ADVERTISEMENT

ವೈಕಲ್ಯ ಮೀರಿ ಬೆಳೆಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:02 IST
Last Updated 17 ಏಪ್ರಿಲ್ 2017, 7:02 IST

ದಾಂಡೇಲಿ: ಸಮಾಜದ ಅತ್ಯಂತ ಕೆಳ ದರ್ಜೆಯಲ್ಲಿರುವ ಅಂಗವಿಕಲರು ತಮ್ಮ ಸಮಸ್ಯೆ ಮೆಟ್ಟಿ ಯಶಸ್ವಿ ಸ್ವಾಭಿಮಾನದ ಬದುಕನ್ನು ಕಟ್ಟುವುದರ ಮೂಲಕ ಈ ರಾಷ್ಟ್ರದ ತೆರಿಗೆ ಕಟ್ಟುವವರಾಗಬೇಕೆನ್ನುವುದೇ ನಮ್ಮ ಮೊದಲ ಗುರಿ ಎಂದು ಸಮರ್ಥನಂ ಟ್ರಸ್ಟ್ ಅಧ್ಯಕ್ಷ ಹಾಗೂ ಅಂಧರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸಂಘಟಕ ಮಹಾಂತೇಶ.ಜಿ.ಕೆ ಅವರು ಹೇಳಿದರು.

ಅವರು ವಿ.ಆರ್. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ದಾಂಡೇಲಿ ಉತ್ಸವದ ಅಂಗವಾಗಿ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಅಂಗವಿಕಲರು ಶಾಪವಾಗದೇ, ಸ್ವಂತ ಪರಿಶ್ರಮದಿಂದ ಈ ರಾಷ್ಟ್ರದ ಆಸ್ತಿಯಾಗಬೇಕು. ಅವರು ಅವಕಾಶಗಳು ನಮ್ಮನ್ನು ಅರಸಿ ಬರುವುದಿಲ್ಲ. ಬದಲಾಗಿ ಅವಕಾಶಗಳನ್ನು ನಾವು ಹಂಬಲಿಸಿ ಹಟದಿಂದ ಪಡೆದಾಗ ಸಾಧನೆ ಸಾಧ್ಯ. ಕಳೆದ 20 ವರ್ಷಗಳಿಂದ ಸಮರ್ಥನಂ ಸಂಸ್ಥೆ ಅಂಗವಿಕಲರ ಯೋಗಕ್ಷೇಮಕ್ಕಾಗಿ ಮತ್ತು ಸ್ವತಂತ್ರ ಸ್ವಾವಲಂಬಿ ಜೀವನಕ್ಕೆ ಉಪಯುಕ್ತ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತ ಬಂದಿದೆ.

ಅಂಧರ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸವ ಮೂಲಕ ಅಂಧರ ವಿಶ್ವಕಪ್ ಕ್ರಿಕೆಟ್ ಇಂದು ಜನಮನ್ನಣೆಯನ್ನು ಗಳಿಸಿರು­ವುದು ಒಂದೆಡೆಯಾದರೆ ಅಂಧರ ವಿಶ್ವಕಪ್ ಕಿರೀಟವನ್ನು ದೇಶಕ್ಕೆ ತಂದುಕೊಟ್ಟ ನಮ್ಮ ರಾಷ್ಟ್ರದ ಅಂಧರ ವಿಶ್ವ ಕಪ್ ಕ್ರಿಕೆಟ್ ತಂಡ ರಾಷ್ಟ್ರದ ಕೀರ್ತಿಯನ್ನು ಜಗದಗಲಕ್ಕೆ ಪಸರಿಸಿದೆ ಎಂದು ಮಹಾಂತೇಶ.ಜಿ.ಕೆ ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಅಂಧರ ಕ್ರಿಕೆಟ್ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ನಾಯಕ ಶೇಖರ ನಾಯ್ಕ ಹಾಗೂ ಏಳು ಜನ ಆಟಗಾರರನ್ನು ಮತ್ತು ಅಂಗವಿಕಲೆ­ಯಾಗಿದ್ದರೂ ಯಶಸ್ವಿ ಸ್ವ ಉದ್ಯೋಗ­ವನ್ನು ನಡೆಸಿ ಬದುಕು ಕಟ್ಟಿಕೊಂಡಿರುವ ಸಾಧಕಿ ಮಂಜುಳಾ ತಟ್ಟಿಕೈ ಅವರನ್ನು ವಿ.ಆರ್.ಡಿ.ಎಂ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ಕೇರಿ.ಎಂ.ಕೆ.ನಾಯಕ ಹಾಗೂ ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕ ಕೆ.ಜಿ.ಗಿರಿರಾಜ ಅವರು ಉದ್ಘಾಟಿಸಿದರು.

ವಿವಿಧ ಮನೋರಂಜನಾ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿತು. ಅಂತರಾಷ್ಟ್ರೀಯ ಕಲಾವಿದ ವಿಲಾಸ ನಾಯಕ ಅವರಿಂದ ಸ್ಪೀಡ್ ಪೇಂಟಿಂಗ್ ಹಾಗೂ ಅಂತರರಾಷ್ಟ್ರೀಯ ಖ್ಯಾತ ಕೇರಳದ ಕಲಾವಿದರಗಳಿಂದ ಕಲರಿ ಪಯಟ್ಟು ಪ್ರದರ್ಶನವು ಎಲ್ಲರ ಕಣ್ಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.