ADVERTISEMENT

ನಾನು ಗಂಡುಬೀರಿ ‘ಗಂಗಾ’

ವನಿತಾ ಜೈನ್
Published 10 ಜನವರಿ 2018, 16:58 IST
Last Updated 10 ಜನವರಿ 2018, 16:58 IST
ಭವಾನಿ ಸುಬ್ರಹ್ಮಣ್ಯ ಮಲೆಲ್ಲಾ
ಭವಾನಿ ಸುಬ್ರಹ್ಮಣ್ಯ ಮಲೆಲ್ಲಾ   

ವಿಧವಾ ಹೆಣ್ಣುಮಗಳ ಬದುಕಿನ ಬವಣೆ ಬಿಂಬಿಸುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ‘ಗಂಗಾ’ದಲ್ಲಿ ಬಾಲಕಿಯ ಮಾತುಗಳು ಮಾಯವಾಗಿ ಆ ಸ್ಥಾನವನ್ನು ಪ್ರೌಢಿಮೆಯ ಮಾತುಗಳು ಆವರಿಸಿವೆ. ಇದಕ್ಕೆ ಕಾರಣ ಪುಟ್ಟ ಗಂಗಾಳನ್ನೇ ಸಂಪೂರ್ಣವಾಗಿ ಹೋಲುವ ‘ದೊಡ್ಡಗಂಗಾ’ಳ ಎಂಟ್ರಿ. ಈಕೆಯ ಹೆಸರು ಭವಾನಿ ಸುಬ್ರಹ್ಮಣ್ಯ ಮಲೆಲ್ಲಾ.

ವೈಯಕ್ತಿಕ ಬದುಕು ಹಾಗೂ ನಟನಾ ಬದುಕು ವಿರುದ್ಧವಾಗಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸುತ್ತಿರುವ ದೊಡ್ಡ ಗಂಗಾಳ ಮಾತೃಭಾಷೆ ತೆಲುಗು. ಆದರೂ, ಧಾರಾವಾಹಿಯಲ್ಲಿ ಹವ್ಯಕ ಕನ್ನಡದಲ್ಲಿ ಮಾತನಾಡಲು ಶುರುವಿಟ್ಟರೆ ಸಾಕು ಎಲ್ಲರೂ ಮೂಗಿನ ಮೇಲೆ ಕೈ ಇಡುವುದು ಖಂಡಿತ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರು. ತಂದೆ ಸುಬ್ರಹ್ಮಣ್ಯ. ತಾಯಿ ಪುಷ್ಪಲತಾ. ತಮ್ಮ ವಿಜಯ್ ಮಲೆಲ್ಲಾ. ಸಾಂಪ್ರದಾಯಿಕ ವಿಭಕ್ತ ಕುಟುಂಬದಲ್ಲಿ ಬೆಳೆದ ಭವಾನಿ ಅವರು ಓದಿದ್ದು ಬಿ.ಕಾಂ. ಪದವಿ.

‘ದೊಡ್ಡಗಂಗಾ’ ಪಾತ್ರಕ್ಕೆ ಎಂಟ್ರಿ ಕೊಟ್ಟಿರುವ ಭವಾನಿ ಅವರು, ‘ಚಂದನವನ’ದೊಂದಿಗೆ ತನ್ನ ಪಾತ್ರದ ಅನುಭವ ಹಂಚಿಕೊಂಡಿದ್ದು ಹೀಗೆ.

ADVERTISEMENT

*ನಿಮ್ಮ ಹವ್ಯಾಸಗಳೇನು?
ಬುಲೆಟ್ ಅಂದರೆ ಪಂಚಪ್ರಾಣ. ಹಾಗಾಗಿ, ಸಮಯ ಸಿಕ್ಕಾಗಲೆಲ್ಲಾ ಬುಲೆಟ್ ರೈಡ್ ಹಾಗೂ ಲಾಗ್ ಡ್ರೈವ್ ಹೋಗಲು ಮರೆಯುವುದಿಲ್ಲ. ಅಲ್ಲದೇ ಸಂಪೂರ್ಣವಾಗಿ ಗಂಡು ಬೀರಿಯಂತೆ ಬೆಳೆದ ನಾನು ನೃತ್ಯ, ಸಂಗೀತದಿಂದ ದೂರ ಉಳಿದೆ. ಆದರೆ, ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ್ದೇನೆ.

*ಇಷ್ಟದ ಉಡುಪು ಯಾವುದು?
ಜೀನ್ಸ್, ಟೀ ಶರ್ಟ್. ಸೀರೆಯನ್ನು ಉಟ್ಟವಳೇ ಅಲ್ಲ. ಆದರೆ, ಇದೀಗ ಪ್ರತಿದಿನ ಬಿಳಿಸೀರೆ!

*ರಂಗಭೂಮಿ ಪಯಣದ ಹಾದಿ ಬಗ್ಗೆ ಹೇಳಿ.
ಎರಡು ವರ್ಷಗಳಿಂದ ವೇದಿಕೆ, ಜ್ಯೋತಿರ್ಲಿಂಗ ತಂಡದ ಮೂಲಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಇದುವರೆಗೆ 3 ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಅದರಲ್ಲಿ ‘ಸತ್ತವನ ಸಂತಾಪ’ ನಾಟಕ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು.

*ನಟನೆಯಲ್ಲಿ ಆಸಕ್ತಿ ಮೂಡಿದ್ದು ಹೇಗೆ?
ನನಗೆ ನಟನೆ ಹೊಸತು. ಹಾಜರಾತಿ ಹಾಗೂ ಪರೀಕ್ಷೆಯ ಪ್ರವೇಶ ಪತ್ರಕ್ಕಾಗಿ ಕಾಲೇಜಿನಲ್ಲಿದ್ದ ಥಿಯೇಟರ್ ಅಸೋಸಿಯೇಷನ್‌ಗೆ ಸೇರಿದೆ. ಅಲ್ಲಿಂದ ನಟನೆ ರೂಢಿಸಿಕೊಂಡೆ. ಒಂದು ಸಲ ಬಣ್ಣ ಹಚ್ಚಿದ ಮೇಲೆ ಸಾಯೋವರೆಗೂ ಬಣ್ಣ ಹಚ್ಚುತ್ತಲೇ ಇರಬೇಕಾಗುತ್ತದೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಚಾನಕ್ಕಾಗಿ ಬರುವ ತಿರುವಿ ನಂತೆ ಈ ಹಾದಿಗೆ ತಿರುಗಿದೆ. ಈಗ ಪಯಣ ಶುರುವಾಗಿದೆ.

*ಇಷ್ಟದ ನಟ, ನಟಿ? ಬೆಳ್ಳಿತೆರೆಗೆ ಜಿಗಿಯುವ ಕನಸು ಇದೆಯಾ?
ನನಗೆ ವರನಟ ರಾಜ್‌ಕುಮಾರ್, ಪ್ರಕಾಶ್ ರೈ ಹಾಗೂ ಕಲ್ಪನಾ ಎಂದರೆ ಬಲು ಇಷ್ಟ. ಇದುವರೆಗೂ ಬೆಳ್ಳಿತೆರೆಯಿಂದ ಹಾಗೂ ಬೇರೆ ಯಾವುದೇ ಧಾರಾವಾಹಿಗಳಿಂದ ಅವಕಾಶಗಳು ಬಂದಿಲ್ಲ. ಬಂದರೆ ಖಂಡಿತವಾಗಿಯೂ ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ

*ನಿಮ್ಮ ನಟನೆಗೆ ಮನೆಯವರ, ಸ್ನೇಹಿತರ ಬೆಂಬಲ ಹೇಗಿದೆ?
ಧಾರಾವಾಹಿಗೆ ಆಯ್ಕೆಯಾದ ವಿಚಾರವನ್ನು ಮನೆಯಲ್ಲಿ ತಿಳಿಸಿದಾಗ ಮೊದಲು ಸಂಬಂಧಿಕರಿಂದ ಆಕ್ಷೇಪ ವ್ಯಕ್ತವಾಯಿತು. ಇದುವರೆಗೂ ಕೆಲವು ಸಂಬಂಧಿಕರಿಂದ ಆಕ್ಷೇಪದ ಮಾತುಗಳಿವೆ. ಆದರೆ ನನ್ನ ತಂದೆ, ತಾಯಿ , ತಮ್ಮ ನನಗೆ ಆರ್ಥಿಕವಾಗಿ, ಮಾನಸಿಕವಾಗಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇನ್ನು ಸ್ನೇಹಿತರ ಮಾತುಗಳೇ ನನಗೆ ಬೆಂಬಲ. ಪ್ರೀತಿಯಿಂದ ‘ಬೋಟಿ’ ಎಂದು ಕರೆಯುವ ಸ್ನೇಹಿತರು ಪ್ರತಿಯೊಂದು ಹೆಜ್ಜೆಯಲ್ಲೂ ಸಾಥ್ ನೀಡುತ್ತಿದ್ದಾರೆ.

*‘ಗಂಗಾ’ ಧಾರಾವಾಹಿಯಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ.
ಗಂಗಾ ತುಂಬಾ ಧೈರ್ಯದ ಹುಡುಗಿ. ಈಕೆಗೆ ಬಾಲ್ಯದ ಎಲ್ಲ ಆಸೆ, ಕನಸುಗಳು ಮರೀಚಿಕೆ. ತಿಳಿಯದ ವಯಸ್ಸಿನಲ್ಲಿ ಮದುವೆ. ಮದುವೆಯೆಂದರೇನು ತಿಳಿಯುವಷ್ಟರಲ್ಲೇ ಗಂಡನ ಸಾವು– ಹೀಗೆ ಸಂಪೂರ್ಣವಾಗಿ ನೋವುಗಳಲ್ಲೇ ಬಾಳುವ ಬಾಲ್ಯ ವಿಧವೆಯ ಕಥೆಯೇ ಗಂಗಾ.

ಇದು ನನ್ನ ವ್ಯಕ್ತಿತ್ವಕ್ಕೆ ಸಂಪೂರ್ಣ ತದ್ವಿರುದ್ಧ ಪಾತ್ರ. ಇಷ್ಟ ಪಟ್ಟಿದ್ದನ್ನು ಕ್ಷಣಾರ್ಧದಲ್ಲಿ ದಕ್ಕಿಸಿಕೊಳ್ಳುವುದು ನನ್ನ ಗುಣ, ತುಂಬಾ ಹಠವಾದಿ. ಅಪ್ಪ, ಅಮ್ಮನ ಪ್ರೀತಿಯ ಮಗಳಾದ ನಾನು ಯಾವುದೇ ಕೊರತೆ ಇಲ್ಲದೇ ಬೆಳೆದವಳು. ಇಲ್ಲೇ ನನಗೆ ಕಷ್ಟವಾಗಿದ್ದು. ಯಾಕೆಂದರೆ ಇಲ್ಲಿನ ಗಂಗಾ ಇವೆಲ್ಲದರಿಂದ ವಂಚಿತಳಾದವಳು. ನನ್ನದು ಅಂತಾ ಏನು ಇಲ್ಲ ಎಂದು ತಿಳಿದುಕೊಂಡು ಪಾತ್ರಕ್ಕೆ  ಪ್ರವೇಶ ಮಾಡುವುದು ಮೊದಲು ಕಷ್ಟವಾದರೂ ಇದೀಗ ಸರಾಗವಾಗಿದೆ.

*ನಿಮ್ಮ ಪಾತ್ರಕ್ಕೆ ವೀಕ್ಷಕರಿಂದ ಪ್ರತಿಕ್ರಿಯೆ ಹೇಗಿದೆ?
ನನ್ನನ್ನು ಗಂಗಾ ಎಂದು ಜನರು ಒಪ್ಪಿಕೊಳ್ಳುತ್ತಾರೆ. ಅವರ ಪ್ರೀತಿ ನನಗೆ ಸಿಗುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಪುಟ್ಟ ಇಟಗಿಯಲ್ಲಿ ಬಣ್ಣಹಚ್ಚುವ ಈ ದೊಡ್ಡ ಗಂಗಾಳ ಪಾತ್ರ, ಜನರ ಅಕ್ಕರೆಯ ಮಾತು ನನ್ನಲ್ಲಿ ವಿಶ್ವಾಸ ಮೂಡಿಸಿದೆ. ಜನರು ಪ್ರೀತಿಯಿಂದ ದೊಡ್ಡ ಗಂಗಾ ಎಂದೇ ಕರೆಯುತ್ತಾರೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಪಾತ್ರವನ್ನು ಬಹಳ ಖುಷಿಯಿಂದ, ಸಮರ್ಥವಾಗಿ ನಿರ್ವಹಿಸುವ ಸ್ಥೈರ್ಯ ಬೆಳೆಸಿದೆ.

*ಮಾತೃಭಾಷೆ ತೆಲುಗು, ಆದರೆ, ಧಾರಾವಾಹಿಯಲ್ಲಿ ಹವ್ಯಕ ಕನ್ನಡ. ಇದಕ್ಕೆ ಪೂರ್ವ ತಯಾರಿ ಹೇಗೆ?
ಖಂಡಿತ ಇಲ್ಲ. ಆಡಿಷನ್‌ನಿಂದ ಹಿಡಿದು ಪ್ರತಿಯೊಂದು ಪ್ರಕ್ರಿಯೆಗಳು ವೇಗವಾಗಿ ನಡೆದುದರಿಂದ ಯಾವುದೇ ಪೂರ್ವತಯಾರಿಗೆ ಸಮಯವೇ ಸಿಗಲಿಲ್ಲ. ಭಾಷೆ ಕಲಿಯೋದು ದೊಡ್ಡ ಸವಾಲಾಯ್ತು. ಗಂಗಾ ಧಾರಾವಾಹಿಯ ಸಂಚಿಕೆಗಳನ್ನು ನೋಡುತ್ತಿದ್ದೆ. ತಂದೆಯ ಸ್ನೇಹಿತರು ಹವ್ಯಕರಿದ್ದರು. ಅವರಿಂದ ಸ್ವಲ್ಪಮಟ್ಟಿಗೆ ಕಲಿತೆ. ಅಲ್ಲದೇ ಪುಟ್ಟ ಗಂಗಾಳ ಮಾತುಗಳನ್ನು ವೀಕ್ಷಿಸಿದೆ. ಇದರ ಜತೆಗೆ ಒಂದೆರಡು ದಿನ ಧಾರಾವಾಹಿ ತಂಡದವರೇ ತರಬೇತಿ ನೀಡಿದ್ದರು.

*ದೊಡ್ಡ ಗಂಗಾ ಆಗದೇ ಇದ್ದಿದ್ದರೆ ಏನಾಗಿರುತ್ತಿದ್ದೀರಿ?
ಪ್ರತಿದಿನವೂ ಮ್ಯಾಜಿಕ್ ಬಾಕ್ಸ್ ಎಂದು ತಿಳಿದು ಬದುಕುವ ನಾನು ನಟನೆಗೆ ಬರುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಒಂದು ವೇಳೆ ದೊಡ್ಡ ಗಂಗಾ ಆಗಿಲ್ಲದಿದ್ದರೆ ಪ್ರೈವೇಟ್ ಕಂಪನಿಯಲ್ಲಿ ಅಕೌಂಟೆನ್ಸಿ ವಿಷಯದ ಮೇಲೆ ಕಾರ್ಯನಿರ್ವಹಿಸುತ್ತಿದ್ದೆ. ದೊಡ್ಡ ಕಾರ್ಪೋರೇಟ್ ಕಂಪನಿಯಲ್ಲಿ ಅಕೌಂಟೆಟ್ ಆಗಿ ಕಾರ್ಯ ನಿರ್ವಹಿಸಬೇಕೆಂಬುದು ನನ್ನ ಮಹಾದಾಸೆಯಾಗಿತ್ತು. ನಟನೆಯಲ್ಲಿ ಅವಕಾಶ ಸಿಕ್ಕರೆ ಮುಂದುವರೆಯುವೆ ಇಲ್ಲವಾದಲ್ಲಿ ನನ್ನ ಮೊದಲ ಕನಸಿನ ಬೆನ್ನತ್ತಿ ಅದನ್ನು ಸಾಕಾರಗೊಳಿಸಿಕೊಳ್ಳುವೆ.

*ಬಾಲ್ಯವಿವಾಹ ತಡೆ ಬಗ್ಗೆ ಏನು ಹೇಳುವಿರಿ?
ನನ್ನ ಕುಟುಂಬದಲ್ಲಿಯೂ ಸಾಕಷ್ಟು ಬಾಲ್ಯವಿವಾಹಗಳನ್ನು ಕಂಡಿದ್ದೇನೆ(16 ಅಥವಾ 17 ವರ್ಷ). ಜನರು ಮೊದಲು ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಜತೆಗೆ ಚಿಕ್ಕವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಕೊರಗುವ ಬದಲು ಮತ್ತೊಂದು ವಿವಾಹವಾಗುವುದರಲ್ಲಿ ತಪ್ಪಿಲ್ಲ. ಯಾರೇ ವಿರೋಧಿಸಿದರೂ ನಿಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಸುಖ ಜೀವನ ನಡೆಸಿ.

*ನಿಮ್ಮ ಫಿಟ್‌ನೆಸ್ ಗುಟ್ಟು ಏನು?
ನಾನು ಫಿಟ್‌ನೆಸ್‌ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವಾರದಲ್ಲಿ ಎರಡರಿಂದ ಮೂರು ಸಲ ಬಿರಿಯಾನಿ ಬೇಕೆ ಬೇಕು. ಸಮಯ ಸಿಕ್ಕಾಗ ಯೋಗ ಮಾಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.