ADVERTISEMENT

ಪಿಯು ವಿಜ್ಞಾನ, ಪದವಿ ಕಾಲೇಜಿಲ್ಲದೆ ಪರದಾಟ  

ಗೋಳಿಯಂಗಡಿ: ಗುಣಮಟ್ಟದ ಶಿಕ್ಷಣ ಪಡೆಯದ ಗ್ರಾಮೀಣ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 17:37 IST
Last Updated 4 ಜುಲೈ 2018, 17:37 IST
goliyangadi pu college
goliyangadi pu college   

ಸಿದ್ದಾಪುರ: ಪ್ರಗತಿ ಪಥದತ್ತ ಸಾಗುತ್ತಿರುವ ಕುಂದಾಪುರ ತಾಲ್ಲೂಕಿನ ಪ್ರಮುಖ ಕೇಂದ್ರ ಸ್ಥಾನವಾಗಿರುವ ಗೋಳಿಯಂಗಡಿಯಲ್ಲಿ ಪಿಯುಸಿ ವಿಜ್ಞಾನ ಹಾಗೂ ಪದವಿ ಕಾಲೇಜುಗಳಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ವಿದ್ಯಾರ್ಜನೆಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮೀಣ ಭಾಗದ ಪ್ರಮುಖ ಪೇಟೆಯಾಗಿರುವ ಗೋಳಿಯಂಗಡಿ ಕುಂದಾಪುರ ತಾಲ್ಲೂಕಿನಲ್ಲಿಯೆ ಪ್ರಮುಖ ಕೇಂದ್ರ ಸ್ಥಾನವಾಗುತ್ತಿದೆ. ಅಂಗಡಿ ಮುಂಗಟ್ಟುಗಳು, ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು (ಕಲಾ ಹಾಗೂ ವಾಣಿಜ್ಯ)ಗಳಿದ್ದು ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಇಲ್ಲಿರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಉಳಿದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್, ಜಿಲ್ಲಾ ಸಹಕಾರಿ ಬ್ಯಾಂಕ್, ಕುಡುಬಿ ಸಮುದಾಯ ಬ್ಯಾಂಕ್ ಕಾರ್ಯಾಚರಿಸುತ್ತಿರುವ ಗೋಳಿಯಂಗಡಿಯಲ್ಲಿ ಪದವಿ ಕಾಲೇಜು ಹಾಗೂ ಪಿಯುಸಿ ವಿಜ್ಞಾನ ವಿಭಾಗದ ಕೊರತೆ ಮಾತ್ರ ಎದ್ದುಕಾಣುತ್ತಿದೆ.

ಮಡಾಮಕ್ಕಿ ಗ್ರಾಮ ಪಂಚಾಯಿತಿಯ ಕಾಸನಮಕ್ಕಿ, ಮಡಾಮಕ್ಕಿ-ಹಂಜ, ಮಾಂಡಿಮೂರುಕೈ, ಅರಸಮ್ಮಕಾನು, ಶೇಡಿಮನೆ, ಬೆಳ್ವೆ ಗ್ರಾಮ ಪಂಚಾಯಿತಿಯ ಆರ್ಡಿ, ಕೊಂಜಾಡಿ, ಅಲ್ಬಾಡಿ, ಬೆಳೆಂಜೆ ಧೂಪದಕಟ್ಟೆ, ಗುಮ್ಮೊಲ, ಸೂರ್ಗೋಳಿ, ಬೆಳ್ವೆ, ತಾರಿಕಟ್ಟೆ, ಗೋಳಿಯಂಗಡಿ, ಆವರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಂಡಾರು, ಚೋರಾಡಿ, ಹಿಲಿಯಾಣ, ಆವರ್ಸೆ, ನೆಂಚಾರು, ಹೈಕಾಡಿ, ಹೆಂಗವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಬತ್ತು, ಅಮಾಸೆಬೈಲು ಇತ್ಯಾದಿ ಪ್ರದೇಶದ ನೂರಾರು ವಿದ್ಯಾರ್ಥಿಗಳಿಗೆ ಗೋಳಿಯಂಗಡಿ ಪರಿಸರದಲ್ಲಿ ಉತ್ತಮ, ಸುಸಜ್ಜಿತ ಸರ್ಕಾರಿ ಕಾಲೇಜುಗಳಿದ್ದರೆ ಬಹಳಷ್ಟು ಅನುಕೂಲವಾಗುತ್ತಿತ್ತು. ಈ ಭಾಗದ ವಿದ್ಯಾರ್ಥಿಗಳಿಗೆ ಗೋಳಿಯಂಗಡಿ ಕೇಂದ್ರಸ್ಥಾನವಾಗಿದೆ. ಗೋಳಿಯಂಗಡಿಯಲ್ಲಿ ಪದವಿ ಕಾಲೇಜು ಹಾಗೂ ಪಿಯುಸಿ ವಿಜ್ಞಾನ ಕಾಲೇಜು ಪ್ರಾರಂಭಿಸಿದರೆ ಮೂಲಸೌಕರ್ಯದ ಕೊರತೆಯಿಲ್ಲದೆ, ಸಂಚಾರಕ್ಕೆ ಸಾಕಷ್ಟು ಬಸ್‌ಗಳ ವ್ಯವಸ್ಥೆಯಿದೆ.

ಗೋಳಿಯಂಗಡಿಯಲ್ಲಿ ಪ್ರಸ್ತುತ ಕಾರ್ಯಾಚರಿಸುತ್ತಿರುವ ಪಿಯುಸಿ ಕಲಾ ಹಾಗೂ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದರೂ ವಿಜ್ಞಾನ ವಿಭಾಗವಿಲ್ಲದೆ ಅನಿವಾರ್ಯವಾಗಿ ಹೆಬ್ರಿ, ಹಾಲಾಡಿ, ಮಂದಾರ್ತಿಯಲ್ಲಿರುವ ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಅಲ್ಲದೆ ಖಾಸಗಿ ಕಾಲೇಜುಗಳತ್ತ ಮುಖಮಾಡುತ್ತಿರುವುದು ಸರ್ಕಾರಿ ಶಾಲಾ-ಕಾಲೇಜುಗಳು ಹಿಂದುಳಿಯುವಿಕೆಗೆ ಕಾರಣವಾಗಿದೆ. ವಾಣಿಜ್ಯ ವಿಭಾಗಕ್ಕೆ ಬೇಡಿಕೆಯಿರುವ ಹಿನ್ನೆಲೆಯಲ್ಲಿ ಗೋಳಿಯಂಗಡಿಯಲ್ಲಿರುವ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಕಾಣಬಹುದಾಗಿದೆಯೆ ಹೊರತು ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ಪದವಿ ಪೂರ್ವ ಕಾಲೇಜಿನಲ್ಲಿಯೆ ಉತ್ತಮ ಶಿಕ್ಷಕರನ್ನು ನೇಮಿಸಿ ವಿಜ್ಞಾನ ವಿಭಾಗ ಪ್ರಾರಂಭಿಸಿದರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’

ದಶಕಗಳ ಹಿಂದೆ ಗೋಳಿಯಂಗಡಿಗೆ ಪಿಯುಸಿ ವಿಜ್ಞಾನ ಕಾಲೇಜು ಮಂಜೂರಾಗಿತ್ತು. ಕುಂದಾಪುರ ತಾಲೂಕಿನಲ್ಲಿಯೆ ಬೇರೆ ಕಾಲೇಜುಗಳಲ್ಲಿರದ ಉತ್ತಮ ಉಪನ್ಯಾಸಕರ ನೇಮಕವೂ ಕೂಡ ಆಗಿತ್ತು. ಆಗ ಕಾಲೇಜು ಪ್ರಾಂಶುಪಾಲರು ಮೂಲಸೌಕರ್ಯಭಿವೃದ್ಧಿ ಹಾಗೂ ವಿಜ್ಞಾನ ಕಾಲೇಜು ನಿರ್ವಹಣೆ ಕಷ್ಟವೆಂದು ನಿರ್ಲಕ್ಷ್ಯ ತಾಳಿದ್ದರು. ವಿಜ್ಞಾನ ಕಾಲೇಜು ಮಂಜೂರಾಗಿ ಸಮರ್ಪಕವಾಗಿ ಅನುಷ್ಠಾನಗೊಳ್ಳದೆ, ನೇಮಕಗೊಂಡ ಉಪನ್ಯಾಸಕರಿಗೆ ವೃಥಾ ವೇತನ ನೀಡುವುದನ್ನು ತಪ್ಪಿಸಲು ಗೋಳಿಯಂಗಡಿ ಪಿಯುಸಿ ವಿಜ್ಞಾನ ಕಾಲೇಜಿನ ಕುರಿತಾಗಿ ಇಲಾಖೆಯು ವಿಸ್ತ್ರತ ವರದಿ ತರಿಸಿಕೊಂಡಿತ್ತು. ಗ್ರಾಮೀಣ ಭಾಗದಲ್ಲಿ ವಿಜ್ಞಾನ ಕಾಲೇಜು ಉಳಿಸಿಕೊಳ್ಳಲು ಸ್ಥಳೀಯರು ಹೋರಾಟಕ್ಕೆ ಮುಂದಾಗಿದ್ದರೂ ಜನಪ್ರತಿನಿಧಿಗಳು ಕೂಡ ನಿರ್ಲಕ್ಷ್ಯ ವಹಿಸಿದ್ದರು. ಪ್ರಾಂಶುಪಾಲರು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಮರ್ಪಕ ಅನುಷ್ಠಾನಗೊಳ್ಳದ ವಿಜ್ಞಾನ ಕಾಲೇಜು ಬೈಂದೂರಿಗೆ ವರ್ಗಾವಣೆಗೊಂಡಿತ್ತು.

ADVERTISEMENT

‘ಪದವಿ ಶಿಕ್ಷಣಕ್ಕೆ ಮಕ್ಕಳ ಪರದಾಟ’
ಪದವಿ ಕಾಲೇಜು ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಎರಡು ಅಥವಾ ಮೂರು ಬಸ್ ಬದಲಾಯಿಸಿ ಹೆಬ್ರಿ, ಬಾರ್ಕೂರು ಅಥವಾ ಶಂಕರನಾರಾಯಣ ಕಾಲೇಜುಗಳಿಗೆ ತೆರಳಬೇಕಿದೆ. ಬೆಳಿಗ್ಗೆ ಬೇಗನೆ ಎದ್ದು ತೆರಳುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಬಸ್ ಸೌಕರ್ಯವಿಲ್ಲದೆ ಮನೆ ಸೇರುವಾಗ ಕತ್ತಲಾವರಿಸಿರುತ್ತದೆ. ಇದರಿಂದಾಗಿ ಓದಲು-ಬರೆಯಲು ಸಮಯವಿಲ್ಲದೆ ನಿರೀಕ್ಷೆಗಿಂತ ಕಡಿಮೆ ಫಲಿತಾಂಶ ದಾಖಲಿಸುವ ಸಾಧ್ಯತೆಯಿದೆ. ಗೋಳಿಯಂಗಡಿ ಪರಿಸರದಲ್ಲಿ ಗುಣಮಟ್ಟದೊಂದಿಗೆ ಪೂರ್ಣ ಪ್ರಮಾಣದ ಪದವಿ ಕಾಲೇಜು ಪ್ರಾರಂಭಗೊಂಡಲ್ಲಿ ಸಾಮಾನ್ಯ ಜನರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರೊಂದಿಗೆ ನಿರೀಕ್ಷೆಯಂತೆ ಫಲಿತಾಂಶ ದಾಖಲಿಸಲು ಸಾಧ್ಯ. ಈ ದಿಶೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರ ಆಗ್ರಹವಾಗಿದೆ.

ಗೋಳಿಯಂಗಡಿ ಪರಿಸರದಲ್ಲಿ ಪದವಿ ಕಾಲೇಜು ಹಾಗೂ ಪಿಯುಸಿ ವಿಜ್ಞಾನ ವಿಭಾಗ ಪ್ರಾರಂಭಿಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಅನುಕೂಲವಾಗಲಿದ್ದು ಈ ದಿಶೆಯಲ್ಲಿ ಹೋರಾಟ ನಡೆಸಲಿದ್ದೇವೆ.
- ಗಣೇಶ್ ಅರಸಮ್ಮಕಾನು, ಸಾಮಾಜಿಕ ಕಾರ್ಯಕರ್ತ

ಗೋಳಿಯಂಗಡಿಯಲ್ಲಿ ವಿಜ್ಞಾನ ಕಾಲೇಜು, ಪದವಿ ಕಾಲೇಜು ಆರಂಭಗೊಂಡಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು.
- ಜಯರಾಮ ಶೆಟ್ಟಿ ತೊನ್ನಾಸೆ, ನಿವೃತ್ತ ಪ್ರಾಂಶುಪಾಲ ಗೋಳಿಯಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.