ADVERTISEMENT

ಸಾಹಿತ್ಯ ಲೋಕದ ಪ್ರಾಮಾಣಿಕತೆ ಪ್ರಶ್ನಿಸಿ

ಡಾ.ಡಿ.ಎನ್.ಯೋಗೀಶ್ವರಪ್ಪ ಅವರ ‘ನಾಯಕನ ಪದ್ಧತಿ’, ‘ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ ಅಂಶಗಳು’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 6:40 IST
Last Updated 10 ಜುಲೈ 2017, 6:40 IST

ತುಮಕೂರು: ‘ಸಾಹಿತ್ಯ ಲೋಕದ ಪ್ರಾಮಾಣಿಕತೆ ಬಗ್ಗೆ ಸಾಹಿತಿಗಳು ಪ್ರಶ್ನೆ ಮಾಡದ ಹೊರತು ಸಾಹಿತ್ಯ ಚರಿತ್ರೆಯನ್ನು ಸೂಕ್ತವಾಗಿ ಕಟ್ಟಿಕೊಳ್ಳಲು ಸಾಧ್ಯವಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಪ್ರಾಧ್ಯಾಪಕ ಡಾ.ಡಿ.ಎನ್.ಯೋಗೀಶ್ವರಪ್ಪ ಅವರು ರಚಿಸಿರುವ ‘ನಾಯಕನ ಪದ್ಧತಿ’ ಹಾಗೂ ಸಂಪಾದಿಸಿರುವ ‘ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ ಅಂಶಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಲಿಖಿತ ರೂಪದ ಸಾಹಿತ್ಯಕ್ಕಿಂತ ಅಲಿಖಿತ ಸಾಹಿತ್ಯ ರೂಪದಲ್ಲಿಯೂ ಚರಿತ್ರೆಯನ್ನು ಕಾಣುತ್ತೇವೆ. ಜೀವಂತ ಪ್ರಮಾಣಗಳ ಮೂಲಕ ಇತಿಹಾಸವನ್ನು ಶೋಧಿಸಬೇಕಾಗಿದೆ. ಕನ್ನಡಕ್ಕೆ ತನ್ನದೇ ಆದ ಓದುವ ಕ್ರಮ ಇದೆ. ಅದನ್ನು ಗುರುತಿಸಿಕೊಂಡಾಗ ಚರಿತ್ರೆಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಕನ್ನಡದ ಚಾರಿತ್ರಿಕ ಅಂಶಗಳನ್ನು ಗುರುತಿಸುವ ಕೆಲಸವನ್ನು ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ ಅಂಶಗಳು ಕೃತಿ ಮಾಡಿದೆ. ಕಾವ್ಯ ಪಠ್ಯಗಳಷ್ಟೇ ಅಲ್ಲ ಸಾಂಸ್ಕೃತಿಕ ಅಧ್ಯಯನವೂ ಇಲ್ಲಿ ಆಗಿದೆ. ವಚನಕಾರರ ಚಾರಿತ್ರಿಕ ಶೋಧ, ಜನಪದ ಕುಲಪುರಾಣಗಳ ಶೋಧನೆಯೂ ಈ ಕೃತಿಯಲ್ಲಿ ನಡೆದಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ವಚನ ಧರ್ಮ, ಸಾಹಿತ್ಯವನ್ನು ಹಿಂದುತ್ವದ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತಿದ್ದೇವೆ. ಇದರಿಂದ ನೈಜ ಇತಿಹಾಸ ಸಿಕ್ಕಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುತ್ತದೆ’ ಎಂದು ಹೇಳಿದರು.

‘ಬಸವಣ್ಣ ರಾಜಾಶ್ರಯದಲ್ಲಿ ಇದ್ದರೂ ಹೊಸ ಚಳವಳಿ ಕಟ್ಟಿದರು. ನಮ್ಮ ಇತಿಹಾಸದಲ್ಲಿ ಬಿಜ್ಜಳ ಖಳನಾಯಕ. ಆದರೆ ಜನಪದರಲ್ಲಿ ಹಾಗೂ ಬಸವ ಪುರಾಣದಲ್ಲಿ ಬಿಜ್ಜಳ ಖಳನಾಯಕನಲ್ಲ. ಆತ ಕ್ಷೌರಿಕ ಸಮುದಾಯದವನು. ತೋಳ್ಬಲದಿಂದ ಕ್ಷತ್ರಿಯನಾದವನು. ಸಹಜವಾಗಿ ವರ್ಣಾಶ್ರಮ ವ್ಯವಸ್ಥೆಯ ಬಗ್ಗೆ ಅಸಮಾಧಾನ ಆತನಿಗೆ ಇರುತ್ತದೆ. ಆದರೆ ಚಳವಳಿಯ ಮೊದಲ ಬಲಿ ಬಿಜ್ಜಳನಾದರೆ ಎರಡನೇ ಬಲಿ ಬಸವಣ್ಣ’ ಎಂದರು.

‘ನಾಯಕತನ ಪದ್ಧತಿ’ ಕೃತಿ ಕುರಿತು ಸಂಶೋಧಕ ಡಾ.ಎಚ್.ಎಸ್.ಗೋಪಾಲರಾವ್ ಮಾತನಾಡಿದರು. ಸಿದ್ದಗಂಗಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಡಿ.ಎನ್.ಯೋಗೀಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

***

ಸಾಹಿತ್ಯ ಚರಿತ್ರೆಯಲ್ಲೂ ಮೋಸ
‘ಪಿ.ಲಂಕೇಶ್ ಅವರ ‘ಸಂಕ್ರಾಂತಿ’ ನಾಟಕ ತಳ ಸಮುದಾಯದ ಹಟ್ಟಿಯಲ್ಲಿ ಬೆಳಕು ಕಾಣುವುದರೊಂದಿಗೆ ಆರಂಭವಾಗುತ್ತದೆ, ಅದೇ ಗಿರೀಶ ಕಾರ್ನಾಡರ ‘ತಲೆತಂಡ’ ಬಸವಣ್ಣನ ಆದರ್ಶಗಳನ್ನು ಒಪ್ಪಿಕೊಂಡ ವ್ಯಕ್ತಿ ಮನೆಯನ್ನು ತೊರೆಯುವುದು, ಅವನನ್ನು ಹೋಗಬೇಡ ಎನ್ನುವ ತಂದೆ ತಾಯಿಯ ನೋವಿನ ಧ್ವನಿಯಿಂದ ಆರಂಭವಾಗುತ್ತದೆ. ಈ ಎರಡೂ ಉದಾಹರಣೆಗಳು ಸಾಹಿತ್ಯ ಯಾವ ಮೂಲದಿಂದ ಮತ್ತು ಮನಸ್ಸಿನಿಂದ ಹುಟ್ಟಿದೆ ಎನ್ನುವುದನ್ನು ಇದು ತೋರುತ್ತದೆ. ಸಾಹಿತ್ಯ ಚರಿತ್ರೆಯಲ್ಲೂ ಮೋಸಗಳು ನಡೆದಿವೆ’ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.

‘ಶಾಹು ಮಹಾರಾಜರು ಮನುವಾದಿ ನಿಲುವುಗಳನ್ನು ಧಿಕ್ಕರಿಸಿ ಆಡಳಿತ ನಡೆಸಿದ್ದಾರೆ. ದ.ರಾ.ಬೇಂದ್ರೆ ದೊಡ್ಡ ಕವಿ ಎಂದು ನಾನು ಒಪ್ಪಿಕೊಳ್ಳುವೆ. ಅವರ ‘ಸಾಯೋ ಆಟ’ ನಾಟಕದಲ್ಲಿ ಶಾಹು ಅವರನ್ನು ಹುಚ್ಚು ರಾಜ ಎನ್ನುವಂತೆ ಚಿತ್ರಿಸಲಾಗಿದೆ. ಕಲಾತ್ಮಕವಾಗಿ ಈ ಕೃತಿ ನೋಡುವುದೇ ಬೇರೆ, ಸಾಹಿತ್ಯ ಪಠ್ಯವಾಗಿ ನೋಡುವುದೇ ಬೇರೆ. ಆದರೆ ಶಾಹು ಅವರ ಬಗ್ಗೆ ಈ ರೀತಿಯ ಚಿತ್ರಣಗಳು ಚರಿತ್ರೆಗೆ ಮಾಡಿದ ಮೋಸ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.