ADVERTISEMENT

ಮಹಿಳಾ ಕ್ರಿಕೆಟ್‌: ಭರವಸೆ ಮೂಡಿಸಿದ ದೀಕ್ಷಿತಾ

ಆಫ್ ಸ್ಪಿನ್ ಬೌಲಿಂಗ್, ರೈಟ್ ಹ್ಯಾಂಡ್ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ಆಲ್‌ ರೌಂಡರ್

ಸದಾಶಿವ ಎಂ.ಎಸ್‌.
Published 31 ಜುಲೈ 2018, 11:21 IST
Last Updated 31 ಜುಲೈ 2018, 11:21 IST
ದೀಕ್ಷಿತಾ ಸಾಗೇಕರ್
ದೀಕ್ಷಿತಾ ಸಾಗೇಕರ್   

ಕಾರವಾರ: ‘ಅಣ್ಣನ ಜತೆ ಕ್ರಿಕೆಟ್ ಆಡಿ ಆಡಿ ನಾನೂ ಕ್ರಿಕೆಟರ್ ಆಗಬೇಕು ಅನ್ನೋ ಆಸೆ ಬೆಳೀತು. ಅದೇ ಕನಸಿಟ್ಟುಕೊಂಡು ಬೆಳಗಾವಿಗೆ ಹೋಗಿ ಎರಡು ವರ್ಷ ತರಬೇತಿ ಪಡ್ಕೊಂಡೆ. ಅದರ ಫಲವಾಗಿ ‘ಬಿಜಾಪುರ ಬುಲ್ಸ್’ನ ಮಹಿಳಾ ತಂಡಕ್ಕೆ ಆಯ್ಕೆಯಾದೆ. ಕ್ರಿಕೆಟ್‌ನಲ್ಲಿ ನಾನು ಮತ್ತಷ್ಟು ಸಾಧನೆ ಮಾಡಬೇಕು...’

ಹೀಗೆಂದು ‘ಪ್ರಜಾವಾಣಿ’ ಜತೆ ಮನಸಿನ ಭಾವನೆಗಳನ್ನು ಹಂಚಿಕೊಂಡವರು ದೀಕ್ಷಿತಾ ಸಾಗೇಕರ್. ನಗರದ ನಂದನಗದ್ದಾ ಬಳಿಯ ನಾಗನಾಥವಾಡದ ನಿವಾಸಿಯಾಗಿರುವ ಅವರು, ಮಹಿಳಾ ಕ್ರಿಕೆಟ್‌ನಲ್ಲಿ ಉತ್ತಮ ಆಲ್‌ ರೌಂಡರ್ ಆಗುವ ವಿಶ್ವಾಸದಲ್ಲಿದ್ದಾರೆ. ಆಫ್ ಸ್ಪಿನ್ ಬೌಲಿಂಗ್ ಹಾಗೂ ರೈಟ್ ಹ್ಯಾಂಡ್ ಬ್ಯಾಟಿಂಗ್ ಅವರ ಸಾಮರ್ಥ್ಯವಾಗಿದೆ.

ಅವರ ಅಣ್ಣ ಧೀರಜ್ ಕೂಡ ಕ್ರಿಕೆಟ್ ಆಟಗಾರ. 2017–18ನೇ ಸಾಲಿನಲ್ಲಿ ಧಾರವಾಡ ವಿಭಾಗಮಟ್ಟದ ತಂಡದ ಸದಸ್ಯರಾಗಿದ್ದರು. ಅವನ ಹಾಗೇ ತಾನೂ ಕ್ರಿಕೆಟ್ ಆಡಬೇಕು ಎಂದುಕೊಂಡು ಬೆಳಗಾವಿಯ ಆನಂದ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಕೊಂಡರು.

ADVERTISEMENT

ಸದಾಶಿವಗಡದ ಬಿಜಿವಿಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಷಯ ಅಧ್ಯಯನ ಮಾಡಿರುವ ಅವರು, ಓದಿನ ನಡುವೆಯೂ ಕ್ರಿಕೆಟ್‌ಗೆ ಸಮಯ ಮೀಸಲಿಟ್ಟಿದ್ದಾರೆ.

‘ಆನಂದ ಕಲಾಡಿ ಅವರ ತರಬೇತಿ ಶಿಬಿರದಲ್ಲಿ ನಾನೊಬ್ಬಳೇ ಹುಡುಗಿಯಿದ್ದೆ. ಆರಂಭದಲ್ಲಿ ಕಷ್ಟವಾಯಿತು. ಆದರೆ, ಅಣ್ಣನ ಬೆಂಬಲದಿಂದ ಕ್ರಿಕೆಟ್ ಇಷ್ಟವಾಯ್ತು. ಕರ್ನಾಟಕ ಪ್ರೀಮಿಯರ್ ಲೀಗ್‌ನ ‘ಬಿಜಾಪುರ ಬುಲ್ಸ್’ ತಂಡದವರು ನನ್ನನ್ನು ನೇಪಾಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಕ್ರಿಕೆಟ್ ಆಡಿದ್ದು ನೆನಪಿನಲ್ಲಿ ಉಳಿಯುವಂಥದ್ದು’ ಎಂದು ಸಂತಸ ವ್ಯಕ್ತಪಡಿಸಿದರು.

‘ಆ ಸರಣಿಯಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ದೀಕ್ಷಿತಾಳಿಗೆ ಎರಡರಲ್ಲಿ ‘ಮ್ಯಾನ್‌ ಆಫ್ ದ ಮ್ಯಾಚ್’ ಗೌರವ ಸಿಕ್ಕಿತು. ಅದೇ ಸರಣಿಯಲ್ಲಿ ‘ಮ್ಯಾನ್‌ ಆಫ್ ದ ಸೀರೀಸ್’ ಪ್ರಶಸ್ತಿಯೂ ದೊರೆಯಿತು’ ಎಂದು ಅವರ ಅಣ್ಣ ಧೀರಜ್ ಹೇಳುತ್ತಾರೆ.

ಸಾಧನೆ:ಈವರೆಗೆ ಲೆದರ್ ಬಾಲ್‌ನಲ್ಲಿ ಏಳು ಪಂದ್ಯಗಳನ್ನು ಆಡಿದ್ದು, ಅವರು ಭಾಗವಹಿಸಿದ್ದ ಆರು ಪಂದ್ಯಗಳಲ್ಲಿ ಅವರ ತಂಡ ಜಯ ಸಾಧಿಸಿದೆ. ಆರೋಗ್ಯ ಸರಿಯಿಲ್ಲದ ಕಾರಣ ಒಂದರಲ್ಲಿ ಭಾಗವಹಿಸಿರಲಿಲ್ಲ. ಆಸ್ಟ್ರೇಲಿಯಾಕ್ಕೆ ಹೋಗಲೂ ತಂಡದಿಂದ ಕರೆ ಬಂದಿತ್ತು. ಆದರೆ, ಹಣಕಾಸಿನ ತೊಂದರೆಯಿಂದ ಹೋಗಲು ಸಾಧ್ಯವಾಗಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಂದೆ ದೀಪಕ್ ಸಾಗೇಕರ್ ಮತ್ತು ತಾಯಿ ದಿವ್ಯಾ ಸಾಗೇಕರ್ ಅವರ ಪುತ್ರಿಯಾಗಿರುವ ದೀಕ್ಷಿತಾ, ಮುಂದೊಂದು ದಿನ ರಾಜ್ಯ ತಂಡವನ್ನು ಪ್ರತಿನಿಧಿಸುವ ನಿರೀಕ್ಷೆಯಲ್ಲಿದ್ದಾರೆ.

‘ಸಚಿನ್ ತುಂಬಾ ಇಷ್ಟ’:‘ನನಗೆ ಸಚಿನ್ ತೆಂಡೂಲ್ಕರ್ ಬಗ್ಗೆ ತುಂಬ ಗೌರವವಿದೆ. ಬೆಂಗಳೂರಿನಲ್ಲಿ ಅವರನ್ನು ದೂರದಿಂದ ನೋಡಿದ್ದೆ. ಆದರೆ, ಅವರನ್ನು ಭೇಟಿ ಮಾಡಲಾಗಲಿಲ್ಲ. ಮಹೇಂದ್ರ ಸಿಂಗ್ ಧೋನಿ ಕೂಡ ಅಚ್ಚುಮೆಚ್ಚು’ ಎನ್ನುವ ಅವರಿಗೆ, ವಿರಾಟ್ ಕೊಹ್ಲಿ ಅಷ್ಟು ಇಷ್ಟವಿಲ್ಲವಂತೆ. ‘ಮಹಿಳಾ ತಂಡದಲ್ಲಿ ವೇದಾ ಕೃಷ್ಣಮೂರ್ತಿ ಮತ್ತು ಮಿಥಾಲಿ ರಾಜ್ ಅವರನ್ನು ಆದರ್ಶವಾಗಿ ಕಾಣುತ್ತೇನೆ’ ಎಂದು ಹೇಳಲು ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.