ADVERTISEMENT

ಸಿದ್ದರಾಮಯ್ಯ ಸೋಲಿಸುವ ಷಡ್ಯಂತ್ರ ನಿಲ್ಲಿಸಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 19:30 IST
Last Updated 21 ಏಪ್ರಿಲ್ 2018, 19:30 IST
ನಿರಂಜನಾನಂದಪುರಿ ಸ್ವಾಮೀಜಿ
ನಿರಂಜನಾನಂದಪುರಿ ಸ್ವಾಮೀಜಿ   

ಶಿಕಾರಿಪುರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಡಾ.ಯತೀಂದ್ರ ಅವರನ್ನು ಸೋಲಿಸಲು ನಡೆಸುತ್ತಿರುವ ಷಡ್ಯಂತ್ರವನ್ನು ಬಿ.ಎಸ್‌.ಯಡಿಯೂರಪ್ಪ ನಿಲ್ಲಿಸದಿದ್ದರೆ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ಕುರುಬ ಸಮುದಾಯ ನೀಡಲಿದೆ’ ಎಂದು ಕಾಗಿನೆಲೆ ಕನಕ ಗುರುಪೀಠದ ಅಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಪಟ್ಟಣದಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಲೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕುರುಬ ಸಮಾಜದ ಪ್ರಶ್ನಾತೀತ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಬಗ್ಗೆ ಯಡಿಯೂರಪ್ಪ ಅವರು ವೇದಿಕೆಗಳಲ್ಲಿ ಪದೇ ಪದೇ ಮಾತನಾಡುತ್ತಿರುವುದನ್ನು ಸಮುದಾಯದವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ಕುರುಬ ಸಮುದಾಯ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಕಾಂಗ್ರೆಸ್‌ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್‌ಗಳಲ್ಲಿಯೂ ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ. ರಾಜ್ಯದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲು ಕುರುಬ ಸಮುದಾಯದ ಮತಗಳು ಕೂಡ ನಿರ್ಣಾಯಕವಾಗಲಿವೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಗಾಗಿ ಪರಸ್ಪರ ಸ್ನೇಹ ಸಂಬಂಧ ಕಳೆದುಕೊಳ್ಳಬಾರದು. ಚುನಾವಣೆಗಳು ಮತ್ತೆ ಮತ್ತೆ ಬರುತ್ತವೆ. ಆದರೆ, ಒಮ್ಮೆ ಸ್ನೇಹ, ಸಂಬಂಧ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ. ಸ್ನೇಹ, ಸಂಬಂಧ ಕಳೆದುಕೊಳ್ಳದೇ ಜಾಗೃತರಾಗಿ ಚುನಾವಣಾ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.