ADVERTISEMENT

ಗೋಮಾಳ ಭೂಮಿಯ ಹಕ್ಕು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 9:23 IST
Last Updated 22 ಆಗಸ್ಟ್ 2017, 9:23 IST
ಜಿಲ್ಲಾಧಿಕಾರಿ ಕಚೇರಿ ಎದುರು ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಜಿಲ್ಲಾಧಿಕಾರಿ ಕಚೇರಿ ಎದುರು ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ತುಮಕೂರು: ಸರ್ಕಾರಿ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ‍್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಕನಿಷ್ಠ ಐದು ವರ್ಷ ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರನ್ನು ಒಕ್ಕಲೆಬ್ಬಿಸಬಾರದು. ಅವರಿಗೆ ಕೂಡಲೇ ಭೂಮಿ ಮಂಜೂರು ಮಾಡಿಕೊಡ
ಬೇಕು. ವಸತಿ ರಹಿತರಿಗೆ ವಸತಿ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ, ಕಂದಾಯ, ಇನಾಂ, ಗೋಮಾಳ, ಸಾಮಾಜಿಕ ಅರಣ್ಯ. ಖಾರೀಜ್ ಖಾತಾ, ಗ್ರಾಮ ಠಾಣಾ, ಪೈಸಾರಿ, ಬಗರ್ ಹುಕುಂ ಅಡಿ ಉಳುಮೆ ಮಾಡಿರುವ ರೈತರಿಗೆ ಕಿರುಕುಳ ನೀಡಬಾರದು. ಈ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿರುವ ಎಲ್ಲರಿಗೂ ಕೂಡಲೇ ಭೂಮಿ ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಭೂನ್ಯಾಯ ಮಂಡಳಿಯಲ್ಲಿ ಭೂಮಿ ಹಂಚಿಕೆಯಾಗಿದ್ದರೂ ಫಲಾನುಭವಿಗಳಿಗೆ ನೀಡಿಲ್ಲ. ಗೋಮಾಳದಲ್ಲಿ ಉಳುಮೆ ಮಾಡುತ್ತಿರುವವರು ಪಟ್ಟಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಅವರಿಗೆ ಪಟ್ಟಾ ನೀಡಿಲ್ಲ. ಸಾಗುವಳಿ ಚೀಟಿ ಇದ್ದರೂ ಖಾತೆ ಮಾಡಿಕೊಟ್ಟಿಲ್ಲ ಎಂದು ದೂರಿದರು.

‘ಹೋರಾಟ ಮಾಡಿದಾಗಲೆಲ್ಲ ನಮ್ಮ ಪರವಾಗಿರುವಂತೆ ತೋರಿಸುವ ಸರ್ಕಾರ ಪದೇ ಪದೇ ಮಾತು ತಪ್ಪುತ್ತಿದೆ. ತುಮಕೂರು, ಕೊರಟಗೆರೆ, ಮಧುಗಿರಿ, ಶಿರಾ ತಾಲ್ಲೂಕುಗಳಲ್ಲಿ ಸಮಸ್ಯೆಗಳು ಹೆಚ್ಚಿವೆ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಮತಳ ಕರ್ನಾಟಕ ಜನಶಕ್ತಿಯ ಕುಮಾರ್‌, ಜನಶಕ್ತಿಯ ಮಲ್ಲಿಗೆ, ಪಿಯುಸಿಎಲ್‌ನ ದೊರೈರಾಜ್‌, ಜನಾಂದೋಲನ ಮಹಾ ಮೈತ್ರಿಯ ಯತಿರಾಜ್‌, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಿತಿಯ ತಿಪಟೂರು ಕೃಷ್ಣ, ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ವಿರೂಪಾಕ್ಷ ಡಾಗೇರಹಳ್ಳಿ, ಕೋರಾ ರಾಜು, ಎನ್‌.ಕೆ.ಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.