ADVERTISEMENT

ಸ್ಪರ್ಧಾ ಕಣದಿಂದ ಹಿಂದೆ ಸರಿಯಲು ಆಗ್ರಹ

ಬೆಳ್ಳುಬ್ಬಿ ಸ್ಪರ್ಧೆಗೆ ಪಂಚಮಸಾಲಿ ಸಮಾಜ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:52 IST
Last Updated 26 ಏಪ್ರಿಲ್ 2018, 13:52 IST

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಸ್ಪರ್ಧಿಸಿರುವುದಕ್ಕೆ ಜಿಲ್ಲಾ ಪಂಚಮಸಾಲಿ ಸಮಾಜ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಬಿಜೆಪಿ ಅಭ್ಯರ್ಥಿ, ಪಂಚಮಸಾಲಿ ಸಮುದಾಯದ ಬಸನಗೌಡ ಪಾಟೀಲ ಯತ್ನಾಳ ವಿರುದ್ಧವೇ ಎಸ್‌.ಕೆ.ಬೆಳ್ಳುಬ್ಬಿ ಸ್ಪರ್ಧಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕಣದಿಂದ ಹಿಂದಕ್ಕೆ ಸರಿಯಬೇಕು’ ಎಂದು ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್‌.ಬಿರಾದಾರ ಒತ್ತಾಯಿಸಿದರು.

‘ಯತ್ನಾಳ ನಮ್ಮ ಪಂಚಮಸಾಲಿ ಸಮಾಜದ ನಾಯಕ. ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ. ಟಿಕೆಟ್‌ ತಪ್ಪಿಸಿದ್ದಾರೆ ಎಂದು ಬೆಳ್ಳುಬ್ಬಿ ಸ್ಪರ್ಧಿಸಿರುವುದು ಸರಿಯಾದ ಕ್ರಮವಲ್ಲ. ದುರುದ್ದೇಶದಿಂದಲೇ ಸ್ಪರ್ಧಿಸಿದ್ದಾರೆ. ನಮ್ಮ ಸಮಾಜದ ನಾಯಕರ ವಿರುದ್ಧವೇ ಸ್ಪರ್ಧಿಸುವುದು ಎಷ್ಟರ ಮಟ್ಟಿಗೆ ಸರಿ?‘ ಎಂದು ಬಿರಾದಾರ ಬುಧವಾರ ಸಂಜೆ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಈ ಹಿಂದೆ ಬೆಳ್ಳುಬ್ಬಿ ಸಚಿವರಾಗಲು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಲು ಯತ್ನಾಳ ಶ್ರಮ ಅಪಾರವಾಗಿದೆ. ಈ ಎಲ್ಲವನ್ನೂ ಗಮನದಲ್ಲಿರಿಸಿಕೊಂಡು, ಕೂಡಲೇ ಕಣದಿಂದ ಹಿಂದೆ ಸರಿಯಬೇಕು’ ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಆಗ್ರಹಿಸಿದರು. ಪತ್ರಕರ್ತರು ಕೇಳಿದ ಯಾವೊಂದು ಪ್ರಶ್ನೆಗೆ ಭೀಮನಗೌಡ ಬಿರಾದಾರ ಸಮರ್ಪಕ ಉತ್ತರ ನೀಡಲಿಲ್ಲ.

ಸಮಾಜದ ಮುಖಂಡರಾದ ಎಸ್‌.ಆರ್.ಬುಕ್ಕಾಣಿ, ವೀರೇಶ ಕಸಬೇಗೌಡರ, ಸಿ.ಎಂ.ಪತಂಗಿ, ಶರಣು ನಿಡಗುಂದಿ, ಸದಾಶಿವ ಹಳ್ಳಿಗಿಡದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

**
ಇನ್ನೂ ಕಾಲ ಮಿಂಚಿಲ್ಲ, ಕೂಡಲೇ ನಾಮಪತ್ರ ಹಿಂತೆಗೆದುಕೊಂಡು ಯತ್ನಾಳ ಅವರಿಗೆ ಬೆಂಬಲ ಸೂಚಿಸಬೇಕು
– ಬಿ.ಎಸ್‌.ಬಿರಾದಾರ, ಅಧ್ಯಕ್ಷ, ಪಂಚಮಸಾಲಿ ಸಮಾಜದ ಜಿಲ್ಲಾ ಘಟಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.