ADVERTISEMENT

ಸತ್ಯಮಂಗಲದಲ್ಲಿ ಸಮಸ್ಯೆಗಳ ತಾಂಡವ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 9:04 IST
Last Updated 21 ಆಗಸ್ಟ್ 2017, 9:04 IST

ತುಮಕೂರು: ಮಹಾನಗರ ಪಾಲಿಕೆಯ ಅತ್ಯಂತ ದೊಡ್ಡ ವಾರ್ಡ್‌ಗಳಲ್ಲಿ ಒಂದಾದ ಸತ್ಯಮಂಗಲ ವಾರ್ಡ್‌ನಲ್ಲಿ ಎತ್ತ ನೋಡಿದರೂ ಸಮಸ್ಯೆಗಳೇ ಕಾಣುತ್ತವೆ. ಈ ವಾರ್ಡ್‌ ಅನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇತ್ತ ಹಳ್ಳಿಯೂ ಅಲ್ಲ, ನಗರವೂ ಅಲ್ಲ ಎಂಬಂಥ ಸ್ಥಿತಿಗೆ ದೂಡಲಾಗಿದೆ ಎಂದು ಬಡಾವಣೆ ನಿವಾಸಿಗಳು ದೂರುತ್ತಾರೆ.

ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ರಬ್ಬರ್ ಕಾರ್ಖಾನೆಯು ಇದೇ ಬಡಾವಣೆಯ ಜನರ ನೆಮ್ಮದಿಯನ್ನು ಕಿತ್ತುಕೊಂಡಿದೆ. ಈ ಕಾರ್ಖಾನೆಯಿಂದ ಪರಿಸರ ಹದಗೆಡುತ್ತಿದ್ದರೂ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದ್ದಾರೆ. ಪಾಲಿಕೆಯ ಸದಸ್ಯರಿಗೆ ಇದರ ಅರಿವಿದ್ದರೂ ಅವರು ಮೌನವಹಿಸಿರುವುದು ಮಾತ್ರ ಸೋಜಿಗವಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಈ ರಬ್ಬರ್‌ ಕಾರ್ಖಾನೆಯ ಸಮೀಪವೆ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಖಾಸಗಿ ‍ಪ್ರಾಥಮಿಕ ಹಾಗೂ ‍ಪದವಿ ಕಾಲೇಜು ಇದೆ. ಶ್ರೀರಾಮನ ದೇವಸ್ಥಾನವಿದೆ. ಇಷ್ಟೆಲ್ಲ ಇದ್ದರೂ ಈ ಕಾರ್ಖಾನೆಯಿಂದ ಆಗುತ್ತಿರುವ ಸಮಸ್ಯೆಯನ್ನು ತಪ್ಪಿಸಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ.

ADVERTISEMENT

‘ಜಿಲ್ಲಾಧಿಕಾರಿಗೂ ದೂರು ನೀಡಿದ್ದೇವೆ. ಮಧ್ಯಾಹ್ನದ ವೇಳೆ ಬಿಡುವ ಗಬ್ಬು ವಾಸನೆಯಿಂದ ಮಕ್ಕಳಿಗೆ ಪಾಠ ಮಾಡುವುದು ಸಹ ಸಾಧ್ಯವಾಗುತ್ತಿಲ್ಲ. ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ಶಿಕ್ಷಕರೊಬ್ಬರು. ‘ಕೈಗಾರಿಕೆಗಳು ಬಿಡುವ ದುರ್ವಾಸನೆ ತಲೆನೋವಾಗಿ ಪರಿಣಮಿಸಿದೆ. ಅದೆಷ್ಟೋ ಸಾರಿ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ‘ ಎಂದು ನಿವಾಸಿ ಸುರೇಶ್‌ ಆರೋಪಿಸುತ್ತಾರೆ.

ರಸ್ತೆ ಚಿಕ್ಕದಿದೆ ಎನ್ನುವ ಕಾರಣಕ್ಕೆ ನಗರ ಸಾರಿಗೆ ಬಸ್ಸು ಕಾಲೋನಿಯ ಒಳಕ್ಕೆ ಬರುತ್ತಿಲ್ಲ. ಹೀಗಾಗಿ ಶಾಲೆ, ಕಾಲೇಜುಗಳಿಗೆ ಹೋಗುವ ಮಕ್ಕಳು, ನಗರಕ್ಕೆ ಹೋಗುವ ಜನರು ದಿನನಿತ್ಯ ಕಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ.

ಕುಡಿಯಲು ನೀರಿಲ್ಲ, ಬಸ್ಸಿನ ಸೌಲಭ್ಯ ಸರಿಯಾಗಿಲ್ಲ. ಒಂದು  ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲಿಲ್ಲವಾಗಿದೆ.  ಸ್ವಚ್ಛತೆಯ ಬಗ್ಗೆಯಂತೂ ಕೇಳಬೇಕಾಗಿಲ್ಲ.ಇಂದಿಗೂ ಬಯಲು ಬಹಿರ್ದೆಸೆ ಜಾರಿಯಲ್ಲಿರುವುದು ಬಡಾವಣೆ ಸುತ್ತಾಡಿದಾಗ ಕಣ್ಣಿಗೆ ಕಾಣುತ್ತದೆ.

‘ಮಳೆ ನೀರು ಹೋಗಲು ಚರಂಡಿಯನ್ನು ನಿರ್ಮಿಸಿದರೂ ಆ ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ. ನೀರು ಅರ್ಧದಲ್ಲೇ ನಿಂತು ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ಗುಣಮಟ್ಟ ಅಲ್ಲದ ಕೆಲಸ ಕಾರ್ಯಗಳಿಗೆ ಕೈಗನ್ನಡಿ ಹಿಡಿದಂತೆ ಈ ಚರಂಡಿಗಳು ನಿಂತಿವೆ.

ನಮ್ಮ ವ್ಯಾಪ್ತಿಯ ಬೀಟ್ ಪೋಲಿಸ್‌ ಅಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕತ್ತಲಾದರೆ ಸಾಕು ಕುಡುಕರ ಹಾವಳಿ. ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟವಾಗಿದೆ ಎನ್ನುತ್ತಾರೆ ನಿವಾಸಿ ಶೈಲಮ್ಮ.

ಈ ಹಿಂದೆ ಗ್ರಾಮ ಪಂಚಾಯಿತಿಗೆ ಸೇರಿದ್ದ ಈ ಪ್ರದೇಶವನ್ನು ಪಾಲಿಕೆಗೆ ಸೇರಿಸಿ ವರ್ಷಗಳೇ ಕಳೆದಿವೆ. ಆದರೆ ಈ ಪ್ರದೇಶ ಹಳ್ಳಿಯಾಗಿಯೇ ಉಳಿದಿದೆ. ನಗರದ ವಾತಾವರಣವೇ ಇಲ್ಲ. ಯಾವ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ ಎಂದು ನಿವಾಸಿ ಸುರೇಂದ್ರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.