ADVERTISEMENT

ನೂತನ ಕ್ರೀಡಾ ನೀತಿಯ ಕರಡು ತಯಾರಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 10:34 IST
Last Updated 11 ಜನವರಿ 2017, 10:34 IST

ಉಡುಪಿ: ನೂತನ ಕ್ರೀಡಾ ನೀತಿಯ ಕರಡು ತಯಾರಿಸಲಾಗಿದ್ದು, ಕ್ರೀಡಾಪ ಟುಗಳ ಜತೆಗೆ ಆ ಬಗ್ಗೆ ಚರ್ಚಿಸಿ ಅದನ್ನು ಅಂತಿಮಗೊಳಿಸಿ ಮುಂದಿನ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕ್ರೀಡಾ ಮತ್ತು ಯುವ ಸಬ ಲೀಕರಣ ಸಚಿವ ಪ್ರಮೋದ್ ಮಧ್ವ ರಾಜ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮತ್ತು ಕೇಂದ್ರದ ಕ್ರೀಡಾ ಇಲಾಖೆ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಖೇಲೋ ಇಂಡಿಯಾ ಕ್ರೀಡಾಕೂಟದ 14 ಮತ್ತು 17 ವರ್ಷದೊಳಗಿನವರ ರಾಜ್ಯ ಮಟ್ಟದ ಈಜು ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಂದಿನ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಕ್ರೀಡಾಪಟುಗಳು ಚಿನ್ನದ ಪದಕ ಗೆಲ್ಲಲು ಪೂರಕವಾಗುವಂತೆ ಒಂದು ಸಾವಿರ ಕ್ರೀಡಾಪಟುಗಳನ್ನು ದತ್ತು ಪಡೆಯಲು ನಿರ್ಧರಿಸಲಾಗಿದೆ. ಈಗಾಗಲೇ 662 ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊ ಳ್ಳಲಾಗಿದ್ದು ಅವರಿಗೆ ಖಾಸಗಿ ಕಂಪೆನಿಗಳ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಅನುದಾನ ಕೊಡಿಸಲಾಗುತ್ತದೆ. ತರಬೇತಿ, ಶಿಕ್ಷಣ ಸೇರಿದಂತೆ ಎಲ್ಲ ರೀತಿಯ ಖರ್ಚುಗಳನ್ನು ಭರಿಸಲಾಗುತ್ತದೆ ಎಂದ ಅವರು ಕೇಂದ್ರ ಸರ್ಕಾರ ಸಹ ಇಂತಹ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಿದೆ ಎಂದು ಅವರು ಹೇಳಿದರು.

ಖೇಲೋ ಇಂಡಿಯಾ ಕ್ರೀಡಾಕೂಟ ನಡೆಸಲು ₹10 ಕೋಟಿಯ ಅಗತ್ಯವಿತ್ತು, ಆದರೆ, ಕೇಂದ್ರ ಸರ್ಕಾರ ಕೇವಲ ₹3 ಕೋಟಿ ನೀಡಿದ್ದರಿಂದ ಈ ಕ್ರೀಡಾಕೂಟ ನಡೆಸಲಾಗದು ಎಂದು ಅಧಿಕಾರಿಗಳು ತಿಳಿಸಿದ್ದರು. ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರ ಕ್ರೀಡಾ ಸಚಿವರಿಗೆ ಮನವಿ ಮಾಡಿದರೂ ಪ್ರಯೋಜನಾ ಆಗಿರಲಿಲ್ಲ. ಆದ್ದರಿಂದ ಇರುವ ಅನುದಾನದಲ್ಲಿಯೇ 11 ಕ್ರೀಡೆಗಳ ಬದಲಾಗಿ 8  ಕ್ರೀಡೆಗಳನ್ನು ಆಯೋಜಿಸ ಲಾಗುತ್ತಿದೆ. ನಮ್ಮ ಕ್ರೀಡಾಪಟುಗಳು ಅವಕಾಶ ವಂಚಿತರಾಗಬಾರದು ಎಂದು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

2020ರಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯದ ಕ್ರೀಡಾಪ ಟುಗಳು ಚಿನ್ನದ ಪದಕ ಗೆಲ್ಲಬೇಕು ಎಂಬುದು ನಮ್ಮ ಗುರಿಯಾಗಿದೆ. ಅದೇ ಕಾರಣಕ್ಕೆ ಚಿನ್ನ ಗೆಲ್ಲುವ ಕ್ರೀಡಾಪಟುಗ ಳಿಗೆ ₹5 ಕೋಟಿ ಬಹುಮಾನ ನೀಡುವು ದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿ ದ್ದಾರೆ. ಬೆಳ್ಳಿ ಮತ್ತು ಕಂಚು ಗೆಲ್ಲುವವರಿಗೆ ಕ್ರಮವಾಗಿ ₹3 ಮತ್ತು ₹2 ಕೋಟಿ ನೀಡಲಾಗುತ್ತದೆ ಎಂದು ತಿಳಿಸಿದರು.

ಮುಖ್ಯ ತೀರ್ಪುಗಾರ ವಿಶ್ವಾಸ್‌ ಪವಾರ್‌, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ಕುಮಾರ್ ಶೆಟ್ಟಿ ಉಪಸ್ಥಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.