ADVERTISEMENT

‘ಹೊರಗುತ್ತಿಗೆ ನೌಕರರಿಗೂ ಪಿಎಫ್‌ ಕಡ್ಡಾಯ’

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:58 IST
Last Updated 12 ಜನವರಿ 2017, 9:58 IST
ಮಂಗಳೂರು: ಯಾವುದೇ ಸಂಸ್ಥೆಯ ಮಾಲೀಕರು ತಮ್ಮ ಕೆಲಸಗಳಿಗಾಗಿ ನೇಮಿಸಿಕೊಂಡಿರುವ ಹೊರಗುತ್ತಿಗೆ ನೌಕರರಿಗೂ ಭವಿಷ್ಯನಿಧಿ ಕಂತನ್ನು ಪಾವತಿಸುವ ಜವಾಬ್ದಾರಿ ಹೊಂದಿ ರುತ್ತಾರೆ ಎಂದು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಜೂಲಿಯಾನ್‌ ತೊಬಿಯಾಸ್‌ ಹೇಳಿದರು.
 
ಕೆನರಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ (ಕೆಸಿಸಿಐ) ಬುಧವಾರ ನಡೆದ ಪ್ರಧಾನಮಂತ್ರಿ ರೋಜ್‌ಗಾರ್‌ ಪ್ರೋತ್ಸಾಹನ್‌ ಯೋಜನಾ ಮತ್ತು ಭವಿಷ್ಯನಿಧಿಯಲ್ಲಿ ಹೊಸ ಬೆಳವಣಿಗೆಗಳು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹೊರಗುತ್ತಿಗೆ ನೌಕರರ ಬಾಬ್ತು ಭವಿಷ್ಯನಿಧಿ ಕಂತು ಪಾವತಿ ಆಗುತ್ತಿದೆಯೇ ಎಂಬುದನ್ನು ಉದ್ದಿಮೆಗಳ ಮಾಲೀಕರು ಖಾತರಿಪಡಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.
 
ಈ ಸಂಬಂಧ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ಇತ್ತೀಚೆಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಯಾವುದೇ ಸಂಸ್ಥೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ಭವಿಷ್ಯನಿಧಿ ಸೌಲಭ್ಯ ನೀಡದಿರುವ ಕುರಿತು ಖಚಿತವಾದ ದೂರುಗಳು ಬಂದರೆ ಕ್ರಮ ಜರುಗಿ ಸಲಾಗುವುದು. ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯಲ್ಲಿ  ಹೊರ ಗುತ್ತಿಗೆ ನೌಕರರಿಗೆ ಭವಿಷ್ಯನಿಧಿ ಸೌಲಭ್ಯ ನೀಡುತ್ತಿಲ್ಲ ಎಂಬ ಆರೋಪದ ಕುರಿತು ಇಲಾಖೆ ತನಿಖೆ ಆರಂಭಿಸಿದೆ ಎಂದರು.
 
ಎಂಆರ್‌ಪಿಎಲ್‌ ಕಂಪೆನಿಯಲ್ಲಿ ಹೊರಗುತ್ತಿಗೆ ನೌಕರರಿಗೆ ಭವಿಷ್ಯನಿಧಿ ಸೌಲಭ್ಯ ದೊರೆಯುತ್ತಿಲ್ಲ ಎಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಪ್ರಾದೇಶಕ ಭವಿಷ್ಯನಿಧಿ ಆಯುಕ್ತ (ಎರಡನೇ ಶ್ರೇಣಿ) ಕೆ.ಪ್ರಶಾಂತ್‌, ‘ಹೊರಗುತ್ತಿಗೆ ನೌಕರರ ವೇತನ ಬಿಡುಗಡೆಗೂ ಮುನ್ನ ಭವಿಷ್ಯನಿಧಿ ಕಂತು ಪಾವತಿ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮಾಲೀಕರ ಹೊಣೆ. ಈ ದೂರಿನ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.
 
ಸಹಾಯಕ ಭವಿಷ್ಯನಿಧಿ ಆಯುಕ್ತ ರವಿ ಅವರು ಪ್ರಧಾನಮಂತ್ರಿ ರೋಜ್‌ ಗಾರ್‌ ಪ್ರೋತ್ಸಾಹನ್ ಯೋಜನೆ ಕುರಿತು ಮಾಹಿತಿ ನೀಡಿದರು. ಕೆಸಿಸಿಐ ಅಧ್ಯಕ್ಷ ಜೀವನ್‌ ಸಲ್ಡಾನ, ಉಪಾಧ್ಯಕ್ಷೆ ವಟಿಕಾ ಪೈ, ಕಾರ್ಯದರ್ಶಿಗಳಾದ ಪ್ರವೀಣ್‌ ಕುಮಾರ್ ಕಲ್ಲಭಾವಿ, ಪಿ.ಬಿ. ಅಬ್ದುಲ್ ಹಮೀದ್‌, ಖಜಾಂಚಿ ಗಣೇಶ್‌ ಭಟ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.