ADVERTISEMENT

ಚತುಷ್ಪಥ ಕಾಮಗಾರಿ: ಸುರಕ್ಷತೆಗೆ ಆದ್ಯತೆ ನೀಡಿ

ಎನ್‌ಎಚ್‌ಎಐ, ಐಆರ್‌ಬಿ ಕಂಪೆನಿ ಅಧಿಕಾರಿಗಳಿಗೆ ಸಚಿವ ಆರ್‌.ವಿ.ದೇಶಪಾಂಡೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:59 IST
Last Updated 11 ಜುಲೈ 2017, 11:59 IST

ಕಾರವಾರ: ‘ಕುಮಟಾ ತಾಲ್ಲೂಕಿನ ತಂಡ್ರಕುಳಿಯಲ್ಲಿ ನಡೆದ ದುರಂತ ಮರು ಕಳಿಸಬಾರದು. ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ–66ರ ಆಸುಪಾಸಿನಲ್ಲಿರುವ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಸೂಚಿಸಿದರು.

ಜಿಲ್ಲೆಯ ಮಳೆ ಬೆಳೆ ಪರಿಸ್ಥಿತಿ ಹಾಗೂ ಪ್ರಕೃತಿ ವಿಕೋಪ ಹಾಗೂ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿಯ ಅಧಿಕಾರಿಗಳು ಮನಸ್ಸಿಗೆ ಬಂದ ಹಾಗೆ ಕೆಲಸ ಮಾಡುವಂತಿಲ್ಲ. ನಿಯಮಾವಳಿಯನ್ನು ಗಾಳಿಗೆ ತೂರಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಭಿವೃದ್ಧಿ ಯೋಜನೆಗಳಿಗೆ ನಮ್ಮ ಸಹಕಾರ ಇದೆ. ಆದರೆ ನಿಯಮ ಮೀರಿ ಕೆಲಸ ಮಾಡಿದರೆ ಕಾಮಗಾರಿಗೆ ತಡೆ ನೀಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಹಳಿಯಾಳ ಮತ್ತು ಮುಂಡಗೋಡು ತಾಲ್ಲೂಕುಗಳು ಹೊರತುಪಡಿಸಿ ಜಿಲ್ಲೆಯ ಉಳಿದ ತಾಲ್ಲೂಕುಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಕಲ್ಲು, ಮಣ್ಣು  ತೆಗೆಯಬೇಕಾದರೂ ಜಿಲ್ಲಾಡ ಳಿತದ ಪರವಾನಗಿ ಪಡೆಯಬೇಕು. ಆದರೆ ಐಆರ್‌ಬಿ ಕಂಪೆನಿಯವರು ಪರವಾನಗಿ ಪಡೆಯದೇ ಕಲ್ಲು, ಮಣ್ಣನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಕಾನೂನು ವಿರೋಧಿ ನಡೆಯಾಗಿದ್ದು, ಇದರಿಂದ ಸರ್ಕಾರಕ್ಕೆ ಸಂದಾಯ ಆಗಬೇಕಾದ ರಾಜಧನ ಕೂಡ ತಪ್ಪಿದೆ. ಸ್ಥಳೀಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಮಹತ್ವ ನೀಡುವ ಮೊದಲು ರಾಜ್ಯ ಸರ್ಕಾರದ ನಿಯಮಗಳಿಗೆ ತಕ್ಕಂತೆ ನಡೆಯಬೇಕು’ ಎಂದು ಸೂಚಿಸಿದರು.

‘ಚತುಷ್ಪಥ ಕಾಮಗಾರಿ ಕಾಮಗಾರಿ ಕೈಗೊಳ್ಳುವ ಪೂರ್ವದಲ್ಲಿ ಆಗಿನ ಕೇಂದ್ರ ಸಾರಿಗೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ, ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಸಣ್ಣ ಪುಟ್ಟ ಬದಲಾವಣೆಗಳಿಗೆ ಅವಕಾಶವಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾನ್ಯ ಮಾಡುತ್ತಿಲ್ಲ. ಬೆಂಗಳೂರಿನಲ್ಲಿ ಪಿಡಬ್ಲ್ಯೂಡಿ ಕಾರ್ಯದರ್ಶಿ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳ ಸಭೆ ಕರೆದು ಅಗತ್ಯ ಸೂಚನೆ ನೀಡಲಾಗುವುದು’ ಎಂದು ಹೇಳಿದರು.

ಶಾಸಕರ ಅಸಮಾಧಾನ:
‘ಜಿಲ್ಲೆಯಲ್ಲಿ ಜನಸಾಮಾನ್ಯರು ಮನೆ ನಿರ್ಮಿಸಿಕೊಳ್ಳಲು ಮರಳು, ಕಲ್ಲು ಸಿಗದೇ ಪರದಾಡುತ್ತಿದ್ದಾರೆ. ಆದರೆ ಐಆರ್‌ಬಿ ಕಂಪೆನಿ ಮಾತ್ರ ಮರಳು, ಜಲ್ಲಿಕಲ್ಲು, ಕೆಂಪು ಮಣ್ಣು  ಸೇರಿದಂತೆ ಸಾರ್ವಜನಿಕ ಆಸ್ತಿಯನ್ನು ಲೂಟಿ ಹೊಡೆಯುತ್ತಿದೆ. ಇಷ್ಟಾದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷ್ಕ್ರಿಯವಾಗಿದೆ. ಇನ್ನು ಜಿಲ್ಲಾಡಳಿತ ಕೂಡ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ’ ಎಂದು ಶಾಸಕರಾದ ಸತೀಶ್ ಸೈಲ್ ಹಾಗೂ ಮಂಕಾಳು ವೈದ್ಯ ಅಸಮಾಧಾನ ವ್ಯಕ್ತಪಡಿಸಿದರು.

‘ಐಆರ್‌ಬಿ ಕಂಪೆನಿಯು ಟ್ರಕ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಅಧಿಕ ಲೋಡ್‌ ಮಾಡಿಕೊಂಡು ಸಾಗಣೆ ಮಾಡುತ್ತಿದೆ. 20 ಟನ್‌ ಲೋಡ್‌ ಮಾಡಲು ಅವಕಾಶವಿದ್ದಲ್ಲಿ ಕಂಪೆನಿಯು 40 ಟನ್‌ವರೆಗೂ ಕಲ್ಲುಗಳನ್ನು ಸಾಗಿಸುತ್ತಿದೆ. ಆದರೆ ಅರಣ್ಯ ಇಲಾಖೆ, ಆರ್.ಟಿ.ಒ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಜನಸಾಮಾನ್ಯರು ಸಣ್ಣ ತಪ್ಪು ಮಾಡಿದರೂ ಕ್ರಮ ಕೈಗೊಳ್ಳುವ ಅಧಿಕಾರಿಗಳು ಕೋಟ್ಯಂತರ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಿದ್ದರೂ ಜಾಣ ಮೌನ ವಹಿಸಿದ್ದಾರೆ.

ಅಧಿಕಾರಿಗಳ ನಿಷ್ಕ್ರಿಯತೆಯಿಂದ ಜನಪ್ರತಿನಿಧಿಗಳಾದ ನಾವು ಕ್ಷೇತ್ರದ ಜನತೆಗೆ ಮುಖ ತೋರಿಸದಂತಹ ಪರಿಸ್ಥಿತಿ ಉಂಟಾಗಿದೆ’ ಎಂದು ಸತೀಶ್‌ ಸೈಲ್‌ ಸಚಿವರ ಗಮನಕ್ಕೆ ತಂದರು.

ಹಾರಿಕೆಯ ಉತ್ತರ ಬರುತ್ತಿದೆ..:  ‘ಐಆರ್‌ಬಿ ಕಂಪೆನಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಲ್ಲಾಡಳಿತಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಜಿಲ್ಲೆಯಲ್ಲಿ ನಡೆಯುತ್ತಿರುವ ಹೆದ್ದಾರಿ ವಿಸ್ತರಣೆ ಕಾಮಗಾರಿ ವೇಳೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಕೇಳಿದರೆ ಹಾರಿಕೆಯ ಉತ್ತರ ಬರುತ್ತಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷ ಸಂತೋಷ ರೇಣಕೆ ಹಾಜರಿದ್ದರು. ವಿಶೇಷ ಸಭೆ ಕರೆಯಿರಿ: ದೇಶಪಾಂಡೆ ‘ಮುಂದಿನ ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳ ಕುರಿತು ಚರ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪೆನಿಯ ಅಧಿಕಾರಿಗಳು, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತದ ಪ್ರಮುಖ ಅಧಿಕಾರಿ­ಗಳನ್ನೊಳಗೊಂಡ ವಿಶೇಷ ಸಭೆಯನ್ನು ಕರೆಯಿರಿ’ ಎಂದು ದೇಶಪಾಂಡೆ ಜಿಲ್ಲಾಧಿಕಾರಿಗೆ ಸೂಚಿಸಿದರು.

****

ಜುಲೈನಲ್ಲಿ ಮಳೆ ಕೊರತೆ
‘2017ರ ಜನವರಿ 1ರಿಂದ ಮೇ 31ರವರೆಗೆ ವಾಡಿಕೆ ಮಳೆ 132.4 ಮಿ.ಮೀ ಆಗಿದ್ದು, 109.2 ಮಿ.ಮೀ ಮಳೆ ಬಿದ್ದಿದೆ. ಶೇ 18ರಷ್ಟು ಮಳೆ ಕೊರತೆಯಾಗಿದೆ. ಇನ್ನು ಜುಲೈ ತಿಂಗಳಲ್ಲೂ ಮಳೆ ಕೊರತೆಯಾಗಿದೆ. ಆದರೆ ಈವರೆಗೆ ಯಾವುದೇ ಬೆಳೆ ಹಾನಿಯಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂಡಗೋಡ, ಶಿರಸಿ ಹಾಗೂ ಯಲ್ಲಾಪುರ ಭಾಗದಲ್ಲಿ ಭತ್ತದ ಬೆಳೆಗೆ ತೊಂದರೆ ಆಗಲಿದೆ. ಪರ್ಯಾಯ ಬೆಳೆಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರ ಹಾಗೂ ಬಿತ್ತನೆ ಬೀಜ ಅಗತ್ಯ ದಾಸ್ತಾನು ಇದೆ’ ಎಂದು ಕೃಷಿ ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.