ADVERTISEMENT

ಸಂಚಾರ ಸಮಸ್ಯೆ ಖುದ್ದು ವೀಕ್ಷಣೆ

ಎಸ್‌ಪಿ ಇಶಾ ಪಂಥ್‌ ನಗರ ಪ್ರದಕ್ಷಿಣೆ, ವಾಹನ ದಟ್ಟಣೆ ನಿಯಂತ್ರಣ ಕುರಿತು ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 7:25 IST
Last Updated 5 ಜನವರಿ 2017, 7:25 IST

ತುಮಕೂರು: ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂಥ್‌ ಬುಧವಾರ ನಗರದ ಪ್ರಮುಖ ರಸ್ತೆ, ಜಂಕ್ಷನ್‌, ಬಸ್‌ ನಿಲ್ದಾಣ ಹಾಗೂ ಹೊರ ವರ್ತುಲ ರಸ್ತೆ ಉದ್ದಕ್ಕೂ ಸಂಚರಿಸಿ ವಾಹನ ದಟ್ಟಣೆ, ಅವೈಜ್ಞಾನಿಕ ರಸ್ತೆ ಹಂಪ್‌ ಮೊದಲಾದ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು.

ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆ, ಜಯನಗರ ಜಂಕ್ಷನ್‌, ಎಸ್‌.ಎಸ್‌.ಪುರಂ, ಬಟವಾಡಿ, ಶಿವಕುಮಾರ ಸ್ವಾಮೀಜಿ ವೃತ್ತ, ಉಪ್ಪಾರಹಳ್ಳಿ ಮೇಲ್ಸೇತುವೆ, ರಿಂಗ್‌ ರಸ್ತೆ, ಸರ್ಕಾರಿ ಬಸ್‌ ನಿಲ್ದಾಣ, ಎಂ.ಜಿ.ರಸ್ತೆ, ಶಿರಾ ಗೇಟ್‌, ಗುಬ್ಬಿ ಗೇಟ್‌ ಸೇರಿ ಹಲವು ಕಡೆ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದು ವೀಕ್ಷಿಸಿದರು. 

ಪ್ರಮುಖ ವೃತ್ತಗಳಲ್ಲಿರುವ ಸಿಗ್ನಲ್‌ ದೀಪಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಅಗತ್ಯವಿರುವ ಕಡೆ ಸಿಗ್ನಲ್‌ ದೀಪ ಅಳವಡಿಸುವ ಕುರಿತು ಪರಿಶೀಲಿಸಿದರು. ಕೆಲವೆಡೆ ಕಾಲ್ನಡಿಗೆಯಲ್ಲಿ ಸಾಗಿ ಪರಿಸ್ಥಿತಿ ಅವಲೋಕಿಸಿದರು.

ನಗರದಲ್ಲಿ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದನ್ನು ಕಂಡ ಅವರು, ಪಾರ್ಕಿಂಗ್‌ ವ್ಯವಸ್ಥೆ, ಸಂಚಾರ ದಟ್ಟಣೆ ಕಡಿಮೆ ಮಾಡುವ ಕ್ರಮಗಳ ಕುರಿತು ಕಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಡಿವೈಎಸ್‌ಪಿ ಚಿದಾನಂದಸ್ವಾಮಿ, ನಗರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಗಂಗಲಿಂಗಯ್ಯ, ಸಂಚಾರಿ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ಗಳಾದ ವಿಜಯಲಕ್ಷ್ಮಿ, ಲಕ್ಷ್ಮಯ್ಯ ಇದ್ದರು. ಎರಡು ದಿನದ ಹಿಂದಷ್ಟೇ ಇಶಾ ಪಂಥ್‌ ಅಧಿಕಾರ ಸ್ವೀಕರಿಸಿ, ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.