ADVERTISEMENT

‘ಸಾಮರಸ್ಯಕ್ಕೆ ಯಕ್ಷಗಾನ ಕಲೆ ಸಹಕಾರಿ’

ಕಿಶೋರ ಯಕ್ಷ ಸಂಭ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2014, 6:04 IST
Last Updated 23 ಡಿಸೆಂಬರ್ 2014, 6:04 IST

ಬ್ರಹ್ಮಾವರ:  ಧರ್ಮದ ಪುನರುತ್ಥಾನ ಮತ್ತು ಸಾಮ ರಸ್ಯದ ಬದುಕನ್ನು ನಿರ್ವಹಿಸಲು, ಜಾತಿ, ಧರ್ಮವನ್ನು ಮೀರಿ ಯಕ್ಷಗಾನ ಕಲೆ ಇಂದೂ ಮುಂದುವರಿದಿದೆ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಕೃಷ್ಣಪ್ರಸಾದ್‌ ಅಡ್ಯಂತಾಯ ಹೇಳಿದರು.

ಉಡುಪಿ ಯಕ್ಷ ಶಿಕ್ಷಣ ಟ್ರಸ್ಟ್ ಮತ್ತು ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿಯ ವತಿಯಿಂದ ಬ್ರಹ್ಮಾವರ ಬಸ್‌ ನಿಲ್ದಾಣದ ಬಳಿ ಭಾನುವಾರ ಆರಂಭ ಗೊಂಡ ಕಿಶೋರ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರಾತನ ಕಾಲದಲ್ಲಿ ಶಿಕ್ಷಣ ವ್ಯವಸ್ಥೆ ಇಲ್ಲದಿದ್ದರೂ, ಧಾರ್ಮಿಕ ಶಿಕ್ಷಣವನ್ನು ಯಕ್ಷಗಾನದಂತಹ ಕಲೆ ನೀಡುತ್ತಿದೆ. ಇಂದಿಗೂ ಪಾತ್ರಗಳಿಗೆ ಜೀವ ತುಂಬಿ ಧರ್ಮದ ಶಿಕ್ಷಣವನ್ನು ಜನರಿಗೆ ನೀಡುತ್ತಿರುವುದು ಶ್ಲಾಘನೀಯ. ಯಕ್ಷಗಾನವನ್ನು ಆಸ್ವಾದಿಸುವವರು ಇನ್ನೂ ಕೂಡ ಇದ್ದಾರೆ ಎನ್ನುವುದಕ್ಕೆ ಯಕ್ಷ ಸಂಭ್ರಮ ದಲ್ಲಿ ಸೇರುವ ಜನಸ್ತೋಮವೇ ಸಾಕ್ಷಿ ಎಂದು ಹೇಳಿದರು.

ಯಕ್ಷ ಶಿಕ್ಷಣ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಕೆ.ರಘುಪತಿ ಭಟ್‌ ಮಾತನಾಡಿ, 2009ರಲ್ಲಿ ಆರಂಭವಾದ ಕಿಶೋರ ಯಕ್ಷಗಾನದಿಂದ ಮಕ್ಕಳಲ್ಲಿರುವ ಸಭಾ ಕಂಪನ ಹೋಗಲು ಮತ್ತು ಬುದ್ಧಿಶಕ್ತಿ ಬೆಳೆಯಲು ಸಹಕಾರಿ ಯಾಗಿದೆ. ಶಾಲಾ ವಾರ್ಷಿಕೋತ್ಸವದಲ್ಲಿಯೂ ಯಕ್ಷ ಗಾನವನ್ನು ಕಡ್ಡಾಯ ಮಾಡಬೇಕು ಎಂದು ಆಗ್ರಹಿಸಿದರು.

ಉಡುಪಿ ಜಿಲ್ಲೆಯಲ್ಲದೇ ರಾಜ್ಯದ ಇತರೆ ಜಿಲ್ಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯಕ್ಷ ಸಂಭ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 1600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಿಶೋರ ಯಕ್ಷ ಸಂಭ್ರಮದಲ್ಲಿ ಪಾಲ್ಗೊಂಡು ಶಿಕ್ಷಣದಲ್ಲೂ ಸಾಧನೆ ಮಾಡುತ್ತಿದ್ದಾರೆ ಎಂದು  ಯಕ್ಷ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಳಿ ಕಡೇಕಾರ್‌  ಹೇಳಿದರು.

ಪ್ರದರ್ಶನಾ ಸಂಘಟನಾ ಸಮಿತಿಯ ಅಧ್ಯಕ್ಷ ರಾಜೇಶ್‌ ಶೆಟ್ಟಿ ಬಿರ್ತಿ, ಕೋಶಾಧಿಕಾರಿ ಚಿತ್ತರಂಜನ್‌ ಹೆಗ್ಡೆ, ಗೌರವ ಸಲಹೆಗಾರಾದ ಭಾಸ್ಕರ ರೈ, ಬಿ.ಭುಜಂಗ ಶೆಟ್ಟಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್‌ ಶಾನು ಭಾಗ್‌, ಯಕ್ಷ ಶಿಕ್ಷಣ ಟ್ರಸ್ಟ್‌ನ ಎಸ್‌.ವಿ ಭಟ್ ಉಪಸ್ಥಿತರಿದ್ದರು. ಯಕ್ಷ ಶಿಕ್ಷಣ ಟ್ರಸ್ಟ್‌ನ ಮುರಳಿ ಕಡೆಕಾರ್‌ ಸ್ವಾಗತಿಸಿದರು. ಪ್ರದರ್ಶನ ಸಂಘಟನಾ ಸಮಿತಿಯ ಕಾರ್ಯದರ್ಶಿ ದಿನಕರ ಹೇರೂರು ವಂದಿಸಿದರು. ನಂತರ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಮಾಯಾಪುರಿ ವೀರಮಣಿ ಯಕ್ಷಗಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.