ADVERTISEMENT

ವಿತರಣೆ ಲೋಪದಿಂದ ನೀರಿನ ಸಮಸ್ಯೆ ಗಂಭೀರ

ಕುಣಿಗಲ್ ದೊಡ್ಡಕೆರೆಯಲ್ಲಿ ಜೂನ್‌ ತಿಂಗಳಿಗಾಗುವಷ್ಟು ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 9:26 IST
Last Updated 17 ಜನವರಿ 2017, 9:26 IST
ವಿತರಣೆ ಲೋಪದಿಂದ ನೀರಿನ ಸಮಸ್ಯೆ ಗಂಭೀರ
ವಿತರಣೆ ಲೋಪದಿಂದ ನೀರಿನ ಸಮಸ್ಯೆ ಗಂಭೀರ   

ಕುಣಿಗಲ್: ಪಟ್ಟಣದಲ್ಲಿ ಕುಡಿಯುವ ನೀರಿನ ಲಭ್ಯತೆ ಸಾಕಷ್ಟಿದ್ದರೂ ವಿತರಣಾ ವ್ಯವಸ್ಥೆಯ ಲೋಪದಿಂದ ನಿರಂತರ ನೀರಿನ ಸಮಸ್ಯೆ ಎದುರಾಗಿದೆ.
ನೀರಿನ ಪೂರೈಕೆ ಹಾಗೂ ಬಳಕೆಯಲ್ಲಿ ಅಧಿಕಾರಿಗಳು, ನಾಗರಿಕರು ಎಚ್ಚರಿಕೆ ಕಳೆದುಕೊಂಡರೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವುದು ನಿಶ್ಚಿತ ಎಂಬ ಆತಂಕ ಎಲ್ಲರನ್ನು ಕಾಡುತ್ತಿದೆ.
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಈ ಹಿಂದೆ ಶಾಸಕರಾಗಿದ್ದ ಎಚ್.ನಿಂಗಪ್ಪ ಅವರ ಅವಧಿಯಲ್ಲಿ ₹ 7 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿತ್ತು. ಬಿ.ಬಿ.ರಾಮಸ್ವಾಮಿಗೌಡ ಅವಧಿಯಲ್ಲಿ ಯೋಜನೆ ಪೂರ್ಣಗೊಂಡು, ದೊಡ್ಡಕೆರೆಗೆ ಹೇಮಾವತಿ ನೀರು ಹರಿಸಲಾಯಿತು. 
ದೊಡ್ಡಕೆರೆಯಲ್ಲಿನ ಹೇಮಾವತಿ ನೀರಿನ ಜತೆಗೆ 94 ಕೊಳವೆ ಬಾವಿಗಳಿಂದ ಕುಡಿಯುವ ನೀರು ಪಡೆಯಲಾಗುತ್ತಿತ್ತು. ಈ ಎಲ್ಲ ವ್ಯವಸ್ಥೆಗಳಿಂದಾಗಿ ಪಟ್ಟಣದಲ್ಲಿ ನೀರಿನ ಅಭಾವದ ಬಿಸಿ ತಟ್ಟಿರಲಿಲ್ಲ.
ಆದರೆ, ಈಗ ಪಟ್ಟಣದಲ್ಲಿ ಒಳಚರಂಡಿ, ಹೆದ್ದಾರಿ ವಿಸ್ತರಣೆ ಹಾಗೂ ಮುಖ್ಯ ರಸ್ತೆಗಳ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ರಸ್ತೆ ಅಗೆದಿರುವ ಕಾರಣ ಕುಡಿಯುವ ನೀರಿನ ವಿತರಣಾ ಮಾರ್ಗದ ಪೈಪ್‌ಲೈನ್ ನಾಶವಾಗಿದೆ. ಇದರಿಂದ ನೀರು ರಸ್ತೆಗೆ ಹರಿಯುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಕನಿಷ್ಠ ಆರು ತಿಂಗಳ ಕಾಲ ನಡೆಯಲಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಎಚ್ಚರಿಕೆಯಿಂದ ಕೆಲಸ ಮಾಡುವ ಅಗತ್ಯವಿದೆ.
ವಿತರಣಾ ವ್ಯವಸ್ಥೆಯ ದೋಷದಿಂದ ಪಟ್ಟಣದ 4, 7ನೇ ವಾರ್ಡ್‌ನಲ್ಲಿ ವಾರಕೊಮ್ಮೆ, ಕುವೆಂಪು ನಗರ ವ್ಯಾಪ್ತಿಯಲ್ಲಿ ವಾರಕ್ಕೆ ಎರಡು ದಿನ ನೀರು ಸರಬರಾಜು ಮಾಡಲಾಗುತ್ತಿದೆ.
ಸಂತೆ ಮೈದಾನದಲ್ಲಿರುವ ನೀರು ಶುದ್ಧೀಕರಣ ಘಟಕದ ನೌಕರರ ಬೇಜವಾಬ್ದಾರಿಯಿಂದ ಶುದ್ಧೀಕರಿಸದ ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ದೂರು ಬಂದರೂ ಕ್ರಮ ತೆಗೆದುಕೊಂಡಿಲ್ಲ ಎಂದು ನಾಗರಿಕರಾದ ನಾರಾಯಣಗೌಡ, ಕೆ.ಟಿ.ರಮೇಶ್ ಆರೋಪಿಸಿದರು.
ಪುರಸಭೆ ಹಿರಿಯ ಸದಸ್ಯ ರಂಗಸ್ವಾಮಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ವಿತರಣಾ ವ್ಯವಸ್ಥೆ ಸರಿಪಡಿಸಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಬೇಕು ಎಂದರು.
ಸಿಬ್ಬಂದಿ ಕೊರತೆ: ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಆದರೂ ಎಲ್ಲ ವಾರ್ಡ್‌ಗಳಿಗೂ ನಿತ್ಯ ನೀರು ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ನಗರೋತ್ಥಾನ ಯೋಜನೆಯಡಿ ₹ 7.5 ಕೋಟಿ ಮಂಜೂರಾಗಿದೆ. ಶೇ 75 ರಷ್ಟು ಹಣ ಕುಡಿಯುವ ನೀರಿಗೆ ಬಳಸಲಾಗುತ್ತದೆ ಎಂದು ಮುಖ್ಯಾಧಿಕಾರಿ ಪಂಕಜಾರೆಡ್ಡಿ ತಿಳಿಸಿದರು.
ದೊಡ್ಡಕೆರೆ ನೀರನ್ನು ಕೆಲ ರೈತರು ಕದಿಯುತ್ತಿದ್ದಾರೆ. ತಹಶೀಲ್ದಾರ್, ಪೊಲೀಸ್ ಇಲಾಖೆ ಹಾಗೂ ಹೇಮಾವತಿ ನಾಲಾ ವಲಯದ ಕಚೇರಿಗೆ ಈಗಾಗಲೇ ದೂರು ನೀಡಲಾಗಿದೆ. ಮುಂದಿನ ದಿನಗಳಲ್ಲಿ ನೀರು ಶುದ್ಧೀಕರಣ ಘಟಕದ ನೀರು ಶೇಖರಣಾ ಸಾಮರ್ಥ್ಯ ಹೆಚ್ಚಿಸಲಾಗುವುದು. ಪ್ರತಿ ಮನೆಗೆ ಮೀಟರ್ ಅಳವಡಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.