ADVERTISEMENT

ಪರ್ಯಾಯ ಬೆಳೆಗಳತ್ತ ರೈತರ ಒಲವು

ಭತ್ತದ ಬೆಳೆಯ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 6:32 IST
Last Updated 13 ಜನವರಿ 2017, 6:32 IST
ಮುಂಡಗೋಡ: ಒಂದು ಕಾಲದಲ್ಲಿ ‘ಭತ್ತದ ಕಣಜ’ ಎಂದೇ ಕರೆಯ ಲಾಗುತ್ತಿದ್ದ ತಾಲ್ಲೂಕಿನಲ್ಲಿ,  ಭತ್ತದ ಬೆಳೆಯ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಪರ್ಯಾಯ ಬೆಳೆ ಗಳು ಭತ್ತದ ಸ್ಥಾನದಲ್ಲಿ ಆಶ್ರಯ ಪಡೆ ಯುತ್ತಿದ್ದು, ಮಳೆಯಾಶ್ರಿತ ಭತ್ತ ಊಟ ಕ್ಕಾಗುವಷ್ಟಾದರೂ ಬೆಳೆಯಲಿ ಎನ್ನುವ ಷ್ಟರ ಮಟ್ಟಿಗೆ ರೈತರು ಬಯಸುವುದು ಸಹಜವಾಗುತ್ತಿದೆ.
 
ಕಳೆದ ಒಂದೂವರೆ ದಶಕದ ಹಿಂದೆ ತಾಲ್ಲೂಕಿನಲ್ಲಿ ಸುರಿಯುತ್ತಿದ್ದ ಮಳೆ ಪ್ರಮಾಣಕ್ಕೂ, ಇತ್ತೀಚಿನ ಏಳೆಂಟು ವರ್ಷಗಳಲ್ಲಿ ಸುರಿದ ಮಳೆಗೂ ಹೋಲಿಕೆ ಮಾಡಿದರೆ, ಅರೆಮಲೆನಾಡು ತಾಲ್ಲೂಕಿ ನಲ್ಲಿ ಭತ್ತ ಬೆಳೆಯುವುದು ಕಷ್ಟ ಎನ್ನು ವಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಈ ಹಿಂದೆ ವರ್ಷಪೂರ್ತಿ ಕುಟುಂಬ ಕ್ಕಾಗುವಷ್ಟು ಭತ್ತವನ್ನು ಸಂಗ್ರಹಿಸಿ, ಉಳಿದಿರುವುದನ್ನು ಬೇರೆಯವರಿಗೆ ಮಾರಿ, ಭತ್ತದಲ್ಲಿ ಲಾಭ ಗಳಿಸುತ್ತಿದ್ದರು. ಆದರೆ, ಈಗ ಕುಟುಂಬಕ್ಕಾಗುವಷ್ಟು ಭತ್ತ ಬಂದರೆ ಸಾಕು ಎನ್ನುವಂತಾಗಿದೆ. 
 
‘ಈ ಹಿಂದೆ ತಾಲ್ಲೂಕಿನಲ್ಲಿ ಹಾಸು ಹೊಕ್ಕಾಗಿದ್ದ  ಸಂಪದ್ಭರಿತವಾದ ಕಾಡು, ಸತತ 3–4 ತಿಂಗಳ ಮಳೆ, ತುಂಬಿರುವ ಕೆರೆಕಟ್ಟೆಗಳು ಸದ್ದಿಲ್ಲದೆ ಮಾಯ ವಾಗು ತ್ತಿದೆ. 70–80ರ ದಶಕದಲ್ಲಿ ಕಂಡಿದ್ದ ಬರಗಾಲದಂತ ಸನ್ನಿವೇಶ, ಜಲಕ್ಷಾಮ, ಹನಿ ನೀರಿಗೂ ಪರದಾಡುವಂತ ಪರಿಸ್ಥಿತಿ ಎಲ್ಲವೂ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಎಂಬಂತಾಗಿವೆ’ ಎನ್ನುತ್ತಾರೆ ಹಿರಿಯರು.
 
‘ಪ್ರಕೃತಿಯ ಬದಲಾವಣೆಯಲ್ಲಿ ಜನರ ಕೊಡುಗೆಯನ್ನು ಅಲ್ಲಗಳೆ ಯುವಂತಿಲ್ಲ. ಮೊದಲಿಗೆ ಇದ್ದ ಕಾಡು ನಿಧಾನವಾಗಿ ಸರಿಯತೊಡಗಿದೆ. ಕಾಡಿ ನಲ್ಲಿರಬೇಕಾದ ಪ್ರಾಣಿಗಳು ಗ್ರಾಮದತ್ತ ಬರುತ್ತಿವೆ. ಕೆರೆಕಟ್ಟೆಗಳು ನೆಲಸಮ ಗೊಂಡು ಕೃಷಿ ಭೂಮಿಗಳಾಗುತ್ತಿವೆ. ಇದೆಲ್ಲದರ ಪರಿಣಾಮವನ್ನು ಈಗ ಅನುಭವಿಸುತ್ತಿದ್ದೇವೆ. ಸಾಕಷ್ಟು ಮಳೆ ಯಾದರೆ ಮಾತ್ರ ಭತ್ತ ಉತ್ತಮವಾಗಿ ಬರಲು ಸಾಧ್ಯ. ಮಳೆಗಾಲದಲ್ಲಿ ತಿಂಗಳಿಗೆ ಒಮ್ಮೆಯಂತೆ ಮಳೆ ಸುರಿದರೆ ಭತ್ತ ಬಂದೀತೇ’ ಎಂದು 80ರ ವಯೋವೃದ್ಧ ಸಣ್ಣಫಕ್ಕೀರಪ್ಪ ಪ್ರಶ್ನಿಸಿದರು.
 
‘ಈ ಹಿಂದೆ ಪ್ರತಿ ರೈತ ಕುಟುಂಬ ಭತ್ತವನ್ನು ಮಾತ್ರ ಬೆಳೆಯುತ್ತಿದ್ದರು. ನಂತರದ ಅವಧಿಯಲ್ಲಿ ಎರಡನೇ ಬೆಳೆ ಯಾಗಿ ಅಲ್ಪಾವಧಿಯ ದ್ವಿದಳ ಧಾನ್ಯ ಗಳನ್ನು ಬೆಳೆದು ಆರ್ಥಿಕವಾಗಿ ಸುಧಾರಿಸಿ ಕೊಳ್ಳುತ್ತಿದ್ದರು.  ಸಾಮಾನ್ಯವಾಗಿ ಎಲ್ಲರ ಹೊಲದಲ್ಲಿಯೂ ಕೊಳವೆ ಬಾವಿಗಳಿ ದ್ದರೂ, ಯಾರಿಗೂ ನೀರು ಸಾಕಾಗುತ್ತಿಲ್ಲ. ರೈತ ಆಗಸದತ್ತ ಮುಖ  ಮಾಡುವುದು ಮಾತ್ರ ನಿಂತಿಲ್ಲ’ ಎಂದು ರೈತ ಧುರೀಣ ಮಹೇಶ ಹೊಸಕೊಪ್ಪ ಹೇಳಿದರು.
 
‘ಕಳೆದ ಹತ್ತು ವರ್ಷಗಳಲ್ಲಿ ತಾಲ್ಲೂಕಿನ ಭತ್ತದ ಗದ್ದೆಗಳು, ವರ್ಷದಿಂದ ವರ್ಷಕ್ಕೆ ಬೇರೆ ಬೆಳೆಗಳಿಗೆ ತಕ್ಕಂತೆ, ಮಾರ್ಪಾಡು ಆಗಿರುವುದನ್ನು ಕಾಣಬಹುದಾಗಿದೆ. ತಂಬಾಕು, ಹತ್ತಿ, ಗೋವಿನಜೋಳ, ಸೂರ್ಯಕಾಂತಿ, ಶುಂಠಿ, ಕಬ್ಬು ಹೀಗೆ ಆಯಾ ವರ್ಷದ ಬೇಡಿಕೆಯ ಬೆಳೆಗಳಿಗೆ ರೈತರು ಒತ್ತು ನೀಡುತ್ತಾ ಬಂದಿದ್ದಾರೆ. 
 
ತಾಲ್ಲೂಕಿನಲ್ಲಿ ಬೆಳೆದ ಭತ್ತ ಬೇರೆ ಬೇರೆ ಜಿಲ್ಲೆಗಳಿಗೆ ರಫ್ತಾಗುತ್ತಿತ್ತು. ಆದರೆ, ಈಗ ಗಂಗಾವತಿ, ಮಲೆಬೆನ್ನೂರ, ದಾವಣಗೇರಿ ಸೇರಿದಂತೆ ಇನ್ನಿತರ ಕಡೆಗಳಿಂದ ತಾಲ್ಲೂಕಿಗೆ ಅಕ್ಕಿ ಆಮದಾಗುತ್ತಿರುವುದು, ‘ಭತ್ತದ ಕಣಜ’ದ ಸದ್ಯದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ’ ಎಂದು ವ್ಯಾಪಾರಸ್ಥ ಸಂಗಮೇಶ ಗೊಟಗೋಡಿ ಹೇಳಿದರು.
 
ವಾಡಿಕೆ ಮಳೆ: 1403 ಮಿ.ಮೀ,  2011–1105 ಮಿ.ಮೀ, 2012–840ಮಿ.ಮೀ, 2013–1103 ಮಿ.ಮೀ, 2014–1180ಮಿ.ಮೀ, 2015–793ಮಿ.ಮೀ, 2016–628ಮಿ.ಮೀ
 
**
ಈಗ ಮಳೆಯ ಕೊರತೆಯಿಂದ, ಭತ್ತದ  ಲಾಭಕ್ಕಿಂತ, ಹಾನಿಯೇ ಜಾಸ್ತಿ ಆಗುತ್ತಿರುವುದರಿಂದ, ರೈತರು ಭತ್ತದಿಂದ ದೂರ ಸರಿದು, ಅಲ್ಪಾವಧಿ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ.
-ಮಹೇಶ ಹೊಸಕೊಪ್ಪ
ರೈತ ಧುರೀಣ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.