ADVERTISEMENT

ತಿಂಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಜಾಗ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:52 IST
Last Updated 15 ನವೆಂಬರ್ 2017, 10:52 IST

ಯಾದಗಿರಿ: ‘ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಇಲ್ಲದ 300 ಅಂಗನವಾಡಿ ಕೇಂದ್ರಗಳಿಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಪಿಡಿಒ ಗಳು ಜಾಗ ಗುರುತಿಸಿಕೊಡುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಡಾನ್ ಬಾಸ್ಕೊ ಮಕ್ಕಳ ಸೇವಾ ಕೇಂದ್ರದ ಆಶ್ರಯದಲ್ಲಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಕ್ಕಳ ದಿನಾಚರಣೆ ಹಾಗೂ ಕಲಾಶ್ರೀ ಪ್ರಶಸ್ತಿ ವಿತರಣೆ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ಧವಾಗಿದೆ. ಆದರೂ, ಸರ್ಕಾರದ ಯೋಜನೆಗಳು ಮಕ್ಕಳಿಗೆ ತಲುಪುತ್ತಿಲ್ಲ ಎನ್ನುವ ದೂರು ಇದೆ. ಮಕ್ಕಳ ವಿಕಸನಕ್ಕೆ ಅನುಷ್ಠಾನಗೊಂಡಿರುವ ಯೋಜನೆಗಳನ್ನು ಮಕ್ಕಳಿಗೆ ತಲುಪಿಸುತ್ತಿದ್ದೇವೆಯೇ? ಎಂಬುದಾಗಿ ಸಂಬಂಧಿಸಿದ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅನುದಾನ, ಸೌಲಭ್ಯಗಳನ್ನು ಸರ್ಕಾರ ನೀಡಿದ್ದರೂ, ಅಭಿವೃದ್ಧಿ ಕಾರ್ಯಗಳು ಹಿನ್ನಡೆ ಕಾಣುವಲ್ಲಿ ಅಧಿಕಾರಿಗಳ ಕರ್ತವ್ಯ ಬದ್ಧತೆಯ ಕೊರತೆ ಕೂಡ ಕಾರಣವಾಗುತ್ತಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಸಾಕಷ್ಟು ಇದೆ. ಆದರೂ, ಭೂಮಿ ಕೊರತೆಯಿಂದಾಗಿ ಎಷ್ಟೋ ಸರ್ಕಾರಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಜಿಲ್ಲೆಯ ಮೂರು ತಾಲ್ಲೂಕು ಕೇಂದ್ರಗಳಲ್ಲಿ ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ಕೂಡಲೇ ಆಯಾ ಗ್ರಾಮ ಪಂಚಾಯಿತಿ ಪಿಡಿಒಗಳು ಸ್ಥಳಗಳನ್ನು ಹುಡುಕಿ ಕೊಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ₹8 ಲಕ್ಷ ಅನುದಾನ ಪಡೆಯಲು ಅವಕಾಶ ಇದೆ. ಇದರಿಂದ ಎಲ್ಲ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳನ್ನು ಹೊಂದಿದಂತಾಗುತ್ತದೆ’ ಎಂದು ಹೇಳಿದರು.

‘ಮಕ್ಕಳ ಹಕ್ಕುಗಳ ಉಲ್ಲಂಘಟನೆ, ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಹೀಗೆ ನಾನಾ ಸಮಸ್ಯೆಗಳ ನಿವಾರಣೆ ಮಾಡಬಹುದು. ಅದಕ್ಕಾಗಿ ಕಾನೂನಿನ ಕೊರತೆ ಇಲ್ಲ. ಆದರೆ, ಕಾನೂನುಗಳ ಅನುಷ್ಠಾನದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಮಕ್ಕಳ ಸಮಸ್ಯೆ ಬಗೆಹರಿಸಲು ಕಾನೂನಿಗಿಂತ ನಾವು, ಸಮಾಜ ಒಟ್ಟಾಗಿ ಕೆಲಸ ಮಾಡಿದರೆ ಮಕ್ಕಳ ಹಕ್ಕುಗಳನ್ನು ರಕ್ಷಿಸಬಹುದು’ ಎಂದು ಸಲಹೆ ನೀಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಚಂದ್ರಶೇಖರ ಅಲ್ಲಿಪೂರ ಮಾತನಾಡಿ, ‘ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಮಾಜ ಕೂಡ ಬದ್ಧತೆ ಪ್ರದರ್ಶಿಸಬೇಕಿದೆ’ ಎಂದು ಅವರು ಹೇಳಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತರಾಯ ಕರಡಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಿ.ಜಿ. ಪಾಟೀಲ, ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ ಮಾತನಾಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಕಲಾಶ್ರೀ ಪ್ರಶಸ್ತಿ ವಿತರಿಸಲಾಯಿತು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಗೀತಾ, ಚಂದ್ರಶೇಖರ ಲಿಂಗದಹಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಇದ್ದರು.

* * 

ಸಮಾಜ ಎಲ್ಲಿಯವರೆಗೂ ನೈತಿಕವಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲವೋ ಅಲ್ಲಿಯವರೆಗೂ ಮಕ್ಕಳು ರಕ್ಷಣೆ ಸಾಧ್ಯವಿಲ್ಲ.
ಹಣಮಂತರಾಯ ಕರಡಿ
ಅಧ್ಯಕ್ಷ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.