ADVERTISEMENT

ವಿದ್ಯಾರ್ಥಿಗಳೊಂದಿಗೆ ಕಾಯ್ಕಿಣಿ ಸಂವಾದ

​ಪ್ರಜಾವಾಣಿ ವಾರ್ತೆ
Published 20 ಜನವರಿ 2015, 6:56 IST
Last Updated 20 ಜನವರಿ 2015, 6:56 IST

ಅಂಕೋಲಾ: ‘ಉದಯೋನ್ಮುಖ ಬರಹ ಗಾರರಲ್ಲಿ ಓದುವ ಸಂಸ್ಕೃತಿ ಕಡಿಮೆ ಯಾಗುತ್ತಿರುವುದರಿಂದ ಉತ್ತಮ ಸಾಹಿತ್ಯ ಕೃತಿಗಳು ಅಪರೂಪವಾಗುತ್ತಿವೆ. ಕೇವಲ ಕಲ್ಪನೆಯಿಂದ ಕಾವ್ಯ ಕಟ್ಟುವುದಕ್ಕಿಂತ ಅನುಭವದ ತೊಟ್ಟಿಲಿನಲ್ಲಿ ಕಾವ್ಯ ಕುಸುಮಗಳು ಅರಳಬೇಕು’ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.

ಸೋಮವಾರ ಸ್ಥಳೀಯ ಪಿ.ಎಂ. ಪ್ರೌಢ ಶಾಲೆಯ ರೈತ ಭವನದಲ್ಲಿ ಕಸಾಪ ತಾಲ್ಲೂಕು ಘಟಕದ ವತಿ ಯಿಂದ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಗಳೊಂದಿಗೆ ಸಾಹಿತ್ಯ ಸಂವಾದ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನವೋದಯದ ಪ್ರಮುಖ ಸಾಹಿತಿಗಳು ತಮ್ಮ ಬದುಕಿನಲ್ಲಿ ಅನುಭವಿಸಿದ ನೋವು ನಲಿವುಗಳನ್ನು ಅರ್ಥಪೂರ್ಣವಾಗಿ ಸಾಹಿತ್ಯದಲ್ಲಿ ಅಭಿವ್ಯಕ್ತಿಸುವ ಮೂಲಕ ಕನ್ನಡಕ್ಕೆ ಶಕ್ತಿಯನ್ನು ತುಂಬಿಸದರು. ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಸಾಹಿತ್ಯದ ಅಧ್ಯಯನ ಒದಗಿಸುತ್ತದೆ’ ಎಂದು ವಿವರಿಸಿದರು.

ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಜಯಂತ ಅವರು ಸಂವಾದ ನಡೆಸಿದರು.

ಹಿರಿಯ ಸಾಹಿತಿ ವಿಷ್ಣು ನಾಯ್ಕ, ಪಿ.ಎಂ. ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರವೀಂದ್ರ ಕೇಣಿ, ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಪ್ರಭಾಕರ ಬಂಟ ಉಪಸ್ಥಿತರಿದ್ದರು.

ಶಿಕ್ಷಕ ನಾಗಪತಿ ಹೆಗಡೆ ಸ್ವಾಗತಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಶಿಕ್ಷಕ ಜಿ.ಆರ್. ತಾಂಡೇಲ ನಿರೂಪಿಸಿದರು. ಜೆ. ಪ್ರೇಮಾನಂದ ವಂದಿಸಿದರು.

ಕವಿಗೋಷ್ಠಿ:  ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮೋಹನ ಹಬ್ಬು, ಎನ್.ವಿ. ನಾಯಕ, ನಾಗಮಣಿ ನಾಯಕ, ಜಯಶೀಲ ಆಗೇರ, ಕಲಾ ಭಟ್, ಎನ್.ಡಿ. ಅಂಕೋಲೆಕರ, ಹೊನ್ನಮ್ಮ ನಾಯಕ, ಫಾಲ್ಗುಣ ಗೌಡ, ರಮೇಶ ವಂದಿಗೆ, ನಮೃತಾ ಹೆಗಡೆ, ವಿಜಯ ಶೇಣ್ವಿ ಮುಂತಾದವರು ಕಾವ್ಯ ವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.