ADVERTISEMENT

ಹಿತ್ತಲಲ್ಲಿ ಸಮೃದ್ಧ ಹಸಿರು ಮೇವು

ಸಂಧ್ಯಾ ಹೆಗಡೆ
Published 18 ಸೆಪ್ಟೆಂಬರ್ 2017, 6:43 IST
Last Updated 18 ಸೆಪ್ಟೆಂಬರ್ 2017, 6:43 IST
ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಪ್ರಾಯೋಗಿಕವಾಗಿ ಬೆಳೆಸಿರುವ ಹಸಿರು ಮೇವು
ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಪ್ರಾಯೋಗಿಕವಾಗಿ ಬೆಳೆಸಿರುವ ಹಸಿರು ಮೇವು   

ಶಿರಸಿ: ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಎದುರಾಗಿರುವ ಹಸಿರು ಮೇವಿನ ಕೊರತೆ ನೀಗಿಸಲು ಕೃಷಿ ವಿಜ್ಞಾನ ಕೇಂದ್ರವು ಬೆಟ್ಟ, ಬದುಗಳಲ್ಲಿ ಹಸಿರು ಮೇವು ಬೆಳೆಸುವ ಪ್ರಯೋಗಕ್ಕೆ ಕೈಹಾಕಿದೆ.

ಮಳೆಗಾಲ ಕಳೆದು ಮೂರ್ನಾಲ್ಕು ತಿಂಗಳಾಗುವ ಹೊತ್ತಿಗೆ ಜಾನುವಾರಿಗೆ ಹಸಿರು ಮೇವಿನ ಕೊರತೆ ಎದುರಾಗುತ್ತದೆ. ಇದರಿಂದ ಹಾಲು ಉತ್ಪಾದನೆ ಇಳಿಮುಖವಾಗುತ್ತದೆ. ಕೆಲವೆಡೆ ಹೈಡ್ರೊಫೋನಿಕ್ಸ್ ತಂತ್ರಜ್ಞಾನದ ಪ್ರಯೋಗಗಳು ನಡೆಯುತ್ತಿವೆ.

ಈ ನಡುವೆ ಕೃಷಿ ವಿಜ್ಞಾನ ಕೇಂದ್ರವು ಬೆಟ್ಟ ಭೂಮಿಯಲ್ಲಿ ಪ್ರೊಟೀನ್ ಅಂಶ ಹೊಂದಿರುವ ಕ್ಯಾಲಿಯಾಂಡ್ರಾ, ಅಗಸೆ, ಸುಬಾಬುಲ್ ಬೆಳೆಸಿ ಹಸಿರು ಮೇವಿನ ಕೊರತೆ ನಿವಾರಿಸಿಕೊಳ್ಳಬಹುದು ಎಂದು ರೈತರಿಗೆ ಸಲಹೆ ನೀಡುತ್ತಿದೆ. ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಆವರಣದಲ್ಲಿ ನಾಲ್ಕು ಜಾತಿಯ ಹಸಿರು ಮೇವು ಬೆಳೆಸಿರುವ ಕೃಷಿ ಅರಣ್ಯ ವಿಜ್ಞಾನಿ ಎಲ್. ವೆಂಕಟೇಶ ಅವರು ರೈತರಿಗೆ ಇದನ್ನು ಪ್ರದರ್ಶಿಸಿ ಬೆಟ್ಟ, ಮನೆ ಹಿತ್ತಲಿನಲ್ಲಿ ಇವನ್ನು ಬೆಳೆಸುವಂತೆ ಪ್ರೇರೇಪಿಸುತ್ತಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ ಹಸಿರು ಮೇವಿನ ಕೊರತೆ ಎದುರಾಗುವ ಸುದ್ದಿಯನ್ನು ಆಗಾಗ ಕೇಳುತ್ತವೆ. ಇದಕ್ಕೆ ಪರ್ಯಾಯ ಸೂಚಿಸುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಗಿದೆ. ಸಣ್ಣ ಜಾಗದಲ್ಲಿರುವ ಮನೆಯ ಹಿತ್ತಲಿನ ಬದುಗಳಲ್ಲಿ ಇದನ್ನು ಬೆಳೆಸಬಹುದು. ಬೆಟ್ಟ ಹೊಂದಿರುವವರು ಬೆಟ್ಟದಲ್ಲಿ ದ್ವಿದಳ ಧಾನ್ಯದ ಗುಣಲಕ್ಷಣ ಹೊಂದಿರುವ  ಕ್ಯಾಲಿಯಾಂಡ್ರಾ, ಅಗಸೆ ಗಿಡಗಳನ್ನು ನಾಟಿ ಮಾಡಬಹುದು’ ಎನ್ನುತ್ತಾರೆ ವೆಂಕಟೇಶ.

‘ಬಹುಪಯೋಗಿ ಈ ಸಸ್ಯಗಳಲ್ಲಿ ಶೇ 20ರಷ್ಟು ಪ್ರೊಟೀನ್ ಅಂಶ ಇರುತ್ತದೆ. ದನ, ಎಮ್ಮೆ, ಕುರಿಗಳಿಗೆ ಇದನ್ನು ನಿಯಮಿತವಾಗಿ ಕೊಡುತ್ತ ಬಂದರೆ ಹಾಲಿನ ಉತ್ಪಾದನೆ ವೃದ್ಧಿಸುತ್ತದೆ. ಸಸಿ ನಾಟಿ ಮಾಡಿ ಆರು ತಿಂಗಳಿಗೆ ಹಸಿರು ಮೇವು ಪಡೆಯಬಹುದು. ಬೀಜ ಬಿತ್ತನೆ ಮಾಡಿ ಅಗಸೆ ಬೆಳೆಸಿದರೆ, ಹೆಣೆ ನಾಟಿ ಮಾಡಿ ಕ್ಯಾಲಿಯಾಂಡ್ರಾ ಬೆಳೆಸಬಹುದು. ನಾಟಿ ಮಾಡಿದ ಆರು ತಿಂಗಳಿಗೆ ಒಂದು ಗಿಡದಿಂದ 30–40 ಕೆ.ಜಿ ಮೇವು ದೊರೆಯುತ್ತದೆ. ಒಂದು ಹೆಕ್ಟೇರ್‌ನಲ್ಲಿ 14 ಟನ್‌ನಷ್ಟು ಕ್ಯಾಲಿಯಾಂಡ್ರಾ ಮೇವು ಲಭ್ಯವಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. 

ಕಾನಗೋಡಿನ ರಮೇಶ ಹೆಗಡೆ ಅವರ ಬೆಟ್ಟದಲ್ಲಿ ಪ್ರಾಯೋಗಿಕವಾಗಿ ನಾಟಿ ಮಾಡಲಾಗಿದೆ. ಇತ್ತೀಚೆಗೆ ಅಲ್ಲಿಯೇ ಕೆಲವು ರೈತರಿಗೆ ತರಬೇತಿ ನೀಡಿ ಸಸಿಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು. ‘ಬೆಟ್ಟದಲ್ಲಿ ಇಂತಹ ಸಸ್ಯಗಳನ್ನು ಬೆಳೆಸಿದರೆ ಉತ್ತಮ ಇಳುವರಿ ಪಡೆಯಬಹುದು. ಆದರೆ ವನ್ಯಪ್ರಾಣಿಗಳ ಕಾಟದಿಂದ ಇವನ್ನು ರಕ್ಷಿಸಿಕೊಳ್ಳಬೇಕು’ ಎಂದ ಅವರು,  ಮೊಲಗಳು ಸಸಿಗಳ ಚಿಗುರನ್ನು ಚಿವುಟುತ್ತವೆ’ ಎಂದು ರಮೇಶ ಹೆಗಡೆ ಪ್ರತಿಕ್ರಿಯಿಸಿದರು.

* * 

ಜಾನುವಾರಿಗೆ ಹಸಿರು ಮೇವು ನಿರಂತರವಾಗಿ ಬಳಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚುತ್ತದೆ
ಎಲ್. ವೆಂಕಟೇಶ,
ಕೃಷಿ ಅರಣ್ಯ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.