರಾಂತ್ಯದ ಮಾಜಿ ಹಾಗೂ ಹಾಲಿ ಸೈನಿಕರಿಗೆ ಭೂಮಿ ಮಂಜೂರಾತಿ ಮಾಡಬೇಕು’ ಎಂದು ಮನವಿಯಲ್ಲಿ ಕೋರಲಾಗಿದೆ.

ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ‘ಮಾಜಿ ಸೈನಿಕರ ಬೇಡಿಕೆ ನ್ಯಾಯಯುತವಾಗಿದ್ದು, ಈ ಸಂಬಂಧ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಜತೆ ಚರ್ಚಿಸುತ್ತೇನೆ’ ಎಂದು  ಹೇಳಿದರು.

ಮಾಜಿ ಯೋಧರ ಕಲ್ಯಾಣ ಟ್ರಸ್ಟ್‌ನ ಅಧ್ಯಕ್ಷ ರಂಗರಾಜು ಬಾಳೆಗುಂಡಿ, ಗೌರವಾಧ್ಯಕ್ಷ ಬಿ.ಟಿ.ಸೋಮನ್‌, ಉಪಾಧ್ಯಕ್ಷ ಈಶ್ವರಪ್ಪ, ಕಾರ್ಯದರ್ಶಿ ವಿಷ್ಣು ಹೆಗಡೆ, ಖಜಾಂಚಿ ಕಿರಣ್‌ ಕುಮಾರ್, ಗಿರೀಶ್‌ ತಲ್ಲೂರು, ನಾರಾಯಣ ನಾಯ್ಕ, ವಸಂತ್‌ ಕುಗ್ವೆ, ಸುಭಾಷ್‌ ಕೌತಳ್ಳಿ, ಎಸ್.ಪಿ.ದೇವರಾಜ್‌ ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.