ADVERTISEMENT

ಶೇ 90ರಷ್ಟು ಕುಟುಂಬಗಳಿಗಿಲ್ಲ ಶೌಚಾಲಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 10:14 IST
Last Updated 16 ಏಪ್ರಿಲ್ 2017, 10:14 IST

ವಿಜಯಪುರ: ಅತ್ಯಾಧುನಿಕ ತಂತ್ರಜ್ಞಾನಕ್ಕೂ ಮಣ್ಣು ಮುಕ್ಕಿಸಿ, ಶೌಚಾಲಯ ನಿರ್ಮಿಸಿಕೊಳ್ಳಲಾಗಿದೆ ಎಂದು ದಾಖಲೆಗಳಲ್ಲಿ ಲೆಕ್ಕಕ್ಕೆ ತೋರಿಸಿ, ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಆಘಾತಕಾರಿ ಬೆಳವಣಿಗೆ ಬಸವನಬಾಗೇವಾಡಿ ತಾಲ್ಲೂಕು ದಿಂಡವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದಿಂಡವಾರ (1205), ಉತ್ನಾಳ (300), ಉತ್ನಾಳ ತಾಂಡಾ (380), ಕಾಮನಕೇರಿ (509), ಬೂದಿಹಾಳ (532) ಗ್ರಾಮಗಳು ಬರಲಿದ್ದು, ಒಟ್ಟು 2,926 ಕುಟುಂಬಗಳು ವಾಸಿಸುತ್ತಿವೆ.

ಪಂಚಾಯ್ತಿ ದಾಖಲೆ ಪ್ರಕಾರ 2010ರಿಂದ 2016ರ ಅಂತ್ಯದವರೆಗೆ 276 ಶೌಚಾಲಯ ನಿರ್ಮಿಸಲಾಗಿದೆ. ಇದಕ್ಕೂ ಮುನ್ನ ಬೆರಳಣಿಕೆಯಷ್ಟು ಶೌಚಾಲಯ ಮಾತ್ರ ನಿರ್ಮಾಣಗೊಂಡಿದ್ದವು ಎಂದು ಪಿಡಿಓ ಮಾಹಿತಿ ನೀಡಿದ್ದಾರೆ. ಆದರೆ ಶೌಚಾಲಯ ಮಂಜೂರು ಮಾಡಿಸಿಕೊಂಡ ಬಹುತೇಕರು ನಿರ್ಮಿಸಿಕೊಂಡಿಲ್ಲ. ಇಂದಿಗೂ ಬಯಲು ಬಹಿರ್ದೆಸೆಗೆ ತೆರಳುವುದು ತಪ್ಪಿಲ್ಲ.

ದಾಖಲೆಗಳ ಪ್ರಕಾರವೇ ಇದುವರೆಗೂ ದಿಂಡವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಶೇ 10ರಷ್ಟು ಕುಟುಂಬಗಳಿಗೆ ಮಾತ್ರ ಶೌಚಾಲಯ ಸೌಲಭ್ಯವಿದ್ದರೆ, ಉಳಿದ 90 % ಕುಟುಂಬಗಳಿಗೆ ಇಂದಿಗೂ ಶೌಚಾಲಯ ಭಾಗ್ಯವೇ ಇಲ್ಲವಾಗಿದೆ.ಈಗಾಗಲೇ ಶೌಚಾಲಯ ಮಂಜೂರು ಮಾಡಿಸಿಕೊಂಡಿರುವ 276 ಕುಟುಂಬಗಳಲ್ಲಿ ಬಹುತೇಕರು ನಿರ್ಮಿಸಿಕೊಳ್ಳದೇ, ಅನುದಾನ ಪಡೆಯಲಿಕ್ಕಾಗಿ ಕಡತಗಳಿಗೆ ದಾಖಲೆ ಅಡಕ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಗೊಂಡಿದೆ.

ADVERTISEMENT

ಈ ಅಕ್ರಮದ ಕುರಿತಂತೆ ಪಿಡಿಓ ಸಹ ಈ ರೀತಿಯ ನಾಲ್ಕೈದು ಪ್ರಕರಣ ಗಮನಕ್ಕೆ ಬಂದಿವೆ. ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಅಕ್ರಮ ನಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಶೌಚಾಲಯ ನಿರ್ಮಾಣ ಆಂದೋಲನ ಇಲ್ಲಿ ಕಾರ್ಯರೂಪಕ್ಕೆ ಬಾರದೆ ಅನುದಾನ ಪಡೆಯಲಿಕ್ಕೆ ಸೀಮಿತವಾಗಿದೆ ಎಂಬ ಆಘಾತಕಾರಿ ಅಂಶ ಪಂಚಾಯ್ತಿ ದಾಖಲೆಗಳಿಂದ ಬಹಿರಂಗಗೊಂಡಿದೆ.

ಸೇಫ್ಟಿ ಟ್ಯಾಂಕ್‌ ಇಲ್ಲ: ನಗರ, ಪಟ್ಟಣ ಪ್ರದೇಶಗಳಲ್ಲಿರುವ ಯುಜಿಡಿ ವ್ಯವಸ್ಥೆ ಗ್ರಾಮೀಣ ಪ್ರದೇಶದಲ್ಲಿಲ್ಲ. ಶೌಚಾಲಯ ನಿರ್ಮಿಸಿಕೊಳ್ಳುವ ಗ್ರಾಮೀಣ ಫಲಾನುಭವಿಗಳು ಕಡ್ಡಾಯವಾಗಿ ಮೊದಲು ಸೇಫ್ಟಿಟ್ಯಾಂಕ್‌ ಕಟ್ಟಿಸಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಪಂಚಾಯ್ತಿ ಅಧ್ಯಕ್ಷರೂ ಸೇರಿದಂತೆ ಬಹುತೇಕರು ಕೇವಲ ಸರ್ಕಾರದ ಅನುದಾನ ಪಡೆಯಲೆಂದೇ ಕಾಟಾಚಾರಕ್ಕೆ ಎಂಬಂತೆ ಸುತ್ತ ನಾಲ್ಕು ಗೋಡೆ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ಜಿಪಿಎಸ್‌ ಅಳವಡಿಸಲಾಗಿದೆಯಾದರೂ, ಪ್ರಯೋಜನವಾಗಿಲ್ಲ.  ಸಿದ್ಧಗೊಂಡ ಶೌಚಾಲಯವೊಂದರ ಮುಂಭಾಗ ಇತರೆ ಫಲಾನುಭವಿಗಳ ಜಿಪಿಎಸ್‌ ಮಾಡಿ ಬಿಲ್‌ ಮಾಡಿಸಿಕೊಂಡು, ಸರ್ಕಾರದ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ದೂರು ಸ್ಥಳೀಯರದ್ದು. ಇದು ಒಂದು ಹಳ್ಳಿಯ ಕತೆಯಲ್ಲ. ಪಂಚಾಯ್ತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿಯೂ ಇಂತಹ ಪ್ರಕರಣ ಸರ್ವೇ ಸಾಮಾನ್ಯವಾಗಿವೆ.

ಬದಲಿ ಹೆಸರಿಗೆ ಮಂಜೂರು: ಸರ್ಕಾರದಿಂದ ಅನುದಾನ ಪಡೆಯಬೇಕಾದರೆ ಕೆಲ ನಿಯಮಾವಳಿಗಳಿರುತ್ತವೆ. ಆದರೆ ದಿಂಡವಾರ ಪಂಚಾಯ್ತಿ ಮಾತ್ರ ಇದಕ್ಕೆ ಹೊರತಾಗಿದೆ ಎನ್ನುವಂತೆ ಫಲಾನುಭವಿಗಳ ಹೆಸರಿನಲ್ಲಿ ಮನೆ ಇಲ್ಲದಿದ್ದರೂ, ಶೌಚಾಲಯ ಮಂಜೂರು ಮಾಡಿರುವ ಪ್ರಕರಣ ಸಾಕಷ್ಟಿವೆ.ಇದರ ಜತೆಗೆ ಒಂದು ಮನೆಗೆ ಒಂದೇ ಶೌಚಾಲಯ ಮಂಜೂರು ಮಾಡಬೇಕಾದ ನಿಯಮ ಇದ್ದರೂ ಕೂಡ, ಅನುದಾನ ಪಡೆಯುವ ದುರುದ್ದೇಶದಿಂದ ಒಂದೇ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚು ಶೌಚಾಲಯ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.