ADVERTISEMENT

ನೀರಿಗಾಗಿ ಪರದಾಡುವ ಸ್ಥಿತಿ ನಮ್ಮದು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:27 IST
Last Updated 22 ಅಕ್ಟೋಬರ್ 2017, 7:27 IST

ಪಾವಗಡ: ಇರೋ ಒಬ್ಬ ಮಗ ದೇಶ ಕಾಯೋಕೆ ಹೋಗಿದ್ದಾನೆ. ವಯಸ್ಸಾದ ನಾವು ಕುಡಿಯಲು ನೀರು ಇಲ್ಲದೇ ನೀರು ಕೊಡಿಯಂತ ಕೇಳುವ ಪರಿಸ್ಥಿತಿ ಬಂದಿದೆ.
ಇದು ತಾಲ್ಲೂಕಿನ ಕೋಣನಕುರಿಕೆ ಗ್ರಾಮದ 62 ವರ್ಷದ ಗಿರಿಯಪ್ಪ, ನಾಗಮ್ಮ ದಂಪತಿಯ ದುಃಖದ ಮಾತು.

ಗುಜ್ಜನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣನಕುರಿಕೆ ಗ್ರಾಮದಲ್ಲಿ ಜೀವನ ಸಾಗಿಸುತ್ತಿರುವ ಸೈನಿಕನ ಪೋಷಕರು, ಹಲ ತಿಂಗಳುಗಳಿಂದ ನೀರಿಲ್ಲದೆ ಪರದಾಡುತ್ತಿದ್ದಾರೆ. ಅಕ್ಕ ಪಕ್ಕದ ಮನೆಗೆ ಸಾಕಷ್ಟು ನೀರು ಬರುತ್ತದೆ. ರಾಜಕೀಯ ದುರುದ್ದೇಶದಿಂದಾಗಿ ಇವರ ಮನೆಗೆ ನೀರು ಬರದಂತೆ ಕಿಡಿಗೇಡಿಗಳು ವ್ಯವಸ್ಥಿತ ಹುನ್ನಾರ ನಡೆಸಿದ್ದಾರೆ ಎಂಬ ಆರೋಪಗಳಿವೆ.

ಇವರಿಬ್ಬರ ದಿಕ್ಕು ವಿಚಾರಿಸುವವರು ಗ್ರಾಮದಲ್ಲಿ ಯಾರೂ ಇಲ್ಲ. ಇರುವ ಒಬ್ಬ ಮಗ ಸಿ.ಆರ್.ಪಿ.ಎಫ್ ಯೋಧ, ಒರಿಸ್ಸಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇದ್ದ ಕೊಳಾಯಿ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಮತ್ತೆ ಸಂಪರ್ಕ ಕೊಡಿ ಎಂದರೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ.

ADVERTISEMENT

ಅಕ್ಕ ಪಕ್ಕದ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕೆಲ ಮುಖಂಡರು, ಅಧಿಕಾರಿಗಳೊಂದಿಗೆ ಷಾಮೀಲಾಗಿ ಸಮಸ್ಯೆ ಮಾಡುತ್ತಿದ್ದಾರೆ ಎಂದು ಗಿರಿಯಪ್ಪ ಅಳಲನ್ನು ತೋಡಿಕೊಂಡರು.

ವಯಸ್ಸಾಗಿದೆ. ಕೈಲಾಗದಿದ್ದರೂ ಜೀವ ಉಳಿಸಿಕೊಳ್ಳಲು ನೀರು ಹೊತ್ತು ತರಬೇಕು. ನಾವು ಮಾಡಿರುವ ತಪ್ಪಾದರೂ ಏನು?. ಅನಗತ್ಯವಾಗಿ ವೃದ್ಧರನ್ನು ಪಂಚಾಯಿತಿ ಅಧಿಕಾರಿಗಳು ಗೋಳಾಡಿಸುತ್ತಿದ್ದಾರೆ ಎಂದು ನಾಗಮ್ಮ ದೂರಿದರು. ಗುಜ್ಜನಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿಕ್ಕಣ್ಣ ಅವರ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದರೆ ಅವರು ಕರೆಗಳನ್ನು ಸ್ವೀಕರಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.