ADVERTISEMENT

‘ಪುಷ್ಪಕ ವಿಮಾನ’ ಎಂಬ ಮುಗ್ಧತೆಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 19:30 IST
Last Updated 5 ಜನವರಿ 2017, 19:30 IST
ರವೀಂದ್ರನಾಥ್‌
ರವೀಂದ್ರನಾಥ್‌   

‘ಸಚಿನ್‌ ತೆಂಡೂಲ್ಕರ್‌ ಸೆಂಚುರಿ ಹೊಡೆದ ಮೇಲೆ ಬ್ಯಾಟನ್ನು ಆಕಾಶಕ್ಕೆ ಎತ್ತಿ ತೋರಿಸುತ್ತಾನಲ್ಲ; ಹಾಗೆ ನಾನೂ ಕಳೆದ ಎರಡು ವರ್ಷಗಳಿಂದ ನನ್ನ ಇಷ್ಟು ವರ್ಷದ ಸಿನಿಮಾಪಯಣವನ್ನು ನೆನಸಿಕೊಂಡಾಗಲೆಲ್ಲ ಮನಸ್ಸಿನಲ್ಲಿಯೇ ಪ್ರೇಕ್ಷಕನಿಗೆ ಕೈಯೆತ್ತಿ ಮುಗಿಯುತ್ತೇನೆ.

ನೂರು ಸಿನಿಮಾ... ಸಂತೋಷ, ಬೆರಗು, ಅನುಮಾನ ಎಲ್ಲ ಭಾವಗಳೂ ಮನಸಲ್ಲಿ ನುಗ್ಗುತ್ತವೆ. ಆದರೆ ಎಲ್ಲಕ್ಕಿಂತ ಕೊನೆಯಲ್ಲಿ ಆವರಿಸಿಕೊಂಡು ನಿಲ್ಲುವ ಭಾವ ಕೃತಜ್ಞತೆ. ಆ ಭಾವವೇ ಮನಸ್ಸು ತುಂಬಿನಿಲ್ಲುತ್ತದೆ..’

ಮಾತನಾಡುತ್ತ ರಮೇಶ್‌ ಅರವಿಂದ್‌ ಕೆಳದುಟಿ ಕಚ್ಚಿಕೊಂಡು ಕ್ಷಣ ಮೌನವಾದರು. ಮನಸ್ಸಿನಲ್ಲಿನ ಭಾವುಕತೆಯ ಕುರುಹಾಗಿ ಅವರ ಕಣ್ಣುಗಳೂ ತುಂಬಿಕೊಂಡಿದ್ದವು. ಅವರ ತೊಡೆಯ ಮೇಲೆ ಕುಳಿತಿದ್ದ ಪುಟಾಣಿ ಯೂವಿನಾ ರಮೇಶ್‌ ಅಂಕಲ್‌ ಮುಖವನ್ನೇ ತಲೆಯೆತ್ತಿ ನೋಡುತ್ತಿದ್ದಳು.

ಅದು ರಮೇಶ್‌ ಅವರ ನೂರನೇ ಸಿನಿಮಾ ‘ಪುಷ್ಪಕ ವಿಮಾನ’ದ ಪತ್ರಿಕಾಗೋಷ್ಠಿ. ಕಾರ್ಯಕ್ರಮದ ನಿರೂಪಣೆಯ ಜಬಾಬ್ದಾರಿಯನ್ನು ಹೊತ್ತಿದ್ದು ‘ಪುಷ್ಪಕ ವಿಮಾನ’ದಲ್ಲಿ ರಮೇಶ್‌ ಮಗಳ ಪಾತ್ರದಲ್ಲಿ ನಟಿಸಿರುವ ಯೂವಿನಾ. ತನ್ನ ಮುದ್ದು ಮುಖ, ಚುರುಕು ಮಾತಿನಿಂದ ಇಡೀ ಕಾರ್ಯಕ್ರಮದ ಕೇಂದ್ರಬಿಂದು ಅವಳೇ ಆಗಿದ್ದಳು. ‘ರಮೇಶ್‌ ಅಂಕಲ್‌ ಜತೆ ನಟಿಸುವುದು ಚಾಲೆಂಜಿಂಗ್‌ ಆಗಿತ್ತು. ಭುವನ್‌ ಅಂಕಲ್‌ ಚಾಕೊಲೆಟ್‌ ತಂದುಕೊಡುತ್ತಿದ್ದರು’ ಎಂದೆಲ್ಲ ಅವಳು ಮುದ್ದು ಮುದ್ದಾಗಿ ಹೇಳುತ್ತಿದ್ದರೆ ಎಲ್ಲರ ಮುಖದಲ್ಲಿಯೂ ಮಂದಹಾಸ.

‘ಇದು ತುಂಬ ವಿಶೇಷವಾದ ಸಿನಿಮಾ. ರಮೇಶ್‌ ಅವರ ಅಭಿಮಾನಿಗಳಿಗಂತೂ ಇದು ಅದ್ಭುತ ಕೊಡುಗೆ’ ಎಂದು ವರ್ಣಿಸಿದರು ರಚಿತಾ ರಾಮ್‌.
ಇದು ರೀಮೆಕ್‌ ಚಿತ್ರವೇ ಎಂಬ ಅನುಮಾನಕ್ಕೆ ನಿರ್ದೇಶಕ ರವೀಂದ್ರನಾಥ್‌ ಸ್ಪಷ್ಟತೆಯ ತೆರೆ ಎಳೆದರು.

‘ಇದು ಯಾವ ಸಿನಿಮಾದ ರೀಮೇಕ್‌ ಅಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾದ ‘ಮಿರಾಕಲ್‌ ಇನ್‌ ಸೆಲ್‌ ನಂ. 7’, ‘ಲೈಫ್‌ ಈಸ್‌ ಬ್ಯೂಟಿಫುಲ್‌’, ‘ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌’ ಸಿನಿಮಾಗಳಿಂದ ಸ್ಫೂರ್ತಿಗೊಂಡಿರುವುದು ನಿಜ’ ಎಂದು ಒಪ್ಪಿಕೊಂಡರು. ‘ಮಿರಾಕಲ್‌ ಇನ್‌ ಸೆಲ್‌ ನಂ. 7’ ಕಥೆಯ ಹಕ್ಕನ್ನೂ ಅವರು ಖರೀದಿಸಿದ್ದಾರಂತೆ. ಆ ಸಿನಿಮಾದ ಕೆಲವು ಅಂಶಗಳಿಂದ ಸ್ಫೂರ್ತಿಗೊಂಡರೂ ‘ಪುಷ್ಟಕ ವಿಮಾನ’ ಸ್ವಂತಿಕೆಯಿಂದಲೇ ರೂಪುಗೊಂಡು ಸಿನಿಮಾ ಎನ್ನುವುದು ಅವರ ಪ್ರತಿಪಾದನೆ.

ಮೈಕ್‌ ಕೈಗೆತ್ತಿಕೊಂಡ ರಮೇಶ್, ತಮ್ಮ ಕುಟುಂಬದವರೊಂದಿಗೆ ಸರತಿಯಲ್ಲಿ ನಿಂತು ಟಿಕೆಟ್‌ ತೆಗೆದುಕೊಂಡು ಸಿನಿಮಾ ನೋಡುತ್ತಿದ್ದ ಬಾಲ್ಯದ ದಿನಗಳಿಗೆ ಜಾರಿದರು. ‘ನನಗೂ ಚಿತ್ರರಂಗಕ್ಕೂ ಇದ್ದ ಒಂದೇ ಸಂಬಂಧ ಎಂದರೆ ಅದು ಚಿತ್ರಮಂದಿರ ಮತ್ತು ಪ್ರೇಕ್ಷಕನ ನಡುವಣ ಸಂಬಂಧ. ಎಂಜಿನಿಯರಿಂಗ್‌ ಮಾಡುವಾಗಲೂ ಸಿನ್ಸಿಯರ್‌ ವಿದ್ಯಾರ್ಥಿಯಾಗಿದ್ದೆ. ಸಿನಿಮಾದಲ್ಲಿ ನಟಿಸುತ್ತೇನೆ ಅಂತ ಅಂದುಕೊಂಡವನೂ ಅಲ್ಲ. ಇದೆಲ್ಲವೂ ಸಾಧ್ಯವಾಗಿದ್ದು ಪ್ರೇಕ್ಷಕನಿಂದ. ಅವನಿಗೆ ನಾನು ಕೃತಜ್ಞನಾಗಿರಬೇಕು’ ಎಂದರು.

ಪುಷ್ಪಕ ವಿಮಾನ ಸಿನಿಮಾವನ್ನು ಅವರು ‘ಮುಗ್ಧತೆಯ  ಮೆರವಣಿಗೆ’ ಎಂದು ಬಣ್ಣಿಸಿದರು. ಈ ಸಿನಿಮಾದ ಅನಂತರಾಮಯ್ಯ ಸ್ವಲ್ಪವೂ ಕಪಟವಿಲ್ಲದ ಪರಿಶುದ್ಧ ಮನಸ್ಸಿನ ವ್ಯಕ್ತಿ. ಅವನನ್ನು ನೋಡಿದರೆ ಜಗತ್ತಿನ ಎಲ್ಲರೂ ಹೀಗೆಯೇ ಇರಬೇಕಿತ್ತಲ್ಲ ಎನಿಸುವಂಥ ಪಾತ್ರ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸಿದರು. ಇದೇ ವಾರ ಬಿಡುಗಡೆಯಾಗುತ್ತಿರುವ ‘ಪುಷ್ಪಕ ವಿಮಾನ’ಕ್ಕೆ ಚರಣ್‌ ರಾಜ್‌ ಸಂಗೀತ, ಭುವನ್‌ ಛಾಯಾಗ್ರಹಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.