ADVERTISEMENT

ಬೆಳಕಿನೆಡೆಗೆ ‘ಅಕಿರ’

ಪ್ರಜಾವಾಣಿ ವಿಶೇಷ
Published 5 ಮೇ 2016, 19:30 IST
Last Updated 5 ಮೇ 2016, 19:30 IST
ಬೆಳಕಿನೆಡೆಗೆ ‘ಅಕಿರ’
ಬೆಳಕಿನೆಡೆಗೆ ‘ಅಕಿರ’   

ಶೀರ್ಷಿಕೆಯ ಕಾರಣದಿಂದಾಗಿ ಚಿತ್ರರಸಿಕರಲ್ಲಿ ಕುತೂಹಲ ಕೆರಳಿಸಿರುವ ಸಿನಿಮಾ ‘ಅಕಿರ’. ‘ಇದು ನನ್ನ ಮೊದಲ ಸಿನಿಮಾ ಆಗಿದ್ದರೆ ಈ ವೇಳೆಗೆ ಸೆಟಲ್ ಆಗಿಬಿಡುತ್ತಿದ್ದೆ’ ಎನ್ನುವ ನಾಯಕ ಅನಿಶ್ ತೇಜೇಶ್ವರ್ ‘ಚಂದನವನ’ಕ್ಕೆ ನೀಡಿರುವ ಸಂದರ್ಶನ ಇಲ್ಲಿದೆ.

* ನಿಮ್ಮ ಅಭಿನಯವನ್ನು ಹಲವು ನಿರ್ದೇಶಕ, ನಟರು ಹೊಗಳಿದ್ದಾರೆ. ಹಾಗಿದ್ದರೂ ಗಟ್ಟಿಯಾಗಿ ಇನ್ನೂ ನೆಲೆ ನಿಲ್ಲುತ್ತಿಲ್ಲ, ಯಾಕೆ?
ಸಿನಿಮಾ ಚೆನ್ನಾಗಿದ್ದರೂ ಹಲವಾರು ಕಾರಣಗಳಿಂದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸೋಲುತ್ತವೆ. ನನ್ನ ಮಟ್ಟಿಗೆ ಆಗಿದ್ದೂ ಇದೇ. ನಿರ್ಮಾಪಕರು ಕಷ್ಟಪಟ್ಟು ಮಾಡುವ ಸಿನಿಮಾಗಳು ಪ್ರಚಾರದ ಕೊರತೆಯಿಂದಾಗಿ ನಿರೀಕ್ಷಿತ ಗುರಿ ತಲುಪುವುದಿಲ್ಲ.

ಇದಕ್ಕಾಗಿ ನಾನು ಖಂಡಿತವಾಗಿಯೂ ನಿರ್ಮಾಪಕರನ್ನು ಹೊಣೆ ಮಾಡಲಾರೆ. ನಿರ್ಮಾಪಕರಿಗೆ ತಂದೆ–ತಾಯಿಯಷ್ಟೇ ಗೌರವ ಕೊಡುವವನು ನಾನು. ಈಗಿನ ಕಾಲದಲ್ಲಿ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂದರೆ, ಅದು  ತೆರೆ ಕಾಣುವ ಹೊತ್ತಿಗೆ ನಿರ್ಮಾಪಕರು ದಣಿದುಬಿಟ್ಟಿರುತ್ತಾರೆ. ಹೀಗಾಗಿ ಎಲ್ಲೋ ಏನೋ ಕೊಂಡಿ ಕಳಚಿದಂತಾಗಿ, ಸಿನಿಮಾ ಜನರನ್ನು ತಲುಪದಂತಾಗುತ್ತದೆ.

* ‘ಅಕಿರ’– ಏನಿದು? ಶೀರ್ಷಿಕೆಯೇ ಒಂಥರ ವಿಚಿತ್ರವಾಗಿದೆಯಲ್ಲ?
ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನು ಕರೆತರಲು ಈ ಬಗೆಯ ಕುತೂಹಲವೇ ಕಾರಣವಾಗುತ್ತದೆ ಎಂಬ ನಿರೀಕ್ಷೆ ನಮ್ಮದು. ಮೊದಲಿಗೆ ಬೇರೆ ಶೀರ್ಷಿಕೆಗಳನ್ನು ಪರಿಶೀಲಿಸಿದ್ದೆವು. ಅವು ಬರೀ ಶೀರ್ಷಿಕೆ ಆಗಿಬಿಡುತ್ತಿದ್ದವು. ಆದರೆ ‘ಅಕಿರ’ ಅಂತ ಹೆಸರಿದ್ದರೆ ಅದೇನು ಎಂಬ ಕುತೂಹಲ ಮೂಡುತ್ತದೆ.

ಆ ಪ್ರಶ್ನೆಯೇ ಮುಖ್ಯ ಹೊರತೂ ಸ್ಟಾರ್‌ ವ್ಯಾಲ್ಯೂ ಅಲ್ಲ. ಹೀಗಾಗಿ ಅಂತಿಮವಾಗಿ ‘ಅಕಿರ’ ಎಂಬುದನ್ನೇ ನೆಚ್ಚಿಕೊಂಡೆವು. ‘ಅಕಿರ’ ಅಂದರೆ ಜಪಾನ್ ಭಾಷೆಯಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಎಂಬರ್ಥವಿದೆ. ನಾಯಕನನ್ನು ಆತನ ತಾಯಿ ‘ಅಕಿರ’ ಎಂದು ಕರೆಯುತ್ತಿರುತ್ತಾಳೆ. ಅದು ಯಾಕೆ ಎಂಬುದು ಸಿನಿಮಾದ ಕೊನೆಗೆ ಗೊತ್ತಾಗುತ್ತದೆ.

* ಈ ಚಿತ್ರದ ಕುರಿತು ನಿಮ್ಮಲ್ಲಿ ಯಾವ ಬಗೆಯ ನಿರೀಕ್ಷೆ ಇದೆ?
ನನ್ನ ಹಿಂದಿನ ಸಿನಿಮಾಗಳು ನಿರೀಕ್ಷೆ ಮೂಡಿಸಿದ್ದವು. ಆದರೆ ‘ಅಕಿರ’ದ ನಿರೀಕ್ಷೆ ವಿಭಿನ್ನವಾಗಿದೆ. ಎಲ್ಲಿ ಹೋದರೂ ಜನರು ಆ ಚಿತ್ರದ ಬಗ್ಗೆಯೇ ಕೇಳುತ್ತಿದ್ದಾರೆ. ಈ ಸಿನಿಮಾ ನಿಮಗೆ ಬ್ರೇಕ್ ಕೊಡುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಿದ್ದಾರೆ. ಎಲ್ಲೆಡೆ ಬರೀ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿವೆ. ಪ್ರೇಕ್ಷಕರಿಂದ ಅಷ್ಟೇ ಅಲ್ಲ; ಚಿತ್ರರಂಗದ ಸಾಕಷ್ಟು ಮಂದಿ ಈ ಮಾತನ್ನು ನನಗೆ ಹೇಳಿದ್ದಾರೆ. ಈ ಸಿನಿಮಾ ಹುಟ್ಟಿಸಿರುವ ಕ್ರೇಜ್‌ ಗಮನಿಸಿದರೆ, ಇದು ನನ್ನ ಮೊದಲ ಸಿನಿಮಾ ಆಗಿದ್ದರೆ ಇಷ್ಟು ಹೊತ್ತಿಗೆ ಸೆಟಲ್ ಆಗಿಬಿಡುತ್ತಿದ್ದೆ ಅನಿಸುತ್ತದೆ.

* ಪ್ರೇಕ್ಷಕರಿಗೆ ‘ಅಕಿರ’ದಲ್ಲಿ ಏನೇನು ಸಿಗಬಲ್ಲದು?
ಒಂದು ಚೆಂದನೆಯ ಲವ್‌ಸ್ಟೋರಿಯನ್ನು ಹೆಣೆದುಕೊಟ್ಟಿದ್ದೇವೆ. ಸಿನಿಮಾದ ಮೇಕಿಂಗ್ ಗಮನ ಸೆಳೆಯುತ್ತದೆ. ಒಂದು ಫೈಟ್ ಇದೆ; ಅದನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ. ಸಿನಿಮಾದ ಆರು ಹಾಡುಗಳು ಮಧುರವಾಗಿವೆ. ಜನರನ್ನು ಸೆಳೆಯಲು ಅದೂ ಒಂದು ಕಾರಣ. ಇನ್ನು ನಾರ್ವೆಯಲ್ಲಿ ಚಿತ್ರೀಕರಣ ಮಾಡಿದ್ದೊಂದು ಮರೆಯಲಾರದ ಅನುಭವ.

* ವಿದೇಶಗಳಲ್ಲಿ ಚಿತ್ರೀಕರಣ ಈಗೆಲ್ಲ ಸುಲಭ. ಅದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಇಲ್ಲಿ ಕೂಡ ಅದನ್ನು...
ಪ್ರೀತಿ ಮೂಡುವ ದೃಶ್ಯಗಳನ್ನು ಎಲ್ಲಿ ಬೇಕಾದರೂ ಚಿತ್ರಿಸಬಹುದು. ಆದರೆ ‘ಅಕಿರ’ದಲ್ಲಿ ನಾಯಕ– ನಾಯಕಿಯರ ಮಧ್ಯೆ ಪ್ರೀತಿ ಮೂಡುವುದು ವಿಶಿಷ್ಟ ಪರಿಸರದಲ್ಲಿ. ಹೀಗಾಗಿ ನಿರ್ಮಾಪಕರು ನಾರ್ವೆಯನ್ನು ಆಯ್ದುಕೊಂಡರು. ನಾವು ಚಿತ್ರೀಕರಣ ನಡೆಸುತ್ತಿರುವಾಗ ಅಲ್ಲಿ ತಾಪಮಾನ ಮೈನಸ್ 5 ಡಿ.ಸೆ. ಇತ್ತು! ಅದರ ರುಚಿಯನ್ನು ಜೀವನದಲ್ಲಿ ಸವಿದಿರಲಿಲ್ಲ.

ಸಿನಿಮಾದ ಆರಂಭ ಹಾಗೂ ಮುಕ್ತಾಯದ ಸನ್ನಿವೇಶಗಳೊಂದಿಗೆ ಎರಡು ಹಾಡುಗಳನ್ನು ಅಲ್ಲಿ ಚಿತ್ರೀಕರಿಸಲಾಗಿದೆ. ಮೊದಲ ಸಲ ಅಲ್ಲಿ ಕನ್ನಡ ಸಿನಿಮಾ ಶೂಟಿಂಗ್‌ ನಡೆದಿದೆ ಎಂಬುದು ‘ಅಕಿರ’ದ ಹೆಮ್ಮೆ. ಅದನ್ನು ಹೊರತುಪಡಿಸಿದರೆ ಮತ್ತೇನೂ ಗಿಮಿಕ್ ಇಲ್ಲ.

* ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಸದ್ದು ಮಾಡುತ್ತಿದೆ. ಅದು ಸಿನಿಮಾಕ್ಕೆ ನೆರವಾದೀತೆ?
ನಮ್ಮದು ಸ್ಟಾರ್‌ಗಳು ಇರುವ ಸಿನಿಮಾ ಅಲ್ಲವಲ್ಲ? ಆದರೆ ಪ್ರಚಾರ ಮಾತ್ರ ಚೆನ್ನಾಗಿ ಇರುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ನಿರ್ಮಾಪಕರು ಹಾಗೂ ನಾನು ಮೊದಲೇ ಚರ್ಚೆ ಮಾಡಿದ್ದೆವು. ಈಗ ಜನರು ಸಿನಿಮಾದ ಬಗ್ಗೆ ಮಾತಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಅದು ನಮ್ಮ ಸಿನಿಮಾ ಮೂಡಿಸಿರುವ ಕುತೂಹಲಕ್ಕೆ ಸಾಕ್ಷಿ.

* ಮುಂದಿನ ಸಿನಿಮಾ ಯಾವುದು?
ಒಂದೂವರೆ ವರ್ಷದ ಹಿಂದೆ ‘ಅಕಿರ’ ಆರಂಭವಾಯಿತು. ಅದು ಶುರುವಾದ ಕೆಲವು ದಿನಗಳ ಬಳಿಕ ಒಂದಷ್ಟು ಆಫರ್‌ಗಳು ಬಂದವು. ಆದರೆ ನಾನು ಇದನ್ನು ಬಿಟ್ಟು ಎಲ್ಲೂ ಹೋಗಬಾರದು ಎಂದು ತೀರ್ಮಾನಿಸಿದ್ದೆ. ಈಗ ಅಕಿರ ಬಿಡುಗಡೆಯಾದ ನಾಲ್ಕು ದಿನಗಳೊಳಗೆ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಗಮನಿಸಿ, ತಕ್ಷಣವೇ ಹೊಸ ಸಿನಿಮಾ ಪ್ರಕಟಿಸಲಿದ್ದೇನೆ. ಅದೂ ‘ಅಕಿರ’ ನಿರ್ಮಾಪಕರ ಜತೆಗೇ. ಅವರೂ ಅದೇ ಉತ್ಸಾಹದಲ್ಲಿದ್ದಾರೆ ಅನ್ನುವುದು ನನಗೆ ಡಬಲ್ ಖುಷಿ ಕೊಟ್ಟಿದೆ.

ಮೊದಲಿಗೆ ಬೇರೆ ಶೀರ್ಷಿಕೆಗಳನ್ನು ಪರಿಶೀಲಿಸಿದ್ದೆವು. ಅವು ಬರೀ ಶೀರ್ಷಿಕೆ ಆಗಿಬಿಡುತ್ತಿದ್ದವು. ಆದರೆ ‘ಅಕಿರ’ ಅಂತ ಹೆಸರಿದ್ದರೆ ಅದೇನು ಎಂಬ ಕುತೂಹಲ ಮೂಡುತ್ತದೆ. ಆ ಪ್ರಶ್ನೆಯೇ ಮುಖ್ಯ ಹೊರತೂ ಸ್ಟಾರ್‌ ವ್ಯಾಲ್ಯೂ ಅಲ್ಲ. ಹೀಗಾಗಿ ಅಂತಿಮವಾಗಿ ‘ಅಕಿರ’ ಎಂಬುದನ್ನೇ ನೆಚ್ಚಿಕೊಂಡೆವು. ‘ಅಕಿರ’ ಅಂದರೆ ಜಪಾನ್ ಭಾಷೆಯಲ್ಲಿ ಕತ್ತಲೆಯಿಂದ ಬೆಳಕಿನೆಡೆಗೆ ಎಂಬರ್ಥವಿದೆ. ನಾಯಕನನ್ನು ಆತನ ತಾಯಿ ‘ಅಕಿರ’ ಎಂದು ಕರೆಯುತ್ತಿರುತ್ತಾಳೆ. ಅದು ಯಾಕೆ ಎಂಬುದು ಸಿನಿಮಾದ ಕೊನೆಗೆ ಗೊತ್ತಾಗುತ್ತದೆ.

ADVERTISEMENT

‘ಅಕಿರ’ ನಾಡಸಂಚಾರ!
ಸಿನಿಮಾ ಸೆಟ್ಟೇರಿದಾಗಿನಿಂದಲೂ ಆಗಾಗ ಮಾಧ್ಯಮದ ಮುಂದೆ ಬಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಲೇ ಬಂದಿರುವ ‘ಅಕಿರ’ ಚಿತ್ರತಂಡ ಸಿನಿಮಾ ಬಿಡುಗಡೆಗೂ ಮುನ್ನ ಇಡೀ ರಾಜ್ಯವನ್ನು ಸುತ್ತಾಡಿ ಬಂದಿದೆ. ಅಂದಾಜು ಎಂಬತ್ತು ಚಿತ್ರಮಂದಿರಗಳಲ್ಲಿ ‘ಅಕಿರ’ ಇಂದು ತೆರೆಕಾಣುತ್ತಿದೆ.

‘ಸಿನಿಮಾ ಬಿಡುಗಡೆಗೆ ಇನ್ನೂ ಹದಿನೈದು ದಿನಗಳು ಬಾಕಿ ಇರುವಾಗಲೇ ಅನೇಕ ಚಿತ್ರಮಂದಿರಗಳು ‘ಅಕಿರ’ಕ್ಕೆ ಅವಕಾಶ ನೀಡಿದೆ. ಎರಡು ತಿಂಗಳಲ್ಲಿ ಪ್ರಚಾರಕ್ಕೆಂದು ಹತ್ತು ಸಾವಿರ ಕಿಲೊಮೀಟರ್ ಸುತ್ತಿದ್ದೇವೆ. ಇದರ ಪರಿಣಾಮವೆಂಬಂತೆ ಇಂದು ಎಲ್ಲಾ ಕಾಲೇಜುಗಳಲ್ಲೂ ‘ಅಕಿರ’ ಬಗ್ಗೆ ಮಾತುಗಳಿವೆ’ ಎನ್ನುತ್ತಾರೆ ನಿರ್ಮಾಪಕ ಚೇತನ್. ‘ಸಿನಿಮಾ ಚೆನ್ನಾಗಿ ಬಂದಿದೆ ಎಂಬುದಷ್ಟೇ ನನಗಿರುವ ಧೈರ್ಯ’ ಎನ್ನುವ ವಿಶ್ವಾಸ ನಿರ್ದೇಶಕ ನವೀನ್ ರೆಡ್ಡಿ ಅವರದು.

ನಾಯಕಿ ಕೃಷಿ ತಾಪಂಡ ಅವರಲ್ಲಿ ಭಯದ ಜೊತೆಗೆ ಖುಷಿಯೂ ಇದೆ. ಮತ್ತೊಬ್ಬ ನಾಯಕಿ ಅದಿತಿ, ‘ಮೊದಲು ಪ್ರಚಾರಕ್ಕೆ ಹೊರಟಾಗ ಭಯ ಇತ್ತು. ಆದರೆ ಜನರ ಪ್ರತಿಕ್ರಿಯೆ ನೋಡಿ ಆ ಭಯ ಮಾಯವಾಯಿತು’ ಎಂದರು. ‘ನಿರ್ದೇಶಕರು ಮೊದಲು ಕಥೆ ಹೇಳಿದಾಗ ಒಂದು ರೀತಿ ಇತ್ತು. ಆದರೆ ಸಂಕಲನದ ಮೇಜಿಗೆ ಬರುವ ಹೊತ್ತಿಗೆ ಅದರ ಗುಣಮಟ್ಟ ಇನ್ನೂ ಚೆನ್ನಾಗಿತ್ತು’ ಎಂದರು ಸಂಕಲನಕಾರ ಶ್ರೀಕಾಂತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.