ADVERTISEMENT

ಆಮೆಗತಿಯಲ್ಲಿ ಈಜುಕೊಳ ಕಾಮಗಾರಿ

ಸಂಧ್ಯಾ ಹೆಗಡೆ
Published 4 ಸೆಪ್ಟೆಂಬರ್ 2017, 5:52 IST
Last Updated 4 ಸೆಪ್ಟೆಂಬರ್ 2017, 5:52 IST
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಈಜುಕೊಳ
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಈಜುಕೊಳ   

ಶಿರಸಿ: ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಈಜುಕೊಳದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಎಸ್‌ಎಫ್‌ಸಿ ಅಡಿಯಲ್ಲಿ ದೊರೆತಿರುವ ವಿಶೇಷ ಅನುದಾನ ₹ 3 ಕೋಟಿ ಮೊತ್ತದಲ್ಲಿ ನಗರಸಭೆ ಈಜುಕೊಳ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ.

ಕಾಮಗಾರಿ ಗುತ್ತಿಗೆ ಪಡೆದಿರುವ ಬೆಂಗಳೂರಿನ ಸನ್‌ಶೈನ್ ಪೂಲ್ಸ್‌ ಕಂಪೆನಿಯು ಕಳೆದ ನವೆಂಬರ್‌ನಲ್ಲಿ ಕೆಲಸ ಪ್ರಾರಂಭಿಸಿದೆ. ಕಂಪೆನಿಯ ಕೆಲಸಗಾರರು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಆದರೂ ಕೆಲಸ ಮಾತ್ರ ನಿಧಾನವಾಗಿ ಸಾಗುತ್ತಿದೆ.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈಜುಕೊಳ ನಿರ್ಮಾಣಕ್ಕೆ ₹ 1 ಕೋಟಿ ನಿರ್ಮಾಣವಾಗಿತ್ತು. ಮೂರು ವರ್ಷಗಳ ವಿಳಂಬದ ನಂತರ ಹೆಚ್ಚುವರಿ ₹ 2 ಕೋಟಿ ಬಜೆಟ್‌ನಲ್ಲಿ ಕಾಮಗಾರಿ ಪ್ರಾರಂಭವಾಗಿದೆ.

ADVERTISEMENT

ಶಿರಸಿ ಎಲ್ಲ ಸೌಲಭ್ಯಗಳನ್ನು ಹೊಂದಿದ್ದರೂ ಸಾರ್ವಜನಿಕ ಈಜುಕೊಳ ಮಾತ್ರ ಇರಲಿಲ್ಲ. ಹೀಗಾಗಿ ಈಜುಕೊಳ ಮಂಜೂರು ಆದಾಗ ನಾವು ನಮ್ಮ ಮಕ್ಕಳನ್ನು ಬೇಸಿಗೆ ರಜೆಯಲ್ಲಿ ಇಲ್ಲಿಗೆ ಕಳುಹಿಸಬಹುದೆಂದು ಖುಷಿ ಪಟ್ಟಿದ್ದೆವು. ಆದರೆ ಶೀಘ್ರ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ’ ಎಂದು ಕ್ರೀಡಾಂಗಣಕ್ಕೆ ನಿತ್ಯ ವಾಕಿಂಗ್ ಬರುವ ಪ್ರಕಾಶ ಎಸ್ ಹೇಳಿದರು.

‘ಕಳೆದ ಎಂಟು ತಿಂಗಳುಗಳಿಂದ ಕಾಮಗಾರಿಯನ್ನು ನೋಡುತ್ತಿದ್ದೇವೆ. ಕೆಲವು ದಿನ ಕೆಲಸ ಸಂಪೂರ್ಣ ಸ್ಥಗಿತಗೊಂಡಿತ್ತು. ನಂತರ ಆರಂಭವಾದ ಮೇಲೆ ಸಹ ಪ್ರಗತಿ ಕಾಣುತ್ತಿಲ್ಲ’ ಎಂದು ಅವರು ಹೇಳಿದರು.

‘ಕಾಮಗಾರಿ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಮರಳಿನ ಕೊರತೆ ಎದುರಾಗಿ ಎರಡು ತಿಂಗಳು ಕೆಲಸ ಸ್ಥಗಿತಗೊಂಡಿತ್ತು. ನಿಗದಿತ ಅವಧಿಯಲ್ಲಿ ನಿರ್ಮಾಣ ಪೂರ್ಣಗೊಳಿಸುವುದು ಕಷ್ಟವಾಗಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಈಗಿನ ಕೆಲಸದ ಪ್ರಗತಿಯನ್ನು ನೋಡಿದರೆ ಫೆಬ್ರುವರಿಯಲ್ಲಿ ಪೂರ್ಣಗೊಳ್ಳಬಹುದು’ ಎಂದು ಪೌರಾಯುಕ್ತ ಮಹೇಂದ್ರಕುಮಾರ  ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

* * 

ಸ್ಟ್ರೆಂಥ್ ಬೀಮ್ ಕಟ್ಟಿದ ಮೇಲೆ ಕ್ಯೂರಿಂಗ್ ಕಾರಣಕ್ಕೆ ಕೆಲವು ಹಾಗೆಯೇ ಬಿಡಬೇಕಾಗು ತ್ತದೆ. ಈಗ ಈ ಅವಧಿ ಮುಗಿದಿದ್ದು ಇನ್ನು ನಾಲ್ಕೈದು ದಿನಗಳಲ್ಲಿ ಕೆಲಸ ಪ್ರಾರಂಭವಾಗಬಹುದು
ಮಹೇಂದ್ರಕುಮಾರ
ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.