ADVERTISEMENT

ಸರ್ಕಾರಿ ಭೂಮಿ ಹಸ್ತಾಂತರ ಅಧಿಕಾರ ಜಿಲ್ಲಾಧಿಕಾರಿಗೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 10:14 IST
Last Updated 11 ಏಪ್ರಿಲ್ 2017, 10:14 IST
ಸರ್ಕಾರಿ ಭೂಮಿ ಹಸ್ತಾಂತರ ಅಧಿಕಾರ ಜಿಲ್ಲಾಧಿಕಾರಿಗೆ
ಸರ್ಕಾರಿ ಭೂಮಿ ಹಸ್ತಾಂತರ ಅಧಿಕಾರ ಜಿಲ್ಲಾಧಿಕಾರಿಗೆ   

ತುಮಕೂರು: ‘ಕೊಳಚೆ ನೀರು ಶುದ್ಧೀಕರಣ ಘಟಕ(ಎಸ್‌ಟಿಪಿ) ಹಾಗೂ ಒಳಚರಂಡಿ ಕಾಮಗಾರಿಗೆ ಅಗತ್ಯವಿರುವ ಸರ್ಕಾರಿ ಭೂಮಿ ಹಸ್ತಾಂತರ ಮಾಡುವ ಸಂಪೂರ್ಣ ಅಧಿಕಾರ ಜಿಲ್ಲಾಧಿಕಾರಿಗೆ ನೀಡಲಾಗಿದೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ನಗರೋತ್ಥಾನ ಯೋಜನೆ ಮೂರನೇ ಹಂತದಲ್ಲಿ ಹಂಚಿಕೆಯಾದ ಅನುದಾನ ಹಾಗೂ ಸ್ಥಳೀಯ ಸಂಸ್ಥೆಗಳು ರೂಪಿಸಿರುವ ಕ್ರಿಯಾಯೋಜನೆ ಬಗ್ಗೆ   ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

‘ಕುಣಿಗಲ್‌ ಪುರಸಭೆ ವ್ಯಾಪ್ತಿಯಲ್ಲಿ ಎಸ್‌ಟಿಪಿ ಕಾಮಗಾರಿಗೆ ಬೇಕಿರುವ 6.7 ಎಕರೆ ಭೂಮಿಯನ್ನು ಈವರೆಗೂ ಹಸ್ತಾಂತರಿಸಿಲ್ಲ. ಈ ಭೂಮಿಯನ್ನು ಪಶುಪಾಲನೆ ಇಲಾಖೆಯು ಈ ಹಿಂದೆ ಸ್ಟಡ್‌ ಫಾರ್ಮ್‌್ ಮಾಲೀಕರಿಗೆ ಗುತ್ತಿಗೆ ನೀಡಿತ್ತು. ಈಗ ಭೂಮಿ ವಾಪಸ್‌ ಮಾಡುವಂತೆ  ಪಶುಪಾಲನಾ ಇಲಾಖೆ ನಿರ್ದೇಶಕರು ಪತ್ರ ಬರೆದಿದ್ದರೂ ಮಾಲೀಕರು ಒಪ್ಪಿಲ್ಲ’ ಎಂದು ಅನುಪಮಾ ಅವರು ಸಚಿವರ ಗಮನಕ್ಕೆ ತಂದರು.

ADVERTISEMENT

ಜಯಚಂದ್ರ ಮಾತನಾಡಿ, ‘10 ಎಕರೆ ಒಳಗಿನ ಸರ್ಕಾರಿ ಭೂಮಿ ಹಸ್ತಾಂತರಿಸುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಇದಕ್ಕಾಗಿ ಪ್ರಾದೇಶಿಕ ಆಯುಕ್ತರ ಅನುಮೋದನೆ ಸಹ ಬೇಕಿಲ್ಲ’ ಎಂದರು.‘ನಗರೋತ್ಥಾನ ಯೋಜನೆಯಲ್ಲಿ ರಸ್ತೆ, ಕುಡಿಯುವ ನೀರಿನ ಕಾಮಗಾರಿ  ಮಾಡಬೇಕಾದರೆ ಕಡ್ಡಾಯವಾಗಿ ಒಳಚರಂಡಿ ವ್ಯವಸ್ಥೆ ಆಗಿರಲೇಬೇಕು. ಇಲ್ಲದಿದ್ದರೆ ಅನುದಾನ ಸಿಗದು’ ಎಂದು ಜಯಚಂದ್ರ ಹೇಳಿದರು.

‘ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಶಿರಾ ತಾಲ್ಲೂಕಿನ ಸ್ಥಳೀಯ ಸಂಸ್ಥೆಗಳು ನಿಯಮಾನುಸಾರ ಕ್ರಿಯಾ ಯೋಜನೆ ರೂಪಿಸಿವೆ. ಮಧುಗಿರಿ ಪುರಸಭೆ ಅಧಿಕಾರಿಗಳು ಸರ್ಕಾರಿ ನೌಕರರ ಭವನದ ಮುಂದುವರಿದ ಕಾಮಗಾರಿ, ಸರ್ಕಾರಿ ಶಾಲೆ ಸಭಾ ಭವನದ ಮುಂದುವರಿದ ಭಾಗ, ಸರ್ಕಾರಿ ಶಾಲೆಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಸೇರಿಸಿದ್ದಾರೆ. ಇದು ನಿಯಮಾವಳಿಯ ಉಲ್ಲಂಘನೆಯಾಗಿದೆ’ ಎಂದು ಅನುಪಮಾ ಹೇಳಿದರು.ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ‘ಶಿಕ್ಷಣ ಇಲಾಖೆಯಲ್ಲೂ ಅನುದಾನದ ಕೊರತೆ ಇದೆ. ಪಟ್ಟಿಯನ್ನು ಅನುಮೋದನೆ ಮಾಡಿ, ಪರಿಶೀಲನೆಗೆ ಕಳುಹಿಸಿಕೊಡಿ’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.