ADVERTISEMENT

ಕಾಳಿ ನದಿಯಲ್ಲಿ ಕಯಾಕ್‌ ಚಟುವಟಿಕೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 5:44 IST
Last Updated 4 ಸೆಪ್ಟೆಂಬರ್ 2017, 5:44 IST

ಕಾರವಾರ: ಇಲ್ಲಿನ ಕಾಳಿ ನದಿಯಲ್ಲಿ ಲೀಸರ್‌ ರೂಟ್ಸ್‌ ಸಂಸ್ಥೆಯು ಪ್ರತಿ ಭಾನುವಾರ ‘ಕಯಾಕ್‌ ಫನ್‌’ ಹೆಸರಲ್ಲಿ ಕಯಾಕ್‌ ಚಟುವಟಿಕೆಯನ್ನು ಆರಂಭಿಸಿದ್ದು, ಇದಕ್ಕೆ ಪ್ರವಾಸೋದ್ಯಮ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಶ್ರೀವತ್ಸ್‌ ಸಂಜಯ್‌ ಹಾಗೂ ಜಿಲ್ಲಾಧಿಕಾರಿ ಎಸ್‌.ಎಸ್.ನಕುಲ್‌ ಚಾಲನೆ ನೀಡಿದರು.

ತಾಲ್ಲೂಕಿನ ಸಿದ್ಧರ ಗ್ರಾಮದ ಕಾಳಿನದಿ ದಂಡೆಯಿಂದ ಬೆಳಿಗ್ಗೆ 7 ಗಂಟೆಗೆ 30ಕ್ಕೂ ಅಧಿಕ ಪ್ರವಾಸಿಗರು ಕಯಾಕ್‌ನಲ್ಲಿ ಸುಮಾರು 16 ಕಿ.ಮೀ. ಕ್ರಮಿಸಿ ಕೋಡಿಬಾಗದ ಕಾಳಿ ರೀವರ್‌ ಗಾರ್ಡನ್‌ ತಲುಪಿದರು.

ಮಾರ್ಗಮಧ್ಯೆ ಸಿಕ್ಕ ನಡುಗಡ್ಡೆಯಲ್ಲಿ ತಿಂಡಿ ವ್ಯವಸ್ಥೆ ಮಾಡಿದ್ದರು. ಆನಂತರ ಸಿಕ್ಕ ಕಾಳಿಮಾತಾ ನಡುಗಡ್ಡೆಗೆ ತೆರಳಿ ಕಾಂಡ್ಲಾ ವನ ವೀಕ್ಷಿಸಿದರು. ಮಧ್ಯಾಹ್ನ 1 ಗಂಟೆಗೆ ಗಾರ್ಡನ್‌ನಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ADVERTISEMENT

ಆರಂಭದಲ್ಲಿ ಪ್ರಕಾಶ್‌ ಹರಿಕಂತ್ರ ಕಯಾಕ್‌ ನಡೆಸುವ ಕುರಿತು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ ಸೇರಿದಂತೆ ಕೆಲ ಅಧಿಕಾರಿಗಳು ಹಾಗೂ ಪತ್ರಕರ್ತರು ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.

ಕಯಾಕ್‌ ಚಟುವಟಿಕೆಯನ್ನು ಅನುಭವಿಸಿ ಮಾತನಾಡಿದ ಶ್ರೀವತ್ಸ್‌ ಅವರು, ‘ಇಲ್ಲಿನ ಕಾಳಿ ನದಿಯ ಸೌಂದರ್ಯ ಮನಮೋಹಕವಾಗಿದೆ. ಗೋವಾಕ್ಕಿಂತಲೂ ಇಲ್ಲಿ ಉತ್ತಮ ಪ್ರವಾಸಿ ತಾಣಗಳಿವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಂತೆ ಇಲ್ಲಿನ ಆರ್ಥಿಕತೆಯು ವೃದ್ಧಿಸುತ್ತದೆ. ಹೋಟೆಲ್‌ ಉದ್ಯಮ, ಹ್ಯಾಂಡಿಕ್ರಾಫ್ಟ್‌ ಮಾರಾಟ ಒಳ್ಳೆಯ ಲಾಭವನ್ನು ತಂದುಕೊಡುತ್ತದೆ. ಅಲ್ಲದೇ ಸ್ಥಳೀಯರಿಗೆ ಉದ್ಯೋಗವಕಾಶಗಳು ದೊರೆಯಲಿವೆ. ಇಲ್ಲಿನ ಚಟುವಟಿಕೆಗೆ ಉತ್ತೇಜನ ನೀಡಲಾಗುವುದು’ ಎಂದು                  ಹೇಳಿದರು.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯ ಒದಗಿಸಲಾಗುತ್ತಿದ್ದು, ಬೆಳವಣಿಗೆಯೂ ಸಹ ಆಗುತ್ತಿದೆ. ಕಯಾಕ್‌ ಚಟುವಟಿಕೆ ಜಲಸಾಹಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಾಳಿ ನದಿ ವಿಶಾಲವಾಗಿದ್ದು, ಸುತ್ತಲಿನ ಹಸಿರು ಬೆಟ್ಟ–ಗುಡ್ಡಗಳ ಸಾಲು ಕಣ್ಮನ ಸೆಳೆಯುತ್ತವೆ’ ಎಂದು ಎಸ್‌.ಎಸ್‌.ನಕುಲ್‌ ತಿಳಿಸಿದರು.

‘ಕಯಾಕಿಂಗ್‌ ಮಾಡುವವರು www.leisureroutes.co.in ವೆಬ್‌ಸೈಟ್‌ನಲ್ಲಿ ಹೆಸರು ನೋಂದಣಿ ಮಾಡಬೇಕು. ಅಲ್ಲದೇ ಅವರು ಶನಿವಾರ ರಾತ್ರಿಯೇ ಕಾರವಾರವನ್ನು ತಲುಪಬೇಕು. ಅವರಿಗೆ ಬೆಳಿಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುವುದು’ ಎಂದು ಲೀಸರ್ ರೂಟ್ಸ್‌ ಸಂಸ್ಥೆ ಮಾಲೀಕ ರೋಶನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.